ಒಟಿಟಿಗಳಲ್ಲಿ ಅನಧಿಕೃತ ಸಿನಿಮಾ ಪ್ರದರ್ಶನಕ್ಕೆ ತಡೆಯಾಜ್ಞೆ

“ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾರೆಲ್ಲ ಕಾನೂನು ಬಾಹಿರವಾಗಿ ಸಿನಿಮಾ ಪ್ರದರ್ಶಿಸುತ್ತಿದ್ದಾರೆಯೋ ಅವರೆಲ್ಲರಿಗೂ ಕೋರ್ಟ್ ನಿಂದ ಸ್ಟೇ ತರಲಾಗಿದೆ ಎಂದು ಹಿರಿಯ ನಿರ್ಮಾಪಕ, ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು. ಈ ಮೂಲಕ ನಾವು ಹಕ್ಕು ಸಾಧಿಸುವ ಪ್ರಯತ್ನ ಅಥವಾ ನಮ್ಮ ಗೆಲುವು ತೋರಿಸುವ ಪ್ರಯತ್ನ ನಡೆಸುವುದಲ್ಲ. ನಮಗೆ ಸಲ್ಲಬೇಕಾದ ನ್ಯಾಯದ ಬಗ್ಗೆ ಗಮನ ಸೆಳೆದಿದ್ದೇವೆ ಅಷ್ಟೇ” ಎಂದರು. ಅವರು ವಾಣಿಜ್ಯ ಮಂಡಳಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಕೊರೊನಾ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಚಿತ್ರರಂಗ ಕೂಡ ಸಂಕಷ್ಟದಲ್ಲಿದೆ. ಸಿನಿಮಾ ನಿರ್ಮಾಣ, ಪ್ರದರ್ಶನ ಯಾವುದೂ ನಡೆಯುತ್ತಿಲ್ಲ. ಇದೇ ಸಂದರ್ಭದಲ್ಲಿ ಒಳ್ಳೆಯ ಚಿತ್ರ ಮಾಡಿದ ನಿರ್ಮಾಪಕರ ಸಿನಿಮಾಗಳು ಅವರ ಅರಿವಿಲ್ಲದೆ ವಿವಿಧ ಮಾಧ್ಯಮಗಳಲ್ಲಿ ಪ್ರದರ್ಶನ ಕಾಣುತ್ತಿವೆ. ಪ್ರದರ್ಶಕರು ಅವುಗಳ ಲಾಭ ಪಡೆಯುತ್ತಿದ್ದಾರೆ. ಆದರೆ ತಮ್ಮಿಂದ ಸರಿಯಾದ ರೀತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಹಕ್ಕು ಪಡೆಯದೆ ನಡೆಸುತ್ತಿರುವ ಈ ದಂಧೆಯಿಂದ ನಿಜಕ್ಕೂ ನಿರ್ಮಾಪಕರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎನ್ನುವುದು ಕನ್ನಡದ ನಿರ್ಮಾಪಕರೆಲ್ಲರ ಅಭಿಮತ. ಆ ನಿಟ್ಟಿನಲ್ಲಿ ನ್ಯಾಯಾಲಯದ ಮೆಟ್ಟಿಲೇರಿರುವ ನಿರ್ಮಾಪಕರು ಅಂಥ ಪ್ರದರ್ಶನಗಳಿಗೆ ತಡೆಯಾಜ್ಞೆ ತರುವಲ್ಲಿ ಗೆದ್ದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಹಾಗೂ ನಿರ್ಮಾಪಕರಾದ ಎನ್ ಎಂ ಸುರೇಶ್, “ಇಂಥದೊಂದು ಐತಿಹಾಸಿಕ ತೀರ್ಪಿಗೆ ಕಾರಣರಾದ ಲಾಯರ್ ಧನಂಜಯ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ” ತಿಳಿಸಿದರು. ಕೆಲವೊಂದು ಟಿವಿ ವಾಹಿನಿಗಳಿಗೆ ಸಿನಿಮಾ ಪ್ರದರ್ಶನದ ಸ್ಯಾಟಲೈಟ್ ರೈಟ್ ಮಾತ್ರ ಕೊಟ್ಟಿದ್ದೇವೆ. ಆದರೆ ಅವರು ಸ್ಯಾಟಲೈಟ್ ಮಾತ್ರವಲ್ಲದೆ ತಮ್ಮ ಅಧೀನದಲ್ಲಿರುವ ಒಟಿಟಿ ಮತ್ತು ಇತರ ವಿವಿಧ ವಿಭಾಗಗಳಲ್ಲಿ ಬಳಸಿಕೊಂಡಿದ್ದಾರೆ. ಬೇರೆ ಸಂಸ್ಥೆಗಳಿಗೆ ಮಾರಾಟ ಮಾಡಿದ ಘಟನೆಯೂ ನಡೆದಿದೆ. ಆದರೆ ಹಾಗೆ ಮಾಡುವುದಾದರೆ ಅಲ್ಲಿ ಕೂಡ ನಿರ್ಮಾಪಕರಿಗೆ ಲಾಭದ ಪಾಲು ಸಂದಾಯವಾಗಬೇಕಿದೆ. ಇದನ್ನು ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಈ ಹೋರಾಟಕ್ಕೆ ನಿರ್ಮಾಪಕ ಬಿ ಆರ್ ಕೇಶವ್ ಅವರು ಆರಂಭ ಕೊಟ್ಟಿದ್ದಕ್ಕಾಗಿ ಅಭಿನಂದನಾರ್ಹರು ಎಂದರು.

