‘ಟಾಪ್ ಕ್ಲಾಸ್’ ಎನ್ನುವ ಹೆಸರು ಹೊಸದೇನೋ ನಿಜ. ಆದರೆ ಇದು ಒಟ್ಟು ದಕ್ಷಿಣ ಭಾರತೀಯರ ಮನೆ ಮನದ ಮನರಂಜನೆಯ ಹಿಂದಿರುವ ಶಕ್ತಿ. ‘ಟೆಲಿವಿಶನ್ ಅಂಡ್ ಒಟಿಟಿ ಪ್ರೊಡ್ಯೂಸರ್ ಕೌನ್ಸಿಲ್ ಆಫ್ ಸೌತ್’ ಇದರ ಹೃಸ್ವ ರೂಪವೇ ಟಾಪ್ ಕಾಸ್(TOPCOS). ಇದರ ಚಾಲನೆಯನ್ನು ಬೆಂಗಳೂರಿನಲ್ಲಿ ನೆರವೇರಿಸಲಾಯಿತು.
ಕರ್ನಾಟಕ ಟೆಲಿವಿಷನ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (KTPA) ವತಿಯಿಂದ ದಕ್ಷಿಣ ಭಾರತದ ಟೆಲಿವಿಷನ್ ಹಾಗೂ OTT ನಿರ್ಮಾಪಕರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ – ಅಧಿಕೃತ ಆರಂಭಕ್ಕೆ ಬೆಂಗಳೂರು ವೇದಿಕೆಯಾಯಿತು. ಈ ಸಂದರ್ಭದಲ್ಲಿ ಪ್ರಾಸ್ಥವಿಕಾ ಮಾತುಗಳನ್ನು ಆಡಿದ ಖ್ಯಾತ ಕಿರುತೆರೆ ನಿರ್ಮಾಪಕ, ನಿರ್ದೇಶಕ ಜಗದೀಶ್ ಅರೂರು ಕನ್ನಡ ಕಿರುತೆರೆ ಕುರಿತಾದ ಒಂದಷ್ಟು ಮುಖ್ಯ ವಿಚಾರಗಳನ್ನು ಹಂಚಿಕೊಂಡರು.
ನಿರ್ಮಾಪಕರಿಂದ ತಂತ್ರಜ್ಞರು ಮತ್ತು ಕಲಾವಿದರವರೆಗೆ ಉದ್ಯಮದ ಪ್ರತಿಯೊಂದು ಹಂತದಲ್ಲೂ ಉತ್ತಮ ಸಂವಹನ, ಸಮನ್ವಯ ಮತ್ತು ಪರಸ್ಪರ ಬೆಂಬಲವನ್ನು ನಿರ್ಮಿಸುವ ಮೂಲಕ ನಮ್ಮ ಕಥೆಗಳು ಇನ್ನಷ್ಟು ದೂರ ತಲುಪಬೇಕು ನಮ್ಮ ಪ್ರತಿಭೆಗಳು ಇನ್ನಷ್ಟು ದೊಡ್ಡ ವೇದಿಕೆಗಳನ್ನು ಕಾಣಬೇಕು ಮತ್ತು ನಮ್ಮ ಉದ್ಯಮ ಮುಂದಿನ ದಿನ ಪೀಳಿಗೆಗೆ ಇನ್ನಷ್ಟು ಬಲಿಷ್ಠವಾಗಿ ಸಾಗಬೇಕು ಎಂಬುದು TOPCOSನ ಆಶಯವಾಗಿದೆ ಎಂದು ಆರೂರು ಜಗದೀಶ್ ಸ್ಪಷ್ಟಪಡಿಸಿದರು.
ಆದರೆ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಿರ್ಮಾಣ ವೆಚ್ಚದ ಏರಿಕೆ, ಕಾರ್ಯಾಚರಣೆಯ ಸವಾಲುಗಳು, ಉದ್ಯಮದ ವಿವಿಧ ಹಂತಗಳಲ್ಲಿ ಎದುರಾಗುವ ಒತ್ತಡಗಳು ಇವುಗಳ ನಿರ್ಮಾಪಕರಿಗೆ ದಿನದಿಂದ ದಿನಕ್ಕೆ ಹೊಸ ಸವಾಲುಗಳನ್ನು ನೀಡಿವೆ. ಇಂತಹ ಸಂದರ್ಭದಲ್ಲಿ ಒಗ್ಗಟ್ಟಾಗಿ ಯೋಚಿಸಿ, ಎಲ್ಲ ನಿರ್ಮಾಪಕರು ಪರಸ್ಪರ ಸಹಕಾರ ಮತ್ತು ಸಮನ್ವಯದೊಂದಿಗೆ ಮುನ್ನಡೆಯಲು TOPCOS ಸಂಘಟನೆಯನ್ನು ರೂಪಿಸಲಾಗಿದೆ.
