ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಸರಳತೆ ಎಂಥದ್ದು ಎನ್ನುವುದು ಎಲ್ಲರಿಗೂ ತಿಳಿದಿರುವಂಥದ್ದೇ. ಆದರೆ ಅದರ ದುರುಪಯೋಗ ಕಂಡಾಗಲೆಲ್ಲ ಛೇ ಎಂದು ಅನಿಸಿದ್ದೇ ಹೆಚ್ಚು.
ಟಾಕ್ಸಿಕ್ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದು ಶಿವರಾಜ್ ಕುಮಾರ್. ಏಳು ಗಂಟೆಗೆ ಲಾಂಚ್ ಮಾಡಬೇಕಾದ ಟ್ರೇಲರ್ ಸಮಾರಂಭಕ್ಕೆ ಆರುಮುಕ್ಕಾಲಕ್ಕೇನೇ ಆಗಮಿಸಿದ್ದರು. ಅವರು ಬರುವ ಹೊತ್ತಿಗೆ ಚಿತ್ರತಂಡದ ಪ್ರಮುಖರು ಯಾರೂ ಅಲ್ಲಿ ಕಾಣಿಸಿರಲಿಲ್ಲ.
ನನ್ನ ಪಕ್ಕದಲ್ಲಿ ಕುಳಿತಿದ್ದ ಪತ್ರಕರ್ತರಲ್ಲಿ ನಾನು ಹೇಳಿದೆ, “ಸಾಮಾನ್ಯವಾಗಿ ಇಡೀ ಚಿತ್ರತಂಡ ಬಂದು ಕಾಯುತ್ತಿರುವಾಗ ಅತಿಥಿಗಳು ಬರುವುದು ವಾಡಿಕೆ. ಆದರೆ ಈ ಶಿವಣ್ಣ ಅತಿಥಿಯಾಗಿ ಬರುವಾಗಲೂ ಸಮಾರಂಭದ ಸಮಯಕ್ಕಿಂತ ತುಸು ಮುಂಚಿತವಾಗಿಯೇ ಬರುತ್ತಾರೆ. Mostly ಶಿವಣ್ಣ ಹೊರಟಿರುವುದು, ತಲುಪಿರುವುದು ಎಲ್ಲವೂ ಯಶ್ ಅವರಿಗೆ ತಿಳಿದಿರುತ್ತದೆ. ಆಗ ಅವರು, “ನಾನು ಶಾರ್ಪ್ ಏಳಕ್ಕೇನೇ ಬರೋದು, ನೀವು ಕೂಡ ಆಗಲೇ ಎಂಟ್ರಿಕೊಟ್ಟರೆ ಸಾಕು ಶಿವಣ್ಣ” ಅಂದಿರ್ತಾರೆ. ಆದರೆ ಯಾವತ್ತೂ ಅರೆಕ್ಷಣ ವೇಸ್ಟ್ ಮಾಡದ ಶಿವಣ್ಣ ಎಲ್ಲೋ ಹೊರಗಡೆ ಇರೋದಕ್ಕಿಂತ
“ಪರವಾಗಿಲ್ಲಮ್ಮ, ಹತ್ತು ನಿಮಿಷ ಅಲ್ವ” ಅಂತ ನೇರ ಒಳಗೆ ಬಂದಿರ್ತಾರೆ ಅಂದೆ. ಬಹುಶಃ ಅದೇ ನಡೆದಿರುತ್ತದೆ.
ಆದರೆ ಶಿವಣ್ಣ ಎಂಟ್ರಿ ಆಗುವಾಗ ಯಶ್ ಮಾತ್ರವಲ್ಲ. ಅಷ್ಟು ಹೊತ್ತಿಗೆ ಟಾಕ್ಸಿಕ್ ಚಿತ್ರತಂಡದ ಯಾವ ತಾರೆಯರು ಕೂಡ ಅಲ್ಲಿರಲಿಲ್ಲ! ಇನ್ನು ಪ್ರತಿಯೊಬ್ಬರು ಬಂದಾಗಲೂ ಶಿವಣ್ಣ ಎದ್ದು ನಿಂತು ನಮಸ್ಕರಿ ಸುತ್ತಾರಲ್ಲ.. ಛೇ ಅನಿಸಿತು ನನಗೆ. ಪುಣ್ಯಕ್ಕೆ ನಯನ್ ತಾರ ಮಾತ್ರ ಶಿವಣ್ಣನ ಬಳಿಗೆ ಹೋಗಿ ನಮಸ್ಕರಿಸಿದ್ದು ಬಿಟ್ಟರೆ ಬೇರೆ ಯಾರೂ ಅಂಥ ಪ್ರಯತ್ನ ಮಾಡಲಿಲ್ಲ. ಅದು ಒಳ್ಳೆಯದೇ ಆಯಿತು.