ವಕೀಲರಾದ ಧನಂಜಯ್ ಮಾತನಾಡಿ, “ಪ್ರಸ್ತುತ ಸುಮಾರು 35ರಷ್ಟು ಸಂಸ್ಥೆಗಳು, ನಿರ್ಮಾಪಕರ ಅನುಮತಿ ಪಡೆಯದೆ ಪ್ರಸಾರ ಮಾಡುವುದನ್ನು ತಿಳಿದಿದ್ದೇವೆ. ಬಹುತೇಕ ಹಳೆಯ ಸಿನಿಮಾಗಳ ರೈಟ್ಸ್ ನೀಡುವ ಸಂದರ್ಭದಲ್ಲಿ ಒಟಿಟಿ ಫ್ಲಾಟ್ಫಾರ್ಮ್ ಗಳೇ ಇರಲಿಲ್ಲ. ಆದರೆ ಈಗ ಅವುಗಳ ನೇರ ಲಾಭವನ್ನು ಆ ಸಿನಿಮಾಗಳಿಂದ ಪಡೆಯಲಾಗುತ್ತಿದೆ. ಆದರೆ ಅದರಲ್ಲಿ ಲಾಭದ ಸ್ವಲ್ಪ ಭಾಗವನ್ನಾದರೂ ನಿರ್ಮಾಪಕರಿಗೆ ನೀಡಲೇಬೇಕು. ಇನ್ನು ಮುಂದೆ ನೀಡಿಲ್ಲವಾದರೆ ಅದು ಕಂಟೆಪ್ಟ್ ಆಫ್ ಕೋರ್ಟ್ ಆಗಲಿದ್ದು. ಸೈಬರ್ ಕ್ರೈಮ್ ವಿಭಾಗದಲ್ಲಿ ದೂರು ನೀಡಲಾಗುತ್ತದೆ” ಎಂದರು. ಮೊದಲು ಆ ಕಂಟೆಂಟ್ ರಿಮೂವ್ ಮಾಡಬೇಕು. ಇದುವರೆಗೆ ಬಳಸಿರುವುದಕ್ಕೆ ಫೈನ್ ಕಟ್ಟಬೇಕು.

