ಆಚಾರ್ಯ ಶ್ರೀ ಶಂಕರ ಟೀಸರ್ ರಿಲೀಸ್

ಆಚಾರ್ಯ ಶ್ರೀ ಶಂಕರ ಚಿತ್ರವು ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಯಲ್ಲಿ ತೆರೆ ಕಾಣಲಿದ್ದು, ಚಿತ್ರದ ಟೀಸರ್ ಮತ್ತು ಆಡಿಯೋವನ್ನು ನಿವೃತ್ತ ಐ ಪಿ ಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಬಿಡುಗಡೆಗೊಳಿಸಿದ್ದಾರೆ.

ರಾಜಾ ರವಿಶಂಕರ್ ರಚನೆ ಮತ್ತು ನಿರ್ದೇಶನ ನಿರ್ವಹಿಸಿರುವ ಈ ಚಿತ್ರದಲ್ಲಿ ಶಂಕರಾಚಾರ್ಯನಾಗಿ ನವ ಪ್ರತಿಭೆ ರವೀಂದ್ರ ಭಾಗವತ್ ನಟಿಸಿದ್ದಾರೆ. ಪೌರೋಹಿತ್ಯ ಮಾಡಿಕೊಂಡಿದ್ದ ತಮಗೆ ಇದು ಮೊದಲ ಅನುಭವ.‌ ಈ‌ ಪಾತ್ರ ಮಾಡಲು ಸಾಧ್ಯವಾಗಿದ್ದು ಪೂರ್ವಜನ್ಮದ‌ ಪುಣ್ಯ ಎಂದರು.

ಖ್ಯಾತ ನಟಿ ವಿನಯಾ ಪ್ರಕಾಶ್ ದೇವಿಯ ಪಾತ್ರದಲ್ಲಿ ಕಾಣಿಸಿರುವ ಈ‌ ಚಿತ್ರದಲ್ಲಿ ವಿನಯಾ ಪ್ರಸಾದ್ ಪುತ್ರಿ ಹಾಗೂ ಜನಪ್ರಿಯ ನಟಿ ಪ್ರಥಮಾ ಪ್ರಸಾದ್ ಕೂಡ ಒಂದು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ‌. ಈ ಚಿತ್ರತಂಡದೊಂದಿಗಿನ ತಮ್ಮ ಅನುಭವ ಹಂಚಿಕೊಂಡ ಪ್ರಥಮಾ ಪ್ರಸಾದ್, “ಇಲ್ಲಿ ನಾನು ಶಂಕರಾಚಾರ್ಯನ ತಾಯಿಯಾಗಿ ನಟಿಸಿದ್ದೇನೆ. ಈ ಚಿತ್ರಕ್ಕಾಗಿ ನಾವೆಲ್ಲ ವರ್ಷದಿಂದ ತಪಸ್ಸು ಮಾಡಿದ್ದೇವೆ. ನಾನು ಇದುವರೆಗೆ ನಾಯಕಿಯಾಗಿ, ಖಳನಾಯಕಿಯಾಗಿಯೂ ನಟಿಸಿದ್ದೇನೆ. ಆದರೆ ಇಲ್ಲಿರುವ ಕನ್ನಡ, ಸಂಸ್ಕೃತ, ತೆಲುಗು ಭಾಷೆಯ‌ ಈ ಚಿತ್ರದಲ್ಲಿ ನನಗೆ ಕಲಿಯುವ ಅವಕಾಶ ಹೆಚ್ಚಿತ್ತು.‌ ಮುಖ್ಯವಾಗಿ ಸಂಸ್ಕೃತ ಮತ್ತು ತೆಲುಗು ಭಾಷೆಯಲ್ಲಿ ಯಾವ ಅಡೆತಡೆಗಳೂ ಇಲ್ಲದೆ ಸಂಭಾಷಣೆ ಹೇಳಬಲ್ಲೆ ಎಂದು ಅರ್ಥವಾಗಿದ್ದೇ ಈ ಚಿತ್ರದಲ್ಲಿ ನಟಿಸಿದ ಬಳಿಕ. ಸಾಮಾನ್ಯವಾಗಿ ನಾವು ಸಿನಿಮಾ ಕಮರ್ಷಿಯಲ್ ಆಗಿ ಹೇಗೆ ಓಡುತ್ತೆ ಅಂತಾನೇ ಯೋಚಿಸುತ್ತೇವೆ.‌ ಆದರೆ ಈ ಚಿತ್ರಕ್ಕೆ ಸಂಬಂಧಿಸಿದ ಹಾಗೆ ಇಂಥದೊಂದು ಪಾತ್ರ ಲಭಿಸಿದ್ದೇ ಮಹಾತೃಪ್ತಿ ತಂದುಕೊಟ್ಟಿದೆ. ಶಂಕರರ ತಾಯಿ ಆರ್ಯಾಂಬೆಯ ಪಾತ್ರವನ್ನು ನನಗೆ ಪರಿಕಲ್ಪನೆ ಮಾಡಿ ಕೊಟ್ಟಂಥ ಹಾಗೂ ನಾನಿದನ್ನು ನಿರ್ವಹಿಸಬಲ್ಲೆ ಎಂದು ನಂಬಿಕೆ ಇಟ್ಟಂಥ ರಾಜಾ ರವಿ ಸರ್ ಗೆ ಧನ್ಯವಾದ ಹೇಳಲೇಬೇಕು. ಮುಖ್ಯವಾಗಿ ಸಂಸ್ಕೃತ ಆಗಿರುವ ಕಾರಣ ನಾನೇ ಡಬ್ಬಿಂಗ್ ಮಾಡಬೇಕಾ ಎನ್ನುವ ಗೊಂದಲ ಕಾಡಿತ್ತು. ಯಾಕೆಂದರೆ ಒಬ್ಬ ದೈವೀಕ ಪುರುಷನ ಕಥೆಯನ್ನು ಚಿತ್ರ ಮಾಡುವಾಗ ಅದರಲ್ಲಿ ನನ್ನಿಂದಾಗಿ ತಪ್ಪಾಗಬಾರದು ಎನ್ನುವ ಎಚ್ಚರಿಕೆ ನನ್ನಲ್ಲಿತ್ತು. ಸಣ್ಣ ತಪ್ಪಾದರೂ ಕೂಡ ದೊಡ್ಡ ಮಿಸ್ಟೇಕ್ ಆಗಿ ಕಾಣಿಸಿಕೊಳ್ಳುತ್ತೆ. ಆದರೆ ಕೊನೆಗೂ ನಾನೇ ಡಬ್ಬಿಂಗ್ ಮಾಡಿದ್ದೇನೆ ಎನ್ನುವ ಖುಷಿಯೂ ಇದೆ. ತುಂಬ ಆತ್ಮಸ್ಥೈರ್ಯವನ್ನು ಕೊಟ್ಟಂಥ ಚಿತ್ರ ಇದು” ಎಂದರು.

