ಕಾಮನ್ ಮ್ಯಾನ್ ಹಾಡುಗಳ ದರ್ಬಾರು

ಕೆರೆಬೇಟೆ ಖ್ಯಾತಿಯ ಗೌರಿಶಂಕರ್ ನಾಯಕರಾಗಿರುವ ಹೊಸ ಚಿತ್ರ ಕಾಮನ್ ಮ್ಯಾನ್. ಓಂ ಸಾಯಿ ಪ್ರಕಾಶ್ ನಿರ್ದೇಶನದ 106ನೇ ಚಿತ್ರವಾದ ಕಾಮನ್ ಮ್ಯಾನ್ ನ ಹಾಡುಗಳ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಹಿರಿಯ ನಟಿ, ರಾಜಕಾರಣಿ ಉಮಾಶ್ರೀಯವರು ಚಿತ್ರತಂಡಕ್ಕೆ ಹಾರ್ದಿಕ ಶುಭ ಕೋರಿದ್ದಾರೆ.

ಚಿತ್ರದ ಶೀರ್ಷಿಕೆ ಆಂಗ್ಲದಲ್ಲಿದೆ.‌ ಇತ್ತೀಚೆಗೆ ಇದುವೇ ಟ್ರೆಂಡ್ ಆಗಿದೆ. ಆದರೆ ಹಾಡು ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ಕೂಡ ಚೆನ್ನಾಗಿರುವ ಭರವಸೆ ಇದೆ. ಯಾಕೆಂದರೆ ನಿರ್ದೇಶಕ ಸಾಯಿ ಪ್ರಕಾಶ್ ಅವರು ನಮಗೆಲ್ಲ‌ ನಿರಂತರ ಚಿತ್ರಗಳನ್ನು ನೀಡಿ ವೃತ್ತಿ ಬದುಕಿಗೆ ಸಹಕಾರಿಯಾದವರು. ಎನ್ ಎಸ್ ರಾವ್ ಅವರು ತೀರಿಕೊಂಡ ಒಂದು ವರ್ಷ ನನಗೆ ಯಾವುದೇ ಸಿನೆಮಾಗಳು ಇರಲಿಲ್ಲ. ಆ ಬಳಿಕ ಸಾಯಿ ಪ್ರಕಾಶ್ ಅವರು ಕರೆದು ದ್ವಂದ್ವಾರ್ಥಗಳಿಲ್ಲದ ಒಂದು‌ ಒಳ್ಳೆಯ ಪಾತ್ರದಲ್ಲಿ ನಟಿಸಲು ಅವಕಾಶ ಮಾಡಿ ಕೊಟ್ಟರು ಅಂದರು.

“ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದು ವಿನಯ್ ಚಂದ್ರ. ಇವರ ತಂದೆ ಸುರೇಶ್ಚಂದ್ರ ಅವರು ಪತ್ರಕರ್ತರಾಗಿ ನನ್ನ ಹಿತೈಷಿಯಾಗಿದ್ದರು” ಎಂದು ಉಮಾಶ್ರೀ‌ ನೆನಪಿಸಿಕೊಂಡರು.

ಕಾರ್ಯಕ್ರಮಕ್ಕೆ ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಪ್ರಿಯಾಂಕಾ ಅವರು ಓಂ‌ ಸಾಯಿಪ್ರಕಾಶ್ ಅವರ ನಿರ್ದೇಶನದಲ್ಲಿ ತಾವು ಕೂಡ ನಟಿಸಿದ್ದಾಗಿ ಸ್ಮರಿಸಿಕೊಂಡರು.‌ ಚಿತ್ರತಂಡಕ್ಕೆ ಶುಭಕೋರಿ ತಾವು ಕೂಡ ಒಂದು ಹಾಡನ್ನು ಬಿಡುಗಡೆಗೊಳಿಸಿದರು.

