ಕರ್ನಾಟಕದಿಂದ ಬಾಲಿವುಡ್ ತನಕ ತಮ್ಮ ಗಜಲ್ಸ್ ಮೂಲಕ ಸದ್ದು ಮಾಡಿದವರು ರಾಜ್ ಕಮಲ್ ಯಾನೇ ಕಲೀಮ್ ಪಾಷ. ಪ್ರಸ್ತುತ ಇವರು ಬೆಂಗಳೂರಲ್ಲಿ ‘ಚಿಟ್ಟಿ ಆಯೀ ಹೈ’ ಹೆಸರಲ್ಲಿ ಭರ್ಜರಿ ಗಜಲ್ ಕಾರ್ಯಕ್ರಮ ನಡೆಸಲು ಸಿದ್ಧರಾಗಿದ್ದಾರೆ.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ನಟಿ ಭವ್ಯಾ ಮಾತನಾಡಿ, “ಚಿಟ್ಟಿ ಆಯೀ ಹೈ..” ಎನ್ನುವ ಹೆಸರು ಕೇಳುವಾಗಲೇ ಚಿಟ್ಟಿ ಆಯಿಹೇ ಎನ್ನುವ ಹಾಡು ನೆನಪಾಯಿತು.ಲತಾ ಮಂಗೇಶ್ಕರ್ ಮಾತ್ರವಲ್ಲ, ಅವರ ಸಹೋದರಿಯರಾದ ಉಷಾ ಮತ್ತು ಆಶಾ ಬೋನ್ಸ್ಲೆ ಹಾಡುಗಳಿಗೂ ನಾನು ಅಭಿಮಾನಿ ಎಂದರು. ಹಾಗಾಗಿಯೇ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಎಂದರು.
ಸುದ್ದಿಗೋಷ್ಠಿಗೆ ಆಗಮಿಸಿದ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್, ಕಮಲ್ ರಾಜ್ ಅವರು ನನಗೆ ನಿರ್ಮಾಪಕರಾಗಿ ಪರಿಚಯವಾದವರು. ಈಗ ಗಜಲ್ ಕಾರ್ಯಕ್ರಮ ನಡೆಸುತ್ತಿರುವುದು ತಿಳಿದು ಖುಷಿಯಾಗಿದೆ. ಎರಡು ಲೈನ್ ಹಾಡಿ ವೈರಲ್ ಆಗುವ ಕಾಲದಲ್ಲಿ ಗಜಲ್ಸ್ ನಂಥವು ಹೃದಯಕ್ಕೆ ಹತ್ತಿರವಾಗುತ್ತವೆ ಎಂದರು.
ಗಜಲ್ಸ್ ಕಾರ್ಯಕ್ರಮದ ಹೈಲೈಟ್ಸ್ ಬಗ್ಗೆ ಕಮಲ್ ರಾಜ್ ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತಾ, ಈ ಕಾರ್ಯಕ್ರಮವನ್ನು ಲತಾ ಮಂಗೇಶ್ಕರ್ ಅವರಿಗೆ ಸಮರ್ಪಿಸಲಾಗುತ್ತಿದೆ. ಹಾಗಾಗಿಯೇ ಲತಾ ಮಂಗೇಶ್ಕರ್ ಅವರ ಕುಟುಂಬ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ ಎಂದರು. ಕಾರ್ಯಕ್ರಮ ಇದೇ ಸಪ್ಟೆಂಬರ್ 19ರಂದು ನೆರವೇರಲಿದೆ. ಬೆಂಗಳೂರು ವಸಂತ ನಗರದ ಅಂಬೇಡ್ಕರ್ ಸಭಾಭವನದಲ್ಲಿ ಸಂಜೆ 7ರಿಂದ ಈ ಸಮಾರಂಭ ಶುರುವಾಗಲಿದೆ.1940ರ ಖ್ಯಾತ ಗಜಲ್ ಗಾಯಕರಿಂದ ಆರಂಭಿಸಿ, ಪಂಕಜ್ ಉದಾಸ್ ವರೆಗಿನ ಎಲ್ಲ ಲೆಜೆಂಡ್ರಿ ಗಜಲ್ಸ್ ಗಾಯಕರಿಗೆ ಗಾನ ಸಮರ್ಪಣೆ ನಡೆಸಲಿದ್ದೇವೆ. ಈ ಹಿಂದೆ ಪುಣೆಯಲ್ಲಿ ಇಂಥದೇ ಕಾರ್ಯಕ್ರಮ ನಡೆಸಿದಾಗ ಅಲ್ಲಿ ತಮಗೆ ‘ಮಹಾರಾಷ್ಟ್ರ ಸನ್ಮಾನ’ ಪ್ರಶಸ್ತಿ ನೀಡಿ ಗೌರವಿಸಿದ್ದರು ಎಂದು ಕಮಲ್ ರಾಜ್ ಹೇಳಿಕೊಂಡರು. ಮುಂದಿನ ಕಾರ್ಯಕ್ರಮವನ್ನು ಹೈದರಾಬಾದ್ ನ ಖ್ಯಾತ ನಿರ್ಮಾಪಕ ದಿಲ್ ರಾಜ್ಪ್ರಾ ಯೋಜಿಸುತ್ತಿರುವುದಾಗಿ ತಿಳಿಸಿದರು.
