ವಿನೋದ್ ಪ್ರಭಾಕರ್ ಪಕ್ಕಾ ಎಂಬತ್ತರ ದಶಕದ ಯುವಕ ನಾಗಿದ್ದಾರೆ. ನಟನೆಯಲ್ಲಿ ಇನ್ನಷ್ಟು ಮಾಗಿದ್ದಾರೆ. ಹಾಗಂತ ತೋರಿಸಿರುವುದು ‘ಬಲರಾಮನ ದಿನಗಳು’ ಚಿತ್ರದ ಟೀಸರ್.
ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ ವಿನೋದ್ ಪ್ರಭಾಕರ್ “ಒಂದು ಸಿನಿಮಾ ಚೆನ್ನಾಗಿದ್ದರೆ ಜನ ಹೇಗಾದರೂ ಥಿಯೇಟರ್ ಗೆ ಬರುತ್ತಾರೆ ಎನ್ನುವುದಕ್ಕೆ ನನ್ನದೇ ನಟನೆಯ ‘ಮಾದೇಶ’ ದೊಡ್ಡ ಉದಾಹರಣೆ ಅಗಿತ್ತು. ಇದೀಗ ಅದರ ದುಪ್ಪಟ್ಟು ಯಶಸ್ಸು ಗಳಿಸುವ ಚಿತ್ರವಾಗಿ ‘ಬಲರಾಮನ ದಿನಗಳು’ ಮೂಡಿ ಬರುವ ಬಗ್ಗೆ ನನಗೆ ಯಾವುದೇ ಸಂದೇಹ ಇಲ್ಲ” ಎಂದು ಭರವಸೆ ವ್ಯಕ್ತಪಡಿಸಿದರು.
ನಿರ್ದೇಶಕ ಕೆ.ಎಮ್ ಚೈತನ್ಯ ತಮ್ಮ ನಿರ್ದೇಶನದ ತಂಡವನ್ನು ವೇದಿಕೆ ಗೆ ಕರೆದು ಪರಿಚಯಿಸಿದರು. ಆ ದಿನಗಳು ಮಾದರಿಯ ಮತ್ತೊಂದು ಚಿತ್ರ ಮಾಡಲು ನಿರ್ಮಾಪಕರು ಬಯಸಿದಾಗ ಈ ಕಥೆ ಸೃಷ್ಟಿ ಮಾಡಿದ್ದಾಗಿ ಹೇಳಿದರು.
ನಿರ್ಮಾಪಕಿ ಪದ್ಮಾವತಿ ಪೂರ್ತಿ ಚಿತ್ರ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ ಮಗ ಶ್ರೇಯಸ್ ಮತ್ತು ಆತನಿಗೆ ನವವಧುವಾಗಿ ಬಂದು ಚಿತ್ರೀಕರಣದಲ್ಲಿ ಸಹಕಾರ ನೀಡಿದ
ತಮ್ಮ ಸೊಸೆಗೂ ಧನ್ಯವಾದ ಸಲ್ಲಿಸಿದರು.
ಮೋನಪ್ಪ ರೈ ಪಾತ್ರಧಾರಿ ರಮೇಶ್ ಇಂದಿರಾ ನಿರ್ದೇಶಕ ಚೈತನ್ಯರನ್ನು ‘ಸ್ವೀಟ್’ ಎಂದರು. ಬಿಗ್ ಬಾಸ್ ಖ್ಯಾತಿಯ
ವಿನಯ್ ಗೌಡ ತಮ್ಮದು ಕತ್ತಿ ಎನ್ನುವ ರೌಡಿಯಪಾತ್ರ ಎಂದರು. ತಮಗೆ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ನೀಡಿದ್ದಕ್ಕಾಗಿ ಡ್ರ್ಯಾಗನ್ ಮಂಜು ನಿರ್ದೇಶಕರಿಗೆ ವಂದನೆ ಹೇಳಿದರು. ಬಿಗ್ ಬಾಸ್ ಖ್ಯಾತಿಯ ರಜತ್, ಕಡ್ಡಿ ವಿಶ್ವ ಮತ್ತು ನವ ನಟ ಶ್ರೀನಿವಾಸ್ ಉಪಸ್ಥಿತರಿದ್ದರು.
ಪೊಲೀಸ್ ಪಾತ್ರಗಳನ್ನು ನಿಭಾಯಿಸಿರುವ ಪ್ರತಾಪ್ ನಾರಾಯಣ್ ಮತ್ತು ಅಶ್ವಿನ್ ಹಾಸನ್ ಹಾಗೂ
ಚಿತ್ರಕ್ಕೆ ಹಾಡುಗಳನ್ನು ಬರೆದಿರುವ ಕವಿರಾಜ್, ನಾಗಾರ್ಜುನ ಶರ್ಮ ಮತ್ತು ಪ್ರಮೋದ್ ಮರವಂತೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
‘ಸಿಂಗ್ಲಿ ಗ್ಯಾಂಗ್’ ವೇದಿಕೆಯೇರಿ ಸಿಂಗ್ಲಿ ಪಾತ್ರಧಾರಿ ಆದಿತ್ಯ ಮತ್ತು ತೇಜಸ್ ಹಾಗು ತಂಡದವರು ಮಾತನಾಡಿ ಸಂಭ್ರಮ ವ್ಯಕ್ತಪಡಿಸಿದರು.ವಿನೋದ್ ಪ್ರಭಾಕರ್ ಮತ್ತು ಸಂಜನಾ ಆನಂದ್ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಮೊದಲಾದವರ ಕೂಡ ನಟಿಸಿದ್ದಾರೆ.