ತಮ್ಮ ಸುದೀರ್ಘವಾದ ವಿವರಣೆಯಲ್ಲಿ ಅವರು ‘ಟಾಪ್ ಕಾಸ್’ ನ ರೂಪುರೇಷೆ ಬಗ್ಗೆಯೂ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಅಂಧ್ರಪ್ರದೇಶದ ಟಿ.ವಿ ಹಾಗೂ OTT ನಿರ್ಮಾಪಕರನ್ನು ಒಂದೇ ವೇದಿಕೆಯಡಿ ಸಂಪರ್ಕಿಸುವ ಮೂಲಕ, ನಿರ್ಮಾಪಕರ ಹಿತಾಸಕ್ತಿ ಉದ್ಯಮದ ಬೆಳವಣಿಗೆ, ಸೃಜನಶೀಲತೆಗೆ ಉತ್ತಮ ವಾತಾವರಣ ಹಾಗೂ ಭವಿಷ್ಯದ ಅವಕಾಶಗಳನ್ನು ಬಲಪಡಿಸುವುದು TOPCOSನ ಪ್ರಮುಖ ಉದ್ದೇಶವಾಗಿದೆ.
ಇದು ಕೇವಲ ಒಂದು ಸಂಸ್ಥೆಯ ಆರಂಭವಲ್ಲ ದಕ್ಷಿಣ ಭಾರತದ ನಿರ್ಮಾಪಕರ ನಡುವೆ ಹೊಸ ಸಂಪರ್ಕ, ಹೊಸ ಸಹಕಾರ ಮತ್ತು ಹೊಸ ಸಾಧ್ಯತೆಗಳಿಗೆ ಬುನಾದಿ ಹಾಕುವ ಪ್ರಯತ್ನವಾಗಿದೆ ಎಂದು ನಿರ್ದೇಶಕ ಅರೂರು ಜಗದೀಶ್ ಹೇಳಿದರು.
ಕಿರುತೆರೆ ನಿರ್ಮಾಪಕರ ಸಂಘದ ಮೊದಲ ಸಂಘಟನೆ ಶುರುವಾಗಿದ್ದು ತೆಲುಗು ಭಾಷೆಯಲ್ಲಿ. ಹಾಗಾಗಿಯೇ ಹಿರಿತನ ಮತ್ತು ಅನುಭವವನ್ನು ಪರಿಗಣಿಸಿ ತೆಲುಗು ನಾಡಿನ ಎ. ಪ್ರಸಾದ್ ಅವರನ್ನು ಟಾಪ್ ಕಾಸ್ ನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ನಿರ್ಮಾಪಕ ಎ. ಪ್ರಸಾದ್ ಅವರು ಮಾತನಾಡಿ, ಕಳೆದ 15 ವರ್ಷದಿಂದ ತೆಲುಗು ಕಿರುತೆರೆ ನಿರ್ಮಾಪಕರು ಮತ್ತು ಒಟಿಟಿ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಸಂಘವನ್ನು ಬಲಿಷ್ಟಗೊಳಿಸಲಾಗಿದೆ. ಕರೊನಾ ಸಮಯಲ್ಲಿ 4.5 ಕೋಟಿ ರೂಪಾಯಿ ಹಣ ಸಂಗ್ರಹಿಸಿ ಕಾರ್ಮಿಕರು, ಕಲಾವಿದರಿಗೆ ಧವಸ ದಾನ್ಯ ನೀಡಲಾಗಿದೆ. ಈಗ ಟಾಪ್ ಕಾಸ್ ನಿಂದ ಒಟ್ಟು ದಕ್ಷಿಣ ಭಾರತೀಯ ನಿರ್ಮಾಣ ವಿಭಾಗದ ಕಡೆಗೆ ಕಾಳಜಿಯ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ವಾಹಿನಿಗಳು ಮತ್ತು ನಿರ್ಮಾಪಕರ ನಡುವೆ ಉತ್ತಮ ಸಂಬಂಧ ಮೂಡಿಸುವುದು , ನಿರ್ಮಾಪಕರಲ್ಲಿ ಎದುರಾಗುವ ವಿವಿಧ ಸಮಸ್ಯೆಗಳನ್ನು ಬಗೆ ಹರಿಸುವುದು ಟಾಪ್ ಕಾಸ್ ಉದ್ದೇಶವಾಗಿದೆ. ಭಾಷೆ ಬೇರೆ ಬೇರೆಯಾದರೂ ದಕ್ಷಿಣ ಭಾರತ ಕಿರುತೆರೆ ನಿರ್ಮಾಪಕರು ಎದುರಿಸುತ್ತಿರುವ ಸಮಸ್ಯೆ ಒಂದೇ ಆಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ಉತ್ತಮ ಬಾಂಧವ್ಯ ನಿರ್ಮಾಣದ ಉದ್ದೇಶ ನಮ್ಮದು ಎಂದರು.