ಬೆಂಗಳೂರಿನ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್ ಅವರೊಂದಿಗೆ ಹಾಡಿದ ಖ್ಯಾತ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಗಜಲ್ ಕಾರ್ಯಕ್ರಮ ಎರಡು ಗಂಟೆಗಳ ಕಾಲ ಪ್ರದರ್ಶನಗೊಳ್ಳಲಿದೆ. ಕನ್ನಡದಿಂದ ಬಿಗ್ ಬಾಸ್ ವಿಜೇತ ಹನುಮಂತಸೇರಿದಂತೆ ಇಬ್ಬರು ಗಾಯಕರು ಪಾಲ್ಗೊಳ್ಳಲಿದ್ದಾರೆ. ಕನ್ನಡದಿಂದ ಡಾ.ರಾಜ್ ಕುಮಾರ್ ಅವರ ಸಿನಿಮಾದಲ್ಲಿನ ಗಜಲ್ ಮಾದರಿಯ ಹಾಡುಗಳನ್ನು ಕೂಡ ಈ ಸಂದರ್ಭದಲ್ಲಿ ಬಳಸಿಕೊಳ್ಳಲಾಗ್ತಿದೆ ಎಂದರು. ಇಪ್ಪತ್ತು ಶತಮಾನದಷ್ಟು ಕನ್ನಡದ ಹಾಡುಗಳೇ ಇರಲಿವೆ. 500 ರೂಪಾಯಿಗಳಿಂದ 2000 ರೂಪಾಯಿ ತನಕ ಟಿಕೆಟ್ ಮೊತ್ತ ಇದೆ. ಈಗಾಗಲೇ ಆನ್ಲೈನ್ ಮೂಲಕ ಅರ್ಧದಷ್ಟು ಟಿಕೆಟ್ ಮಾರಾಟವಾಗಿರುವುದಾಗಿ ಕಮಲ್ ರಾಜ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಡ್ರೆಸ್ ಡಿಸೈನರ್ ಆಗಿದ್ದಂಥ ಅಸ್ಲಾಮ್ ಖಾನ್ ಆಗಮಿಸಲಿದ್ದು, ತಮ್ಮ ಪ್ರಾಡಕ್ಟ್ ಗಳನ್ನು ಲೈವ್ ಫ್ಯಾಷನ್ ಮೂಲಕ ತೋರಿಸಲಿದ್ದಾರೆ ಎಂದರು. ಇಲ್ಲಿಂದ ಆರಂಭಿಸಿ ಕೊಚ್ಚಿ, ಚೆನ್ನೈ ಹೀಗೆ ಮುಂದುವರಿಸುವ ಯೋಜನೆ ಹಾಕಿದ್ದೇವೆ. ಕರ್ನಾಟಕದಲ್ಲಿ ರಾಜ್ ಕುಮಾರ್ ಕುಟುಂಬ ನನಗೆ ನೀಡಿದ ಪ್ರೋತ್ಸಾಹದ ಕಾರಣ ಕನ್ನಡ ಚಿತ್ರರಂಗದಲ್ಲಿ ಕೂಡ ಗುರುತಿಸುವಂತಾಗಿದೆ ಎಂದರು. ಕಮಲ್ ಹಾಸನ್ ಮತ್ತು ಡಾ.ರಾಜ್ ಮೇಲಿನ ಅಭಿಮಾನದಿಂದಾಗಿಯೇ ತಾವು ಕಮಲ್ ರಾಜ್ ಎನ್ನುವ ಹೆಸರಿಟ್ಟುಕೊಂಡಿದ್ದಾಗಿಯೂ ತಿಳಿಸಿದರು.
ಸದ್ಯದಲ್ಲೇ ಕನ್ನಡದಲ್ಲಿ ತಮ್ಮ ನಟನೆ ‘ದಿ ಜೋಕರ್’ ಸಿನಿಮಾ ತೆರೆಗೆ ಬರಲಿದೆ ಎಂದ ಕಮಲ್ ರಾಜ್, ನಾನು ಖುದ್ದಾಗಿ ಸುಮಾರು ಗಜಲ್ಸ್ ಬರೆದಿದ್ದೇನೆ. ಸುಮಾರು 300 ಗಜಲ್ಸ್ ಆನ್ಲೈನಲ್ಲೇ ನೋಡಬಹುದು. 2010ರಲ್ಲಿ ನನ್ನ ಮೊದಲ ಪುಸ್ತಕ ‘ಜಿಂದಗಿ ಕೀ ದಾಸ್ತಾನ್’ ಅನ್ನು ಲತಾ ಮಂಗೇಶ್ಕರ್ ಅವರೇ ಬಿಡುಗಡೆಗೊಳಿಸಿದ್ದರು. ಅದರ ಬಳಿಕ ಸುಮಾರು 10ಸಾವಿರಕ್ಕೂ ಅಧಿಕ ಗಜಲ್ಸ್ ಬರೆದಿದ್ದೇನೆ. ಡಿಜಿಟಲ್ ಹಾಡುಗಳಿಂದ ಪ್ರೇಕ್ಷಕರನ್ನು ನೇರವಾಗಿ ತಲುಪಲು ಸಾಧ್ಯವಿಲ್ಲ. ಆದರೆ ಸಂಗೀತ ಸಂಜೆಗಳು ನೇರನೇರವಾಗಿ ಸಂವಹನಕ್ಕೆ ಸಹಕಾರಿಯಾಗುತ್ತದೆ ಎಂದರು. ಹಾಗಾಗಿ ತಮ್ಮ ಗಜಲ್ಸ್, ಸಿನಿಮಾ ಪಯಣ ಹೀಗೆಯೇ ಮುಂದುವರಿಯಲಿದೆ ಎಂದರು.
