ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರ ‘ಕೊನೆಯ ಪತ್ರ’ದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂರ್ತಿಚಿತ್ರತಂಡ ಭಾಗಿಯಾಯಿತು.
ಚಿತ್ರದ ಹೆಸರು ಕೇಳುವಾಗ ನಿಮಗೆ ಇದೊಂದು ಕ್ಲಾಸಿಕ್ ಸಿನೆಮಾದಂತೆ ಅನಿಸಬಹುದು. ಆದರೆ ಇದರಲ್ಲಿ ಹೆವಿ ಮಾಸ್ ಇದೆ ಎಂದು ಚಿತ್ರದ ನಿರ್ದೇಶಕ ಭಾರ್ಗವ್ ಹೇಳಿದರು. ನಟರಾಗಿ ಗುರುತಿಸಿಕೊಂಡಿದ್ದ ಭಾರ್ಗವ್ ಅವರೇ ಈ ಚಿತ್ರಕ್ಕೆ ಕಥೆ ಬರೆದು, ನಾಯಕರಾಗುವ ಜತೆಗೆ ನಿರ್ದೇಶಕರೂ ಆಗಿರುವುದು ವಿಶೇಷ.
ಟೆಡ್ಡಿ ಬೇರ್ ಸೇರಿದಂತೆ ಕನ್ನಡದಲ್ಲಿ ಇದು ನನ್ನ 7ನೆಯ ಚಿತ್ರ. ಹಳ್ಳಿ ಶೈಲಿಯ ಸಿನೆಮಾ. ನನ್ನ ಪಾತ್ರದ ಹೆಸರು ನರಸಾಪುರದ ನರಸಿಂಹ. ಒಂದೇ ಒಂದು ಪತ್ರ ಆತನಲ್ಲಿ ಹೇಗೆ ಬದಲಾವಣೆ ತರುತ್ತೆ ಎನ್ನುವುದೇ ಈ ಚಿತ್ರದ ಕಥೆ. ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದರು.
ಚಿತ್ರದ ನಾಯಕಿ ಅರಿಯಾ ಮೆನನ್ ಮೂಲತಃ ಕೇರಳದವರು. “ನನ್ನದು ಬಬ್ಲಿ ಬಬ್ಲಿ ಹುಡುಗಿಯ ಪಾತ್ರ. ಪಾತ್ರಕ್ಕಾಗಿ ಕನ್ನಡ ಕಲಿಯುತ್ತಿದ್ದೇನೆ. ಮುಂದಿನ ಸಲ ಇನ್ನಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತೇನೆ” ಎಂದರು.
ನಿರ್ಮಾಪಕ ನಾಗರಾಜು ಆಂಧ್ರದವರು. “ನಾನು ಅನಂತಪುರಂನಲ್ಲಿ ಹುಟ್ಟಿ ಬೆಳೆದೆ. ಆದರೆ ನನ್ನ ಉದ್ಯಮ ಕರ್ನಾಟಕದಲ್ಲೂ ಇದೆ. ಆರಂಭದಲ್ಲಿ ತಮಿಳು ಚಿತ್ರ ಮಾಡಲು ತಯಾರಾಗಿದ್ದೆ. ಆದರೆ ಭಾರ್ಗವ್ ಕಥೆ ಕೇಳಿದ ಮೇಲೆ ಇದನ್ನೇ ಚಿತ್ರವಾಗಿಸಲು ತಯಾರಾದೆ. ಭಾರ್ಗವ್ ನನಗೆ ತಮ್ಮನ ಹಾಗೆ. ನಾವು ಮುದ್ದಿನಿಂದ ಅವನಿಗೆ ಚಿರು ಎಂದು ಹೆಸರಿಟ್ಟಿದ್ದೇನೆ. ಈ ಚಿತ್ರದಲ್ಲಿ
ನನ್ನ ಮಗ ಸಾಯಿ ಕಿಶೋರ್ ಅವರನ್ನು ಕೂಡ ನಾಯಕನ ಸ್ನೇಹಿತನಾಗಿ ಪರಿಚಯಿಸುತ್ತಿದ್ದೇನೆ ಎಂದರು. ಸಾಯಿ ಕಿಶೋರ್ ಮಾತನಾಡಿ, ಈ ಚಿತ್ರದಲ್ಲಿ ಭಾರ್ಗವ್ ಜೊತೆಗೆ ಒಂದೊಳ್ಳೆಯ ಪಾತ್ರ ದೊರಕಿದ್ದಾಗಿ ಹೇಳಿದರು. ಮತ್ತೋರ್ವ ನಟಿ ವೇದ ಶ್ರೀ ಮಾತನಾಡಿ ತಾವು ಭಾರ್ಗವ್ ಜೋಡಿಯಾಗಿ ನಟಿಸುತ್ತಿರುವುದಾಗಿ ತಿಳಿಸಿದರು.