“ಚಿತ್ರೀಕರಣದ ಸಮಯದಲ್ಲಿ ಕೆಲವೊಮ್ಮೆ ವಾತಾವರಣ ಸರಿ ಇರುತ್ತಿರಲಿಲ್ಲ. ತುಂಬಾ ಪ್ರಯಾಣ ಮಾಡಿ ಹೋಗಿರುತ್ತೇನೆ. ಆದರೆ ಅಂತಿಮವಾಗಿ ಒಳ್ಳೆಯ ಪಾತ್ರ, ಒಳ್ಳೆಯ ದೃಶ್ಯಗಳಲ್ಲಿ ಕಾಣಿಸಿಕೊಂಡ‌ ಸಂತೃಪ್ತಿ ಚಿತ್ರದಿಂದ ದೊರಕಿದೆ.‌ ಈ ಚಿತ್ರದಲ್ಲಿ ಬಾಲ‌ಶಂಕರನ ಪಾತ್ರದಲ್ಲಿ ನಿರ್ಮಾಪಕ ಶರ್ಮರವರ ಪುತ್ರ ಲಿಖಿತ್ ಶರ್ಮ ನಟಿಸಿದ್ದಾನೆ. ಸಹ‌ಕಲಾವಿದರಾಗಿ ಕಾಣಿಸಿರುವ ಷಣ್ಮುಖ‌ ಮತ್ತು ಪವನ್ ನನ್ನ ತಮ್ಮಂದಿರ ಹಾಗಿದ್ದರು. ಇಂಥ ಅವಕಾಶ ಸಿಗುವುದು ತುಂಬ ಅಪರೂಪ. ಮುಖ್ಯವಾಗಿ ನಮ್ಮ ಚಿತ್ರದ ಛಾಯಾಗ್ರಹಣ ತುಂಬ ಚೆನ್ನಾಗಿದೆ” ಎಂದು ಪ್ರಥಮಾ ಪ್ರಸಾದ್ ಖುಷಿ ಹಂಚಿಕೊಂಡರು.

ನಟ ಮೈಕೋ ಮಂಜು ತಮಗೆ ಶಿವನ ಮೂರು ಶೇಡ್ಸ್ ಇರುವ ಪಾತ್ರ ದೊರಕಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದರು.

ಈ ಚಿತ್ರ ಪೂರ್ತಿಗೊಳ್ಳಲು ಶೃಂಗೇರಿ ಮಠದ ಸಹಕಾರ ಪ್ರಮುಖವಾಗಿತ್ತು ಎಂದು ನಿರ್ಮಾಪಕ ವೈ ಎನ್ ಶರ್ಮ ಹೇಳಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್,
ಮಾಜಿ ಅಧ್ಯಕ್ಷ ಎಮ್ ಎನ್ ಸುರೇಶ್ ಉಪಸ್ಥಿತರಿದ್ದು ಶುಭ ಕೋರಿದರು.

Recommended For You

Leave a Reply

error: Content is protected !!