ಸಾರಥಿ’,ಮಿಸ್ಟರ್ ಆಂಡ್ ಮಿಸ್ಸಸ್ ರಾಮಾಚಾರಿ’ ಮೊದಲಾದ ಚಿತ್ರಗಳ ಹಕ್ಕುಗಳನ್ನು ಯೂಟ್ಯೂಬ್ ಗೆ ನೀಡಿಲ್ಲವಾದರೂ ಅವುಗಳು ಅಲ್ಲಿ ಕೋಟಿಗಟ್ಟಲೆ ವ್ಯೂವ್ಸ್ ಪಡೆದುಕೊಂಡಿವೆ. ಮಾತನಾಡಿ, ಅವರು ಫಯನ್ ಕಟ್ಟುವುದೋ, ನಿರ್ಮಾಪಕರಿಂದ ಹಕ್ಕು ಪಡೆದುಕೊಳ್ಳುವುದೋ ಅಥವಾ ವಾಣಿಜ್ಯ ಮಂಡಳಿಯ ಮೂಲಕ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ಒಂದುವೇಳೆ ಇದ್ಯಾವುದನ್ನು ಒಪ್ಪದಿದ್ದರೆ ಕೋರ್ಟ್ ಮೂಲಕವೇ ಅವರನ್ನು ಮತ್ತೆ ಎದುರಿಸಲು ಸಿದ್ಧವಾಗಿರುವುದಾಗಿ ಯುವ ನಿರ್ಮಾಪಕ ಅವಿನಾಶ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಮ್ತಾಜ್ ಚಿತ್ರದ ನಿರ್ಮಾಪಕರು, “ನನ್ನ ಸಿನಿಮಾದ ಯಾವುದೇ ಹಕ್ಕುಗಳನ್ನು ಇದುವರಗೆ ಯಾರಿಗೂ ನೀಡಿಲ್ಲ. ಆದರೆ ಚಿತ್ರ ನೇರವಾಗಿ ಒಟಿಟಿಯಲ್ಲಿ ಪ್ರದರ್ಶನ ಕಂಡಿದೆ. ಇದರ ವಿರುದ್ಧ ಕೂಡ ಕಾನೂನು ಸಮರ ನಡೆಸಲಿದ್ದೇನೆ” ಎಂದರು. ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ ರಾಮಕೃಷ್ಣ , ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಮತ್ತು ನಿರ್ಮಾಪಕರೂ ಆಗಿರುವ ಜಿಜೆ ಕೃಷ್ಣ, ಕೆ ಮಂಜು, ಕರಿಸುಬ್ಬು, ಉಮೇಶ್ ಬಣಕಾರ್ ಸೇರಿದಂತೆ ಒಂದಷ್ಟು ನಿರ್ಮಾಪಕರು ಉಪಸ್ಥಿತರಿದ್ದರು. ಇದು ದೇಶದ ಚಿತ್ರೋದ್ಯಮದಲ್ಲೇ ನಿರ್ಮಾಪಕರು ಎತ್ತಿರುವ ಪ್ರಥಮ ಕೂಗಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಭಾಷೆಯ ಚಿತ್ರ ನಿರ್ಮಾಪಕರು ಕೂಡ ತಮ್ಮ ಮಾದರಿಯನ್ನು ಅನುಸರಿಸುವ ಭರವಸೆ ಚಂದನವನದ ನಿರ್ಮಾಪಕರಲ್ಲಿದೆ. ಮಾಧ್ಯಮ ಗೋಷ್ಠಿಯ ಅಂತ್ಯದಲ್ಲಿ ವಕೀಲರಾದ ಧನಂಜಯ ಅವರನ್ನು ಸನ್ಮಾನಿಸುವ ಮೂಲಕ ನಿರ್ಮಾಪಕರ ಸಂಘ ತಮಗೆ ಸಂದಾಯವಾಗಿರುವ ಗೆಲುವಿಗೆ ಕೃತಜ್ಞತೆ ಸೂಚಿಸಿತು.

.

Recommended For You

Leave a Reply

error: Content is protected !!