ಶಿವಣ್ಣನ ಒರಿಜಿನಲ್ ಮೋನ್ಸ್ಟಾರ್ ಮುಹೂರ್ತ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಯಕರಾಗಿ ನಟಿಸುತ್ತಿರುವ, ಆರ್ ಚಂದ್ರು ನಿರ್ದೇಶನದ ‘ಒರಿಜಿನಲ್ ಮಾನ್ಸ್ಟಾರ್’ ಮುಹೂರ್ತ ಕೆಂಗೇರಿಯಲ್ಲಿರುವ ವಿಶಾಲವಾದ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಇತ್ತೀಚೆಗಷ್ಟೇ ಮುಂಬೈನಲ್ಲಿ ಟೈಟಲ್ ಲಾಂಚ್ ಮಾಡಿರುವಂಥ ಈ ಚಿತ್ರದ ವಿಶೇಷತೆಗಳನ್ನು ಶಿವಣ್ಣ ಮಾಧ್ಯಮದೊಂದಿಗೆ ಹಂಚಿಕೊಂಡರು.

ಶಿವರಾಜ್ ಕುಮಾರ್ ಅವರೊಂದಿಗೆ ಈ ಚಿತ್ರದಲ್ಲಿ ಖ್ಯಾತ ತೆಲುಗು ನಟ ಸುನೀಲ್ ಅವರು ನಟಿಸುತ್ತಿದ್ದಾರೆ. “ಇದು ನಾನು ಸುನೀಲ್ ಅವರೊಂದಿಗೆ ಮೊದಲ ಬಾರಿಗೆ ನಟಿಸುತ್ತಿರುವ ಚಿತ್ರ. ಕಾಮಿಡಿ ಮಾಡುತ್ತಿದ್ದವರು ಒಮ್ಮೆಲೆ ಸಿಕ್ಸ್ ಪ್ಯಾಕ್ ಮಾಡೋದು ಸುಲಭವಲ್ಲ. ಆದರೆ ಮರ್ಯಾದ ರಾಮನ್ನ ಚಿತ್ರದ ಮೂಲಕ ಅದನ್ನು ಸಾಬೀತು ಮಾಡಿದವರು ಇವರು. ಎಲ್ಲ ರೀತಿಯ ಪಾತ್ರಗಳನ್ನು ಮಾಡಬಲ್ಲ ಇವರಿಗೆ ಇಲ್ಲಿಯೂ ಒಂದೊಳ್ಳೆಯ ಪಾತ್ರವಿದೆ” ಎಂದು ಶಿವಣ್ಣ ಹೇಳಿದರು.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಶಿವಣ್ಣ, ಇತ್ತೀಚೆಗೆ ನನಗೆ ಚಿತ್ರದಿಂದ ಚಿತ್ರಕ್ಕೆ ವಿಭಿನ್ನವಾದ ಪಾತ್ರಗಳೇ ಲಭಿಸುತ್ತಿವೆ. ಆ ನಿಟ್ಟಿನಲ್ಲಿ ನೋಡಿದರೆ, ಒಂದು ಲಾಂಗ್ ಗ್ಯಾಪ್ ಬಳಿಕ ಮರಳಿದ್ದೇನೆ. ಇಲ್ಲಿ ಮಚ್ಚು, ರಕ್ತ ಎಲ್ಲವೂ ಇದೆ ಎಂದರು.‌

ನಟ ಸುನೀಲ್ ಮಾತನಾಡುತ್ತಾ, ನಾನು
ಚಿರಂಜೀವಿಯವರ ಅಭಿಮಾನಿ. ಅವರ ಡಾನ್ಸ್ ಗೆ ಅಭಿಮಾನಿಯಾಗಿ ಡಾನ್ಸ್ ಕಲಿತೆ. ಆಮೇಲೆ ಅವರೊಂದಿಗೆ ನಟಿಸುವ ಅವಕಾಶ ದೊರೆಯಿತು. ಅದೇ ರೀತಿ ಶಿವಣ್ಣನ ಓಂ ನೋಡಿ ತುಂಬ ಎಂಜಾಯ್ ಮಾಡಿದ್ದೇನೆ. ಈಗ ಅವರೊಂದಿಗೆ ನಟಿಸುತ್ತಿರುವುದುಕ್ಕೆ ಖುಷಿಯಾಗಿದೆ ಎಂದರು.

ಕಬ್ಜ ಚಿತ್ರದಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅನಿವಾರ್ಯ ಕಾರಣದಿಂದ ಕಬ್ಜ 2 ಚಿತ್ರ ಮಾಡಿಲ್ಲ. ಹಾಗಂತ ಇದಕ್ಕೂ ಕಬ್ಜಕ್ಕೂ ಸಂಬಂಧ ಇಲ್ಲ. ಇಲ್ಲಿ ಒಂದು ಯೂನಿವರ್ಸಲ್ ಎಮೋಶನ್ ಇದೆ. ಹಾಗಾಗಿ ಇದು ಇಂಡಿಯನ್ ಸಿನಿಮಾ. ಇಂದಿನ ಜನರೇಶನ್ ಗೆ ಶಿವಣ್ಣನ ಪಾತ್ರ ಒಳ್ಳೆಯ ಸಂದೇಶ ನೀಡಲಿದೆ ಎಂದು ನಿರ್ದೇಶಕ ಆರ್.ಚಂದ್ರು ಹೇಳಿದರು.

ಖ್ಯಾತ ನಿರ್ಮಾಪಕ ಉದಯ್ ಕೆ ಮೆಹ್ತಾ ಕ್ಲ್ಯಾಪ್ ಮಾಡಿದರು. ನಿರ್ದೇಶಕ ಚಂದ್ರು ಅವರ ಆಪ್ತರಾದ ಮಾಧವ ಕಿರಣ್, ಎಸ್.ಪಿ. ಅನಿತಾ ಮತ್ತು ಕಾರ್ಯಕ್ರಮ ನೆರವೇರಿದ ಮೈದಾನದ ಮಾಲೀಕ ಉದ್ಯಮಿ ಅಶೋಕ್ ಖೇಣಿ ಮೊದಲಾದವರು ಪಾಲ್ಗೊಂಡು ಚಿತ್ರಕ್ಕೆ ಶುಭ ಕೋರಿದರು.

Recommended For You

Leave a Reply