ಮ್ಯಾಂಗೋ ಪಚ್ಚ: ರುಚಿಗೆ ತಕ್ಕಷ್ಟು ಉಪ್ಪಿನ ಕಾಯಿ

ಚಿತ್ರ: ಮ್ಯಾಂಗೊ ಪಚ್ಚ
ನಿರ್ದೇಶನ: ವಿವೇಕ
ನಿರ್ಮಾಣ: ಪ್ರಿಯಾ ಸುದೀಪ್, ಕಾರ್ತಿಕ್ ಮತ್ತು ಯೋಗಿ ಜಿ ರಾಜ್
ತಾರಾಗಣ: ಸಂಚಿತ್ ಸಂಜೀವ್, ಕಾಜಲ್ ಕುಂದರ್, ಮಯೂರ್ ಪಟೇಲ್, ಜೈ ಗೋಪಿನಾಥ್ ಮೊದಲಾದವರು.

ಮ್ಯಾಂಗೋ ಪಚ್ಚ ಅಂದರೇನು? ಬಹುಶಃ ಮಾವು ಮಾರಾಟಗಾರ ಪಚ್ಚ ಇರಬಹುದೇನೋ ಎನ್ನುವ ಸಂದೇಹ ಸಹಜ. ಅರ್ಧ ನಿಜವೂ ಹೌದು. ಆದರೆ ಮ್ಯಾಂಗೋ ಅಂದರೆ ಬರಿ ಮಾವಲ್ಲ. ಅದು ಪಚ್ಚ ಮಾರಾಟ ನಡೆಸುವ ಗಾಂಜಾ‌ದ ಬ್ರ್ಯಾಂಡ್. ಅಷ್ಟಕ್ಕೆ ಇದೊಂದು ಗಾಂಜಾ ಜಾಲದ ಕಥೆ ಎಂದು ಬ್ರ್ಯಾಂಡ್ ಮಾಡಬೇಕಿಲ್ಲ‌. ಇಲ್ಲಿ ಎಲ್ಲವೂ ಇವೆ. ಆದರೆ ಎಲ್ಲವೂ ಟ್ಯಾಬ್ಲೆಟ್ ರೂಪದಲ್ಲಿದೆ. ಹಾಗಾಗಿಯೇ ಚಿಕ್ಕದಾಗಿ ಚೊಕ್ಕದಾಗಿ ಉಪ್ಪಿನಕಾಯಿಯಂತಿದೆ ಈ ಚಿತ್ರ.

ನಾವೆಲ್ಲ ಮೈಸೂರು ಮಲ್ಲಿಗೆ ಬಗ್ಗೆ ಕೇಳಿದ್ದೇವೆ. ಆದರೆ ಅಲ್ಲೊಂದು ಚೆಂಡುಹೂಗಳ ತೋಟ.‌ ಅದರಲ್ಲೇ ಪೊಲೀಸರ ಕಿವಿಗೂ ಚೆಂಡು ಹೂ ಇಡುವ ಆಟ. ಯಾಕೆಂದರೆ ತೋಟದ ಮಧ್ಯೆ ಹುಲುಸಾಗಿರುವ ಗಾಂಜಾ ಗಿಡಗಳು. ಈ ತೋಟದ ನಿರ್ವಹಣೆ ಪಚ್ಚನದ್ದು. ಆತನಿಗೆ ಇಂಥದೊಂದು ಕಸುಬು ತಂದೆಯಿಂದ ಬಂದ ಬಳುವಳಿ. ಇಷ್ಟಕ್ಕೂ ಆ ತಂದೆ ಎನಿಸಿದಾತ ಇಟ್ಟುಕೊಂಡವಳ ಪುತ್ರನೇ ಪಚ್ಚ.