ಯಶ್ ಬಂದು ಶಿವಣ್ಣನ ಪಕ್ಕದಲ್ಲೇ ಕುಳಿತುಕೊಂಡರು. ಎಂದಿನಂತೆ ಗೌರವದಿಂದ, ಆತ್ಮೀಯವಾಗಿ ಮಾತನಾಡುತ್ತಿರುವುದು ಕಾಣಿಸುತ್ತಿತ್ತು. ವೇದಿಕೆ ಮೇಲೆ ಶಿವಣ್ಣ ಯಶ್ ಅವರ ಯಶಸ್ಸನ್ನು ಕೊಂಡಾಡಿದರು. ಆದರೆ ನಿಜಕ್ಕೂ ಅಲ್ಲಿ ಆಗಿದ್ದೇನು..?
ಶಿವಣ್ಣ ತಮ್ಮನ್ನು ಯಾರೇ ಅತಿಥಿಯಾಗಿ ಆಹ್ವಾನಿಸಿದರೂ ತಕ್ಕ ಕಾರಣಗಳು ಇರದಿದ್ದರೆ ನಿರಾಕರಿಸುವುದು ಕಡಿಮೆ. ಅದಕ್ಕೆ ಸ್ಟಾರ್ ಕಾರ್ಯಕ್ರಮ ಎಂದೋ, ಹೊಸಬರ ಕಾರ್ಯಕ್ರಮ ಎಂದೋ ಭೇದ ಮಾಡುವುದಿಲ್ಲ. ಆಹ್ವಾನಿಸುವವರಲ್ಲಿ ಆತ್ಮೀಯತೆ ಕಂಡರೆ ಸಾಕು, ಅಷ್ಟಕ್ಕೆ ಕರಗಿ ಬಿಡುತ್ತಾರೆ.
ಸದಾ ಬ್ಯುಸಿಯಾಗಿರುವ ಅವರು ಕ್ಷಣ ಸಮಯವಿದ್ದರೂ ಬಿಡುವು ಮಾಡಿ ಅಲ್ಲಿಗೆ ಹೋಗಿ ಹಾರೈಸುತ್ತಾರೆ. ಒತ್ತಾಯಿಸಿದರೆ ಎರಡು ಹೆಜ್ಜೆ ಹಾಕುತ್ತಾರೆ. ಇದೆಲ್ಲ ಈ ಕಾಲಘಟ್ಟದಲ್ಲಿ ಕಲ್ಪಿಸಲೂ ಆಗದಂಥ ವಿಚಾರಗಳು. ಯಾಕೆಂದರೆ ಏನೇನೂ ಪ್ರತಿಭೆಗಳಿಲ್ಲದೆ, ಸೋಶಿಯಲ್ ಮೀಡಿಯಾದ ಟ್ರೆಂಡ್ ನಿಂದ ಹೆಸರಾದವರೇ
ಅತಿಥಿಗಳಾಗಿ ಬರಲು ದೊಡ್ಡಮೊತ್ತದ ಅಮೌಂಟ್ ಬಯಸುವ ಕಾಲವಿದು. ಇಂಥ ಸಂದರ್ಭದಲ್ಲಿ ಶಿವಣ್ಣ ಹೀಗೆ ಸರಳವಾಗಿ ಬಂದು ಕುಳಿತುಕೊಳ್ಳುತ್ತಾರೆ ಅಂದಾಗ ಅವರನ್ನು ನಾವು ಗೌರವಿಸುವ ರೀತಿಯೂ ಹೆಚ್ಚಾಗಿರಬೇಕು. ಹೊರತು ನಗಣ್ಯ ಎನ್ನುವಂತೆ ಕಾಣಬಾರದು.
