ಹೊಸಬರ ತಂಡದೊಂದಿಗೆ ಮರಳುತ್ತಿದ್ದಾರೆ ಸಂತೋಷ್ ಕೊಡೆಂಕಿರಿ

ನಿರ್ದೇಶಕ ಸಂತೋಷ್ ಕೊಡೆಂಕಿರಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ರವಿಕೆ ಪ್ರಸಂಗದ ಮೂಲಕ ಮಹಿಳೆಯರ ಭಾವನೆಗಳಿಗೆ ಪರದೆ ಮೂಲಕ ಜೀವ ನೀಡಿದ ಸಂತೋಷ್ ಈ ಬಾರಿ ಗಂಡು ಮೆಟ್ಟಿದ ನಾಡಿಗೆ ಕಾಲಿಟ್ಟಿದ್ದಾರೆ.

ಕನ್ನಡದ ಸೃಜನಶೀಲ‌ ನಿರ್ದೇಶಕರ ನಡುವೆ ಸಂತೋಷ್ ಕೊಡೆಂಕಿರಿ ಕೂಡ ಒಬ್ಬರು. ಹೀಗಾಗಿಯೇ ಟ್ರೆಂಡ್ ಹಿಂದೆ ಬಿದ್ದು ಚಿತ್ರ ಮಾಡುವುದಕ್ಕೆ ಇವರು ಆದ್ಯತೆ ನೀಡಿದವರಲ್ಲ. ಸಾಮಾಜಿಕವಾಗಿ ಹಾಸುಹೊಕ್ಕಾಗಿರುವ ಒಂದು ಸಬ್ಜೆಕ್ಟ್ ಆಯ್ದುಕೊಂಡು ಅದರ ಬಗ್ಗೆ ಆಳವಾದ ಅಧ್ಯಯನ ನಡೆಸಿ ಬಳಿಕ ಸಿನಿಮಾ‌ ಮಾಡಲು ಹೊರಡುತ್ತಾರೆ. ಈ ಬಾರಿ ಕೂಡ ಸಂತೋಷ್ ಜತೆಗೆ ಚಿತ್ರಕರ್ಮಿಯಾಗಿ ಪತ್ನಿ ಪಾವನಾ ಕೂಡ ಕೈ ಜೋಡಿಸಿದ್ದಾರೆ. ಉತ್ತರ ಕರ್ನಾಟಕದ ಸಾಮಾಜಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಒಂದು ಹಾಸ್ಯಾತ್ಮಕ ಚಿತ್ರ ನೀಡಲು ಸಜ್ಜಾಗಿದ್ದಾರೆ.

“ನಾವು ಫಾರ್ಮುಲಾಗಳ ಹಿಂದೆ ಹೋಗುವುದಿಲ್ಲ. ಪ್ರೇಕ್ಷಕರೊಂದಿಗೆ ಆಳವಾಗಿ ಬೆಸೆಯಬಲ್ಲಂಥ ಕಥೆಗಳನ್ನು ಪ್ರಾಮಾಣಿಕವಾಗಿ ಹೇಳಲು ಶಕ್ತಿ ಬೇಕಾಗುತ್ತದೆ. ಆ ಶಕ್ತಿ ನಮ್ಮಲ್ಲಿದೆ” ಎಂದು ಸಂತೋಷ್ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.

ಚಿತ್ರದ ಮೂಲಕ ಉತ್ತರ ಕರ್ನಾಟಕದ ಸಾಮಾಜಿಕತೆ, ಸಾಂಸ್ಕೃತಿಕತೆ ಮತ್ತು ನೈಜ ಬದುಕನ್ನು ತೆರೆದಿಡಬೇಕು ಎನ್ನುವ ಪ್ರಯತ್ನಕ್ಕೆ ಚಿತ್ರತಂಡ ಕೈ ಹಾಕಿದೆ. ನಿತ್ಯಜೀವನದಲ್ಲಿ ಕಾಣ ಸಿಗುವ ಮಂದಿಯೇ ಇಲ್ಲಿನ‌ ಪಾತ್ರಗಳಾಗಲಿದ್ದಾರೆ. ಒಳ್ಳೆಯ ಕಂಟೆಂಟ್ ಬಯಸುವ ಪ್ರೇಕ್ಷಕರನ್ನು, ಕೌಟುಂಬಿಕ ವರ್ಗವನ್ನು ಈ ಚಿತ್ರವು ಮತ್ತೆ ಚಿತ್ರಮಂದಿರಗಳಿಗೆ ಸೆಳೆಯಬಹುದು ಎನ್ನುವ ನಿರೀಕ್ಷೆ ತಂಡದ್ದಾಗಿದೆ.

ನಿರ್ಮಾಣ ಸಂಸ್ಥೆಯು ಉತ್ತರ ಕರ್ನಾಟಕದ ಸ್ಥಳೀಯ ಪ್ರತಿಭೆಗಳನ್ನೇ ಚಿತ್ರದಲ್ಲಿ ಬಳಸುವ ಉದ್ದೇಶ ಹೊಂದಿದೆ. ಅದೇ ಭಾಗದ ಹೊಸ ಮುಖಗಳು ಚಿತ್ರಕ್ಕೆ ನೈಜತೆ ಮತ್ತು ಹೊಸತನ ತುಂಬಲು ಸಹಕಾರಿಯಾಗುವ ನಂಬಿಕೆ ನಿರ್ದೇಶಕರದ್ದಾಗಿದೆ.

Recommended For You

Leave a Reply

error: Content is protected !!