ಪ್ರಶಾಂತ ಎನ್ನುವುದು ಪಚ್ಚನ ನಿಜವಾದ ಹೆಸರು. ಆದರೆ ಆ ಪ್ರಶಾಂತತೆಯನ್ನೇ ಕಾಣದ ಬಾಳು ಆತನದ್ದು. ತಂದೆಯ ನೆರವಿಲ್ಲದ ಬದುಕು. ಅಕ್ರಮ ಸಂತಾನದಂತಿರುವ ತನಗೆ ಹಾಗೂ ತಮ್ಮನ ಬೆಳವಣಿಗೆಗೆ ಡಿವಿಡಿ ಅಂಗಡಿಯಲ್ಲಿ ಪೈರಸಿ‌ ಮಾಡಿಯಾದರೂ ಗೆಲುವು ಕಾಣುವ ಛಲ. ಅಂಥವನ ಅಂಗಳಕ್ಕೆ ಬಂದು ಸೇರುವುದೇ ಗಾಂಜಾ ದಂಧೆಯ ಜಾಲ. ದಂಧೆಗೆ ತಾನೇ ತಂದೆಯಾಗಬೇಕು ಎಂದು ಹೊರಟಾಗ ಸೃಷ್ಟಿಯಾಗುವುದೇ ಮ್ಯಾಂಗೋ ತಳಿ. ಅದನ್ನು ಬೆಳೆಸಿದ ಪಚ್ಚ ಉಳಿಯುತ್ತಾನ? ಅಳಿಯುತ್ತಾನ ಎನ್ನುವುದು ಚಿತ್ರದ ಕಥೆ.

ಸಂಚಿತ್ ನಟನೆಯನ್ನು ಗಮನಿಸಿದರೆ ಇದು ಮೊದಲ‌ ಚಿತ್ರ ಎಂದು ಅನಿಸುವುದೇ ಇಲ್ಲ. ಸುದೀಪ್ ಸಂಬಂಧಿ ಎನ್ನುವುದು ಈ ಹುಡುಗನ ಪಾಲಿಗೆ ಹೊರೆಯಾಗಿಲ್ಲ! ವರವಾಗಿದೆ. ಯಾಕೆಂದರೆ ಸುದೀಪ್ ಮಾದರಿ ಕಂಠ ಪಾತ್ರಕ್ಕೆ ಗಾಂಭೀರ್ಯತೆ ನೀಡಿದೆ. ನೋಟದಲ್ಲೂ‌ ಸುದೀಪ್ ಗಿಂತಲೂ ಸುಂದರನೇ. ಆರಡಿ ಮೈಕಟ್ಟು ಹೊಡೆದಾಟದಲ್ಲಿ ಸದ್ಬಳಕೆಯಾಗಿದೆ. ಅಲ್ಲಿಗೆ ಜ್ಯೂನಿಯರ್ ಕಿಚ್ಚ‌ ಎನ್ನುವ ಬಿರುದು ಸಾರ್ಥಕವಾಗಿದೆ. ಪಚ್ಚ ಜೈಲು ಸೇರಲು ಕಾರಣವಾಗುವ ಪ್ರಮುಖ ಅಪರಾಧದ ದೃಶ್ಯವೊಂದರಲ್ಲಿ ಸಂಚಿತ್ ನಟನೆಯಂತೂ ಅಮೋಘ.

ಟೀ ಅಂಗಡಿ ನಡೆಸುವ ಸುಜಿ ಮ್ಯಾಂಗೋ‌ ಪಚ್ಚನ ಜೋಡಿ. ತನ್ನ ಅರಳುಗಣ್ಣಿನ ಉತ್ಸಾಹ, ಚಾತುರ್ಯದ ಅಭಿನಯದಿಂದ ಸುಜಿಯಾಗಿ ಕಾಜಲ್ ಕುಂದರ್ ಮನಗೆಲ್ಲುತ್ತಾರೆ. ಪಚ್ಚನ ತಾಯಿಯಾಗಿ ಹರಿಣಿ ಶ್ರೀಕಾಂತ್ ನಟಿಸಿದ್ದಾರೆ. ಕಿರಿಯ ಪುತ್ರ ಮಂಜನಾಗಿ ಜೈ ಗೋಪಿನಾಥ್ ಸಿಕ್ಕ‌ ಅವಕಾಶವನ್ನು ಚೆನ್ನಾಗಿ ಬಳಸಿದ್ದಾರೆ. ಹರೆಯದ ಭಾವ ವೈವಿಧ್ಯಗಳನ್ನು ಸ್ಫುರಿಸಿದ್ದಾರೆ. ಹಿರಿಯಣ್ಣ ನಾಗಪ್ಪನಾಗಿ ಮಯೂರ್ ಪಟೇಲ್ ತಮ್ಮಲ್ಲಿನ ಕಲಾವಿದನನ್ನು ಒರೆಹಚ್ಚಿ ತೋರಿದ್ದಾರೆ. ಮೇಯರ್ ಮಹೇಂದ್ರನ ಪಾತ್ರದಲ್ಲಿ ಕಾಣಿಸಿರುವ ಪ್ರಶಾಂತ್ ಹಿರೇಮಠ ಭರವಸೆಯ ಖಳನಟ. ಭಾವನಾ ರಾಮಣ್ಣ, ಉಗ್ರಂ ಮಂಜು ಲುಕ್ ನಿಂದಲೇ ತಮ್ಮ ಪಾತ್ರಗಳಿಗೆ ಕಳೆ ನೀಡಿದ್ದಾರೆ. ಸಿದ್ದಾರ್ಥ್ ಮಾಧ್ಯಮಿಕ ಅವರ ಪೊಲೀಸ್ ಪಾತ್ರದ ನಿರ್ವಹಣೆ ಕೂಡ ಗಮನಾರ್ಹ.