ಸೂಕ್ಷ್ಮವಾಗಿ ಗಮನಿಸಿದರೆ, ಅಂದು ಟಾಕ್ಸಿಕ್ ಚಿತ್ರತಂಡ ಬರುವ ಮೊದಲು ಶಿವಣ್ಣನಿಗೆ ನೀಡಲಾದ ನೀರಿನ ಬಾಟಲಿ ಸಾಮಾನ್ಯದ್ದಾಗಿತ್ತು. ಆದರೆ ಪಕ್ಕದಲ್ಲಿ ಯಶ್ ಕುಳಿತ ಮೇಲೆ ಆ ತಾರಾಗಣಕ್ಕೆ ನೀಡಿದ ನೀರಿನ ಬಾಟಲಿಗಳು ಇನ್ನಷ್ಟು ಉತ್ಕೃಷ್ಟ ಬೆಲೆಯದ್ದು! ಯಶ್ ನೀರು ಕುಡಿಯಲು ಬಾಟಲಿ ಎತ್ತಿಕೊಂಡಾಗ
ಶಿವಣ್ಣ ಅದನ್ನು ಗಮನಿಸಿದ್ದಾರೆ. (ಫೋಟೋ ಗಮನಿಸಿ) ಆದರೆ ತಪ್ಪು ತಿಳಿದುಕೊಂಡಿಲ್ಲ.

ಅಷ್ಟೇ ಅಲ್ಲ. ಸಾಮಾನ್ಯವಾಗಿ ಯಾವುದೇ ಸಿನಿಮಾ ಕಾರ್ಯಕ್ರಮದಲ್ಲೂ ಅತಿಥಿಗಳಾಗಿ ಬಂದವರನ್ನು ವೇದಿಕೆ ಮೇಲೆ ಸನ್ಮಾನಿಸಿ ಕಳಿಸಲಾಗುತ್ತದೆ. ಅಥವಾ ಕನಿಷ್ಟಪಕ್ಷ ಚಿತ್ರತಂಡದ ಪ್ರಮುಖರೊಂದಿಗೆ ವೇದಿಕೆಯಲ್ಲಿ ಒಂದು ಗ್ರೂಪ್ ಫೊಟೋ ತೆಗೆಸಲಾಗುತ್ತದೆ. ಅತಿಥಿಗಳು ವೇದಿಕೆಯಿಂದ ನಿರ್ಗಮಿಸಬೇಕಾದರೆ ವೇದಿಕೆಯಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡಲಾಗುತ್ತದೆ. ಆದ್ರೆ ದುರದೃಷ್ಟವಶಾತ್ ಇಲ್ಲಿ ಮಾತ್ರ ಶಿವಣ್ಣ ಬಂದಿದ್ದು ಗೊತ್ತಿಲ್ಲ ಹೋಗಿದ್ದು ಗೊತ್ತಿಲ್ಲ ಎನ್ನುವಂತೆ ಹೊರಟಿದ್ದರು.
ಟ್ರೇಲರ್ ಲಾಂಚ್ ಗಾಗಿ ಶಿವಣ್ಣನನ್ನು ನಿರೂಪಕ ವೇದಿಕೆಗೆ ಆಹ್ವಾನಿಸಿದ ರೀತಿ ಚೆನ್ನಾಗಿಯೇ ಇತ್ತು. ಆದರೆ ಆ ಬಳಿಕ ಟ್ರೇಲರ್ ಬಗೆಗಿನ ಅನಿಸಿಕೆ ಹೇಳುವಾಗ ವೇದಿಕೆ ಮೇಲೆ ಶಿವಣ್ಣನಿಗೆ ಯಶ್ ಜತೆಯಾಗಿರಬೇಕಿತ್ತು. ಅಥವಾ ಶಿವಣ್ಣ ನಿರ್ಗಮಿಸಿದ ಮೇಲೆಯಾದರೂ ರಾಕಿಂಗ್ ಸ್ಟಾರ್ ವೇದಿಕೆ ಮೇಲಿಂದ ಶಿವಣ್ಣನಿಗೆ ಕೃತಜ್ಞತೆ ಹೇಳಲೇಬೇಕಿತ್ತು.