ಕರ್ನಾಟಕ ಟೆಲಿವಿಷನ್ ನಿರ್ಮಾಪಕರ ಸಂಘದ ಅದ್ಯಕ್ಷ ಅರವಿಂದ್ ಮಾತನಾಡಿ, ದಕ್ಷಿಣ ಭಾರತ ಕಿರುತೆರೆ ಮತ್ತು ಒಟಿಟಿ ನಿರ್ಮಾಪಕರನ್ನು ಒಟ್ಟುಗೂಡಿಸಿರುವುದು ಹೆಮ್ಮೆಯ ಸಂಗತಿ. ಸಂಭಾವನೆಯ ಕಾರಣಕ್ಕಾಗಿ ಹೇಳದೆ ಕೇಳದೆ ಕೈ ಕೊಟ್ಟು ಭಾಷೆಯಿಂದ ಭಾಷೆಗೆ ಜಿಗಿಯುವ ಕೆಲವು ಕಲಾವಿದರಿಂದ ನಿರ್ಮಾಪಕರು ಕಷ್ಟ ಎದುರಿಸುವಂತಾಗಿದೆ. ಅದೇ ರೀತಿ ಎಲ್ಲಾ ನಿರ್ಮಾಪಕರ ಬಗ್ಗೆ ಕಾರಣವಿಲ್ಲದೆ ಮಧ್ಯಮಗಳಲ್ಲಿ ಅವಮಾನಕರ ಹೇಳಿಕೆ ನೀಡುವ ಕಲಾವಿದರನ್ನು ಪ್ರಶ್ನಿಸಿ, ಸಮಸ್ಯೆಗೆ ಪರಿಹಾರ ಕಾಣಲು ಟಾಪ್ ಕಾಸ್ ಉಪಯೋಗವಾಗಲಿದೆ ಎಂದರು.
ದಕ್ಷಿಣ ಭಾರತದ ವಿವಿಧ ಭಾಷಾ ಉದ್ಯಮಗಳನ್ನು ಪ್ರತಿನಿಧಿಸುವಂತೆ ತೆಲುಗು ಭಾಷೆಯ ಪ್ರಮುಖ ನಿರ್ಮಾಪಕರಾದ ಎ. ಪ್ರಸಾದ್ ರಾವ್, ಕನ್ನಡ ಭಾಷೆಯಿಂದ ಅರವಿಂದ್, ಮಲಯಾಳಂ ಭಾಷೆಯಿಂದ ಜಯಕುಮಾರ್ ಹಾಗೂ ತಮಿಳು ಭಾಷೆಯಿಂದ ಉದಯ್ ಶಂಕರ್ ಅವರು ಟಾಪ್ ಕಾಸ್ ಅನ್ನು ಮುನ್ನಡೆಸುತ್ತಿದ್ದು, ಸಮಾರಂಭದಲ್ಲಿ ಭಾಗಿಯಾಗಿದ್ದರು. ಕರ್ನಾಟಕ ಕಿರುತೆರೆ ನಿರ್ಮಾಪಕ ಸಂಘದ ಅಧ್ಯಕ್ಷರಾಗಿದ್ದ ಭಾಸ್ಕರ್ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶಿವಕುಮಾರ್, ನಿರ್ಮಾಪಕರಾದ ಸುನೀಲ್ ಪುರಾಣಿಕ್, ಶ್ರೀವಿದ್ಯಾ ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಖ್ಯಾತ ನಟ ಪರೀಕ್ಷಿತ್ ಕಾರ್ಯಕ್ರಮವನ್ನು ನಿರೂಪಿಸಿದರು.

