ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡ ಕೆ ಆರ್ ಮುರಳಿ ಕೃಷ್ಣ (63) ನಿಧನರಾಗಿದ್ದಾರೆ. ಸೋಮವಾರ ರಾತ್ರಿ 8.30ಕ್ಕೆ ದುರ್ಘಟನೆ ಸಂಭವಿಸಿದೆ.
ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಮುರಳಿಕೃಷ್ಣರನ್ನು ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬ್ರೈನ್ ಟ್ಯೂಮರ್ ಆಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಆಪರೇಷನ್ ಮಾಡಲಾಗಿತ್ತು. ಆದರೆ ಆಪರೇಷನ್ ಬೆನ್ನಲ್ಲೇ ಎದುರಾದ ಹೃದಯಾಘಾತ ಮುರಳಿ ಕೃಷ್ಣರ ಜೀವವನ್ನು ಕಸಿದುಕೊಂಡಿದೆ.
ಮೂಲತಃ ಚಿಕ್ಕಬಳ್ಳಾಪುರದವರಾದ ಮುರಳಿಕೃಷ್ಣ ಚಿತ್ರರಂಗಕ್ಕೆ ಬಂದಿದ್ದು, ಬಳಿಕ ವಕೀಲರಾಗಿದ್ದು ಎಲ್ಲವೂ ಸಿನಿಮಾ ಕತೆಯಂತೆ ಇದೆ. ಮುರಳಿಯವರ ಅಣ್ಣ ಶಾಂತ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೆಸರು ಮಾಡಿದವರು. ಅವರ ನಿರ್ದೇಶನದಲ್ಲಿ ಮೂಡಿಬಂದ ‘ಬಾಳನೌಕೆ’ಗೆ ರಾಜ್ಯ ಪ್ರಶಸ್ತಿ ಲಭಿಸಿತ್ತು. ಚಿತ್ರವನ್ನು ಮುರಳಿಕೃಷ್ಣರವರೇ ನಿರ್ಮಿಸಿದ್ದರು.
ಶಾಂತ ಕುಮಾರ್ ನಿರ್ದೇಶಿಸಿ, ಅಂಬರೀಷ್ ನಟಿಸಿದ ಕರ್ಣನ ಸಂಪತ್ತು ಚಿತ್ರಕ್ಕೂ ನಿರ್ಮಾಪಕರಾಗಿದ್ದಿದ್ದು ಇದೇ ಮುರಳೀಕೃಷ್ಣ. ಆದರೆ ಅಣ್ಣನಿಗೆ ಮತ್ತು ತಮಗೆ ಚಿತ್ರರಂಗದ ಕೆಲವರಿಂದ ನಡೆಯುತ್ತಿರುವ ವಂಚನೆಯನ್ನು ಮನಗಂಡು ಅವರ ವಿರುದ್ಧ ಕಾನೂನು ಹೋರಾಟಕ್ಕೆ ನಿಂತರು. ಅದಕ್ಕೆಂದೇ ಇಂಜನಿಯರಿಂಗ್ ವೃತ್ತಿ ಬಿಟ್ಟು ಕಾನೂನು ಕಲಿತರು. ಪ್ರಕರಣದಲ್ಲಿ ಗೆದ್ದು ಲಾಯರ್ ಆಗಿ ಹೆಸರು ಮಾಡಿದರು.
ಮುರಳಿಕೃಷ್ಣ ನಿರ್ದೇಶಕರಾಗಿ ರೀ ಎಂಟ್ರಿ ನೀಡಿದಾಗ ಮಾಡಿದಂಥ ಮೊದಲ ಚಿತ್ರವೇ ‘ಸಣ್ಣ ಸತ್ಯ’. ಅದು ಇನ್ನೂ ಬಿಡುಗಡೆಯಾಗಿಲ್ಲ. ಬಳಿಕ ಆರ್ ಕೆ ನಾರಾಯಣ್ ಅವರ ಆಸ್ಟ್ರಾಲಜರ್ಸ್ ಡೇ ಕತೆಯನ್ನು ಆಧಾರವಾಗಿಸಿ ಮಾಡಿದ ಸಿನಿಮಾ ಗರ. ಈ ಚಿತ್ರದಲ್ಲಿ ಹಲವಾರು ಹೊಸಬರಿಗೆ ಮತ್ತು ಪರಭಾಷೆಯ ಪ್ರತಿಭಾವಂತರಿಗೆ ಅವಕಾಶ ಮಾಡಿಕೊಟ್ಟು ಗುರುತಿಸಿಕೊಂಡಿದ್ದರು.
‘ಗರ’ದಲ್ಲಿ ಮಂಜುಳಾ ಗುರುರಾಜ್ ಪುತ್ರ ಸಾಗರ್ ಗುರುರಾಜ್ ಅವರನ್ನು ಸಂಗೀತ ನಿರ್ದೇಶಕರಾಗಿ ಪರಿಚಯಿಸಿದರು. ಟಿವಿ9 ವಾಹಿನಿಯ ಜನಪ್ರಿಯ ವಾರ್ತಾವಾಚಕ, ಬಿಗ್ ಬಾಸ್ ಖ್ಯಾತಿಯ ರಹಮಾನ್ ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿದರು. ಬಾಲಿವುಡ್ ನ ಜನಪ್ರಿಯ ಹಾಸ್ಯನಟ ಜಾನಿ ಲಿವರ್ ಅವರನ್ನು ಮೊದಲ ಬಾರಿಗೆ ಕನ್ನಡಕ್ಕೆ ಕರೆತಂದರು. ದೇವದಾಸ್ ಖ್ಯಾತಿಯ ಮಾರ್ ಡಾಲ ಹಾಡಿನ ನಿರ್ದೇಶಕಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಸರೋಜ್ ಖಾನ್ ಅವರನ್ನು ಇದೇ ಚಿತ್ರದ ಮೂಲಕ ಕನ್ನಡಕ್ಕೆ ಕರೆತಂದ ಕೀರ್ತಿಯೂ ಇವರದ್ದಾಗಿದೆ. ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆಲುವು ಕಾಣಲಿಲ್ಲ. ಮುರಳಿ ಕೃಷ್ಣ ಸದ್ಯದಲ್ಲೇ ತಮ್ಮ ಮೊದಲ ಚಿತ್ರವನ್ನು ಬಿಡುಗಡೆಗೊಳಿಸುವ ಪ್ರಯತ್ನದಲ್ಲಿದ್ದರು. ಆದರೆ ಅದಕ್ಕೆ ಸಮಯ ಅವರಿಗೆ ಅವಕಾಶ ನೀಡಲಿಲ್ಲ.
ಮುರಳಿಕೃಷ್ಣ ಕಳೆದ ವರ್ಷ ತಮ್ಮ ಆತ್ಮಕಥಾರೂಪವಾದ ‘ಬಣ್ಣದ ಕೋಟು ಕಪ್ಪಾದಾಗ’ ಎನ್ನುವ ಪುಸ್ತಕವನ್ನು ಬಿಡುಗಡೆಗೊಳಿಸಿದ್ದರು. ಮೃತರು ಪತ್ನಿ ಉಷಾ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.