ಇದು ಯಾವುದು ಕೂಡ ಯಶ್ ಬೇಕೆಂದೇ ಮಾಡಿದ್ದಾರೆ ಎನ್ನುವುದು ನನ್ನ ಆರೋಪವಲ್ಲ. ಯಶ್ ವ್ಯಕ್ತಿತ್ವದ ಬಗ್ಗೆಯೂ ನಮಗೆ ಗೊತ್ತಿರುವ ಕಾರಣ ಅವರು ಕೂಡ ಇಂಥದ್ದನ್ನೆಲ್ಲ ಯೋಚಿಸಿಯೂ ಇರುವುದಿಲ್ಲ. ಆದರೆ ಅವರು ಟಾಕ್ಸಿಕ್ ಗೆ ನಟ ಮಾತ್ರವಲ್ಲ. ನಿರ್ಮಾಣದ ಪಾಲುದಾರರೂ ಹೌದು. ಅಷ್ಟೇ ಅಲ್ಲ, ಶಿವಣ್ಣ ಟ್ರೇಲರ್ ಲಾಂಚ್ ಗೆ ಬರಲು ಮುಖ್ಯ ಕಾರಣ ಯಶ್ ಅವರೇ ಆಗಿರುತ್ತಾರೆ. ಹೀಗಾಗಿ ಶಿವರಾಜ್ ಕುಮಾರ್ ಅವರನ್ನು ಆದಷ್ಟು ಗೌರವಾಧಾರಗಳಿಂದ ನಡೆಸಿಕೊಂಡು ಕಳಿಸಿ ಕೊಡಬೇಕಾಗಿದ್ದು ಯಶ್ ಅವರ ಜವಾಬ್ದಾರಿಯೂ ಆಗಿತ್ತು.
ಶಿವಣ್ಣ ಸಭೆಯಿಂದ ನಿರ್ಗಮಿಸಬೇಕಾದರೆ, ಯಶ್ ತಮ್ಮ ಬಾಡಿಗಾರ್ಡ್ ಗೆ ಅವರನ್ನು ಹಿಂಬಾಲಿಸುವಂತೆ ಸೂಚಿಸಿದ್ದಾರೆ. ಆದರೆ ಶಿವಣ್ಣ ತಮ್ಮದೇ ಬಾಡಿಗಾರ್ಡ್ ಕೈಗೆ ಸಿಗದಂತೆ ಓಡಾಡುವ ಪಾದರಸದಂಥ ವ್ಯಕ್ತಿ. ಹೀಗಾಗಿ ಇಲ್ಲಿಯೂ ಅವರು ಬಾಡಿಗಾರ್ಡ್ ಸಹಾಯ ಬಯಸದೆ ವೇಗವಾಗಿ ನಿರ್ಗಮಿಸಿದ್ದು ಕಾಣಬಹುದಿತ್ತು.
ಡಾಕ್ಟರ್ ರಾಜ್ ಕುಮಾರ್ ತುಂಬಾನೇ ಸರಳವಾಗಿದ್ದರು. ಆದರೆ ಅವರಿಗೆ ತಪ್ಪಿ ಕೂಡ ಅವಮಾನ ಮಾಡುವ ಧೈರ್ಯ ಯಾರಿಗೂ ಇರಲಿಲ್ಲ. ಇದು ಸ್ಟಾರ್ಸ್ ನಿಜ ಜೀವನದಲ್ಲಿ ದುಡ್ಡು ಕೊಟ್ಟು ಬಿಲ್ಡಪ್ ಪಡೆಯುವ ಕಾಲ. ಇಂಥ ಸಂದರ್ಭದಲ್ಲಿ ಶಿವಣ್ಣನ ಸರಳತೆಗೆ ಕೊಡಬೇಕಾದ ಗೌರವ ನಾವೇ ಕೊಡಲು ಮರೆತರೆ ನಿಜಕ್ಕೂ ಅದು ತಪ್ಪು.