ಚಿತ್ರದಲ್ಲಿ ಕಲಾವಿದರಾಗಿಯೂ ಕಾಣಿಸಿರುವ ರಮೇಶ್ ಭಟ್ ಅವರು ಒಂದು ದೇಶಭಕ್ತಿ ಸಾರುವ ಗೀತೆಯನ್ನು ಬಿಡುಗಡೆಗೊಳಿಸಿದರು. ವಿಶೇಷ ಅತಿಥಿಯಾಗಿ ಬಂದ ವಿನೋದ್ ಪ್ರಭಾಕರ್ ಕೊನೆಯ ಗೀತೆಯನ್ನು ಬಿಡುಗಡೆಗೊಳಿಸಿದರು. ಜೆ.ಜೆ ಕೃಷ್ಣ ಅವರ ಛಾಯಾಗ್ರಹಣವನ್ನು ಮೆಚ್ಚಿ ಮಾತನಾಡಿದರು.

ಚಿತ್ರದ‌ಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಬಾಲಿವುಡ್ ನ ಖ್ಯಾತ ಗಾಯಕರಾದ ಬಾಬ ಸೈಗಲ್, ಕೈಲಾಷ್ ಖೇರ್, ಜಾವೇದ್ ಅಲಿ ಇವರೊಂದಿಗೆ ಕನ್ನಡದ ಅಂಕಿತಾ ಕುಂಡು, ಶ್ರುತಿ ಪ್ರಹ್ಲಾದ್, ಚೈತ್ರಾ ಜೆ ಆಚಾರ್ ಹಾಡಿದ್ದಾರೆ.‌ ಮಾತ್ರವಲ್ಲ ಖುದ್ದು ಸಂಗೀತ ನಿರ್ದೇಶಕ ವಿನಯ್ ಚಂದ್ರ ಅವರು ಕೂಡ ಯುಗಳಗೀತೆಯೊಂದಕ್ಕೆ ಧ್ವನಿಯಾಗಿದ್ದಾರೆ. ತಮ್ಮ ಸಂಗೀತ ಸಂಯೋಜನೆಯಲ್ಲಿ ಇದು ಕನ್ನಡದಲ್ಲಿ 12 ಚಿತ್ರವಾಗಿರುವುದಾಗಿ
ವಿನಯ ಚಂದ್ರ ಹೇಳಿದರು.

ಚಿತ್ರದ ನಾಯಕ ಗೌರಿಶಂಕರ್ ಈ ಸಿನಿಮಾ ಬಗ್ಗೆ ದೊಡ್ಡ ಭರವಸೆ ಇರಿಸಿರುವುದಾಗಿ ತಿಳಿಸಿದರು. ನಿರ್ಮಾಪಕ ನರಸಿಂಹ ಮೂರ್ತಿ ಚಿತ್ರದಲ್ಲಿ ಖಳನಟನಾಗಿ ನಟಿಸಿರುವುದು ವಿಶೇಷ. ಸುಮಾರು 50ಮಂದಿ‌ ನಟಿಸಿರುವ ಈ ಚಿತ್ರದ ಬಜೆಟ್ ಅದೇ ಕಾರಣಕ್ಕಾಗಿ ಮೌಲ್ಯ ಹೆಚ್ಚಿಸಿಕೊಂಡಂತೆ ಪರದೆಯ ಮೇಲೆ ಕಾಣಲಿದೆ ಎಂದು ಅವರು ಹೇಳಿದರು.

ಗೌರಿಶಂಕರ್ ಗೆ ಜೋಡಿಯಾಗಿ ನಟಿಸಿರುವ ನಾಯಕಿ ಶೋನ‌ ಲಡ್ವ ತಾವು ಅಮೆರಿಕದಿಂದ ಹಿಂದಿರುಗಿ ಭಾರತಕ್ಕೆ ಬರುವ ಯುವತಿಯ ಪಾತ್ರದಲ್ಲಿರುವುದಾಗಿ ಹೇಳಿದರು. ಒಂದೇ ದಿನ ನಟಿಸಿದರೂ ತಮ್ಮ‌ ಪಾತ್ರವನ್ನು ಚೆನ್ನಾಗಿ ತೋರಿಸಲಾಗಿದೆ ಎಂದು ನಾಗೇಂದ್ರ ಅರಸ್ ಹೇಳಿದರು. ಚಿತ್ರ ಸಪ್ಟೆಂಬರ್ 25ರಂದು ತೆರೆಗೆ ಬರಲಿದೆ.

Recommended For You

Leave a Reply