ಟ್ರೇಲರ್ ನಲ್ಲೇ ಮನಸೆಳೆದ ಕಾನನದ ಚಿತ್ರ ‘ಕಾನ್ಧಾರಿ’

ಉತ್ತರ ಕನ್ನಡ ನೆಲದ ಕಥೆಯನ್ನು ಹೇಳುವ ಕಾನ್ಧಾರಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಚಾಮರಾಜ ಪೇಟೆಯ ಕಲಾವಿದರ ಭವನದಲ್ಲಿ ನೆರವೇರಿತು. ಹಿರಿಯ ನಟ‌ ದೊಡ್ಡಣ್ಣ ಮತ್ತು ಐಎಎಸ್ ಅಧಿಕಾರಿಗಳು ಹಾಗೂ ರಾಜ್ಯ ಸಹಕಾರ ಇಲಾಖರಯ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣನವರ್ ಟ್ರೇಲರ್ ಲಾಂಚ್ ಮಾಡಿದರು.

ಇದೇ ಸಂದರ್ಭದಲ್ಲಿ ಉತ್ತರ ಕನ್ನಡದ ಬಗ್ಗೆ ಬರೆಯಲಾದ ಎರಡು ಹಾಡುಗಳನ್ನು ಪ್ರದರ್ಶಿಸಲಾಯಿತು. “ಛಾಯಾಗ್ರಾಹಕರು ಪ್ರಕೃತಿ ಸೌಂದರ್ಯವನ್ನು ತುಂಬ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ ದೊಡ್ಡಣ್ಣ, ಗುಂಡಪ್ಪನವರ ಸಾಲುಗಳನ್ನು ಉದ್ಧರಿಸಿ ಈ ಭೂಮಿ ಎಷ್ಟು ಸುಂದರವಾಗಿದೆ. ಇಲ್ಲಿರುವ ನಾವೇ ಅದೃಷ್ಟವಂತರು.‌ ಅಂಥ ಪರಿಸರವನ್ನು ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.

ಒಂದು ಮುತ್ತಿನ ಕಥೆ ಸಂದರ್ಭದಲ್ಲಿ ಒಂದಷ್ಟು ಕಾಲ ಉತ್ತರ ಕನ್ನಡ ನೋಡಿದ್ದು ಬಿಟ್ಟರೆ ಬೇರೇನೂ ಅನುಭವವಿಲ್ಲ. ಆದರೆ ಈಗ ನಿಮ್ಮೆಲ್ಲರ ಮೇಲೆ ಆಣೆ ಮಾಡಿ ಹೇಳುತ್ತೇನೆ, ಖಂಡಿತವಾಗಿ ಉತ್ತರ ಕನ್ನಡಕ್ಕೆ ಹೋಗುತ್ತೇನೆ ಎಂದರು.

ಐಎಎಸ್ ಅಧಿಕಾರಿ ಸಂಜಯ್ ಶೆಟ್ಟಣ್ಣನವರ್ ಮಾತನಾಡಿ, ಕಾನ್ಧಾರಿ ನಿರ್ದೇಶಕ ವಿನಾಯಕ ಹೆಗ್ಡೆ ನನ್ನ ಸಂಬಂಧಿ. ಈ ಹಿಂದೆ ನಾನು ಭಟ್ಕಳದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಕಾರಣ ನನಗೆ ಅಲ್ಲಿನ ಪ್ರಕೃತಿ ಸೌಂದರ್ಯ ಗೊತ್ತು.‌ ಅಂಥ ಊರಿನ ಬಗ್ಗೆ ಇಂಥದೊಂದು ಚಿತ್ರ ಮಾಡುತ್ತಿರುವುದು ಖುಷಿಯ ವಿಚಾರ ಎಂದರು.

ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡಿ, ಸಾಮಾನ್ಯವಾಗಿ ಎರಡು ಕಾರಣಗಳಿಗಾಗಿ ಚಿತ್ರ ಮಾಡುತ್ತಾರೆ.‌ ಮೊದಲನೆಯದು ಲಾಭ ಮಾಡಬೇಕು, ಹೆಸರು ಮಾಡಬೇಕು ಎಂದು ಬಯಸುವ ನನ್ನಂಥವರು.‌ ಕಳೆದುಕೊಂಡರೂ ಚಿಂತೆ ಇಲ್ಲ. ಮನಸಿಗೆ ತೋಚಿದ್ದನ್ನು ಮಾಡಲೇಬೇಕು ಎನ್ನುವವರು ಇದ್ದಾರೆ. ಈ ಚಿತ್ರ ನೋಡಿದ ಮೇಲೆ ಇದೊಂದು ಪ್ರವಾಸಿತಾಣವಾಗುವ ಸಾಧ್ಯತೆ ಇದೆ ಎನ್ನುವ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಇತಿಹಾಸಕಾರ ಡಾ.ಲಕ್ಷ್ಮೀಶ ಹೆಗಡೆ ಅವರು ತಾನು ಮೂಲತಃ ಅದೇ ಭಾಗದ ಶಿರಸಿಯವನೇ ಆಗಿದ್ದೇನೆ. ಉತ್ತರ ಕನ್ನಡ ಜಿಲ್ಲೆಯನ್ನು ಐತಿಹಾಸಿಕವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಕವಾಗಿ, ಸಾಂಸ್ಕೃತಿಕವಾಗಿ ಪ್ರಾಕೃತಿಕವಾಗಿ ಪ್ರಾಮುಖ್ಯತೆ‌ಯಿದೆ ಎಂದರು. 1600 ವರ್ಷಗಳ ಹಿಂದೆ ಕರ್ನಾಟಕದ ಅಸ್ಮಿತೆಯನ್ನು ಅರ್ಥೈಸಿಕೊಳ್ಳಬೇಕಾದರೆ ಈ ಚಿತ್ರವನ್ನು ನೋಡಬಹುದು ಎಂದರು.

ನಿರ್ದೇಶಕ ವಿನಾಯಕ ಹೆಗಡೆ ಮಾತನಾಡಿ, ಕಾನನವನ್ನು ಧರಿಸಿದವಳೇ ಕಾನ್ಧಾರಿ ಎಂದು ಚಿತ್ರದ ಹೆಸರಿನ ಕುರಿತಾಗಿ ಸ್ಪಷ್ಟನೆ ನೀಡಿದರು. ಎರಡು ವರ್ಷಗಳ ಹಿಂದೆ ಹುಟ್ಟಿದ ಕಥೆ ಇದು. ಕರ್ನಾಟಕದ ಹದಿನೈದು ಬುಡಕಟ್ಟುಗಳಲ್ಲಿ ಐದು ನಮ್ಮಲ್ಲೇ ಇವೆ. ಭಟ್ಕಳ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಭಾಗದಲ್ಲೂ ಚಿತ್ರೀಕರಣವಾಗಿದ್ದಾಗಿ ತಿಳಿಸಿದರು.

ನಿರ್ಮಾಪಕ ಸುಪ್ರೀತ್ ಹೆಗಡೆ ಸೋಮನ‌ಮನೆ ಮಾತನಾಡಿ, ಕಾನ್ಧಾರಿ ಚಿತ್ರವನ್ನು ತಾವು ಗಾಂಧಾರಿಯಂತೆ ಕಣ್ಣುಮುಚ್ಚಿ ಮಾಡಿದ್ದಾಗಿ ಹೇಳಿದರು. ಯಾಕೆಂದರೆ ನಾಡಿನ ಮೇಲಿರುವ ಅಭಿಮಾನದಿಂದಾಗಿ ಖರ್ಚು ವೆಚ್ಚಗಳತ್ತ ಕಣ್ಣು ಹಾಯಿಸಿಲ್ಲ ಎಂದರು. ಹರ್ಷವರ್ಧನ್ ರಾಜ್ ಸಂಗೀತ, ಸತೀಶ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ ಇದೆ. ಚಿತ್ರ ಇದೇ ಸಪ್ಟೆಂಬರ್ 18ರಂದು ತೆರೆಗೆ ಬರಲಿದೆ.

Recommended For You

Leave a Reply