ಬಿಗ್ ಬಾಸ್ ಖ್ಯಾತಿಯ ಕ್ಯಾಡಬಾಮ್ ಸತೀಶ್ ಮಾತನಾಡಿ, ಮೋಶನ್ ಪೋಸ್ಟರ್ ನೋಡಿಯೇ ಇಷ್ಟವಾಯಿತು ಎಂದರು. ಡಿಟೆಕ್ಟಿವ್ ತೀಕ್ಷ್ಣ ಚಿತ್ರಕ್ಕೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಪಿ.ಆರ್. (ರೋಹಿತ್) ಅವರೇ ಈ ಚಿತ್ರಕ್ಕೂ ಸಂಗೀತ ನಿರ್ದೇಶಕ. ಇದರಲ್ಲಿ 4 ಹಾಡುಗಳಿರುವುದಾಗಿ ಅವರು ತಿಳಿಸಿದರು.
ತೆಲುಗು ಗೀತರಚನೆಕಾರ ವಿಷ್ಣುವರ್ಧನ್
ಎರಡು ಹಾಡುಗಳನ್ನು ಬರೆದಿದ್ದಾರೆ. ಚಿತ್ರದ ನಿರ್ದೇಶಕ ತಂಡದಲ್ಲಿರುವ ವಿವೇಕ್ ಪಟ್ಟಾಭಿರಾಮ್ ಮಾತನಾಡಿ, ” ನಾನು ಪೆದ್ದಿಯಲ್ಲಿ ಕೆಲಸ ಮಾಡಿದ್ದೆ. ಶಿವಣ್ಣ ಮತ್ತು
ಉಪೇಂದ್ರ ಸಿನೆಮಾಗಳಿಗೆ ಅಭಿಮಾನಿ ಎಂದರು. ನಾಯಕಿಯ ಬಾಲ್ಯದ ಪಾತ್ರವನ್ನು ಬಾಲನಟಿ ಆರೋಹಿ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಒಂದು ಹಾಡಿನಲ್ಲಿ ನರ್ತಿಸಲಿರುವ ನಟಿ ಮುಂಬೈ ಮೂಲದ ನೀತಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಭಾರ್ಗವ್ ನಟನೆಯಲ್ಲಿ ತೆರೆಕಾಣಲಿರುವ ‘ವಿಕ್ರಮಾರ್ಕ’ ಚಿತ್ರದ ನಿರ್ದೇಶಕ ಲೋಕೇಶ್ , ಭಾರ್ಗವ್ ಆತ್ಮೀಯರಾದ ಶ್ರೀರಾಮುಲು, ಮಮತಾ ದೇವರಾಜ್, ಚಿಕ್ಕಬಳ್ಳಾಪುರದ ರಾಜಕಾರಣಿ ಎಸ್.ಪಿ ಶ್ರೀನಿವಾಸ್ ಉಪಸ್ಥಿತರಿದ್ದು ಶುಭ ಕೋರಿದರು.