ನಿರ್ದೇಶಕ ವಿವೇಕ ಅವರು ಸೂರಿ ಗರಡಿಯಿಂದ ಬಂದಂತೆ ಕಾಣಿಸುತ್ತಾರೆ. ತಮ್ಮದೇ ಸೆನ್ಸಿಬಲ್ ಸಂಭಾಷಣೆಗಳಿಂದ ದೃಶ್ಯಗಳನ್ನು ವೇಗವಾಗಿ ಪೋಣಿಸುತ್ತಾರೆ. ಶೇಖರ್ ಚಂದ್ರ ಛಾಯಾಗ್ರಹಣ ಮತ್ತು ಶರತ್ ವಿ ವಸಿಷ್ಠ ಸಂಕಲನ ಅದಕ್ಕೆ ಪೂರಕವಾಗಿದೆ. ಬಂಡವಾಳಕ್ಕೆ ಹೊಂದಿಕೊಂಡ ಕಲಾನಿರ್ದೇಶನ ಮತ್ತು ಕಲಾವಿದರ ವಸ್ತ್ರವಿನ್ಯಾಸಕ್ಕೂ ಪ್ರಶಂಸೆ ಸಲ್ಲಬೇಕು. ಚರಣ್ ರಾಜ್ ಹಿನ್ನೆಲೆ ಸಂಗೀತವೂ ಸೇರಿದಾಗ ಮ್ಯಾಂಗೋ ಪಚ್ಚ ಒಂದು ಉಪ್ಪಿನ ಕಾಯಿಯ ರುಚಿಯನ್ನು ನೀಡುತ್ತದೆ. ಹಾಡುಗಳಲ್ಲಿ ಸಾನ್ವಿ ಸುದೀಪ್ ಕಂಠವಿದೆ ಎನ್ನುವುದು ವಿಶೇಷ. ಚಿತ್ರದ ಕೊನೆಗೆ ಅತಿಥಿ ಪಾತ್ರದಲ್ಲಿ ಡಾಲಿ ಧನಂಜಯ್ ಬರುತ್ತಾರೆ ಎನ್ನುವುದು ಬಲು ವಿಶೇಷ.

1985ರಲ್ಲಿ ನಡೆದ ಗಾಂಜಾ ನಿಷೇಧದ ಸಂತ್ರಸ್ತೆ ಪಚ್ಚನ ತಾಯಿ! ಹಾಗಂತ ತೋರಿಸಿರುವ ದೃಶ್ಯ ಅಷ್ಟೇನೂ ವರ್ಕೌಟ್ ಆದ ಹಾಗಿಲ್ಲ. ಆದರೆ ತನ್ನಲ್ಲಿ ಏನೋ ಒಂದು ಪ್ರತಿಭೆ ಇರುವುದು ಸತ್ಯ ಎಂದು ನಿರ್ದೇಶಕರು ಸಾಬೀತು ಮಾಡಿದ್ದಾರೆ.

ಚಿತ್ರಕ್ಕೆ ಎ ಸರ್ಟಿಫಿಕೇಟ್ ಇದೆ. ಅಪರಾಧದ ವಿಜೃಂಭಣೆಗಿಂತಲೂ ಕಹಿ ವಾಸ್ತವವನ್ನು ಕೂಡ ತೋರಿಸಲಾಗಿರುವುದು ಪ್ರಶಂಸಾರ್ಹ. ನಿಜ ಜೀವನದಲ್ಲಿ ರೌಡಿಸಂಗೆ ಅಂಟಿಕೊಂಡ ದಂಧೆಗಳು ಸಜ್ಜನರ ಭೋಜನದಲ್ಲಿ ಇತರರ ಎಲೆಯ ಉಪ್ಪಿನಕಾಯಿ ಅಷ್ಟೇ.‌

ಶಶಿಕರ ಪಾತೂರು

Recommended For You

Leave a Reply

error: Content is protected !!