ಸೋಮವಾರದಿಂದ ಪ್ರತಿ ದಿನ ರಾತ್ರಿ 9ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ‘ಜಗದ್ಧಾತ್ರಿ’ ಧಾರಾವಾಹಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ಲಾಂಚ್ ಕಾರ್ಯಕ್ರಮ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಪ್ರಸಾರ ಮಾಡಲಾಯಿತು. ಗೀತೆಗೆ ಸುನಾದ್ ಗೌತಮ್ ಸಂಗೀತ ನೀಡಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ.
ಮೂರು ಶೇಡ್ಸ್ ನಲ್ಲಿ ಮೋಕ್ಷಿತಾ ಪೈ
ಜೀ ಕನ್ನಡ ಬಿಸ್ನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, ಕಳೆದ ವರ್ಷ ಜೂನ್ ನ ಸಂದರ್ಭದಲ್ಲೇ ಇದರ ಮಾತುಕತೆ ಶುರುವಾಗಿತ್ತು. ನಾಯಕಿಯಾಗಿ ಮೋಕ್ಷಿತಾ ಪೈ ಅವರೇ ಬೇಕು ಎನ್ನುವುದು ನಮ್ಮ ನಿಲುವಾಗಿತ್ತು. ಯಾಕೆಂದರೆ ಈ ನಾಯಕಿಗೆ ಮೂರು ಶೇಡ್ಸ್ ಇವೆ. ಒಂದು ಹೋಮ್ಲಿಯಾಗಿರುವ ಫೇಸ್. ಇನ್ನೊಂದು ಸ್ಟಂಟ್ಸ್ ಎಲ್ಲವೂ ಇರುವಂಥ ಪಾತ್ರ. ಹಾಗೂ ಮೂರನೆಯದು ಲವ್ಲಿ ಗರ್ಲ್ ಪಾತ್ರ. ಮೋಕ್ಷಿತಾ ಅದನ್ನು ಎಷ್ಟು ಸಮರ್ಥವಾಗಿ ನಿಭಾಯಿಸಿದ್ದಾರೆ ಎನ್ನುವುದು ನಿಮಗೆ ಈಗಾಗಲೇ ಗ್ಲಿಂಪ್ಸ್ ಮೂಲಕ ಗೊತ್ತಾಗಿರಬಹುದು. ಇದೀಗ ಮೊದಲ ಬಾರಿಗೆ ಧಾರಾವಾಹಿಗೂ ಒಂದು ಟ್ರೇಲರ್ ಮಾಡಿದ್ದೇವೆ ಎಂದರು. ಬಳಿಕ ಟ್ರೇಲರ್ ಪ್ರದರ್ಶನ ಮಾಡಲಾಯಿತು.
“ಈ ಧಾರಾವಾಹಿಯನ್ನು ತೆಲುಗುವಲ್ಲಿ ನೋಡಿದಾಗ ಇಂಥ ಪಾತ್ರ ಮಾಡಬೇಕು ಎಂದು ಆಸೆಪಟ್ಟಿದ್ದೆ. ವಿಶೇಷ ಏನೆಂದರೆ ಈ ಪಾತ್ರಕ್ಕಾಗಿ ನನಗೆ ಕರೆ ಬಂದಾಗ ನಾನು ಮಂಗಳೂರಿನಿಂದ ವಾಪಾಸು ಬಂದಿದ್ದೆ. ಅಲ್ಲಿ ದೇವಿ ಕ್ಷೇತ್ರವೊಂದರಲ್ಲಿ ನನಗೆ ಒಳ್ಳೆಯ ಪ್ರಾಜೆಕ್ಟ್ ಸಿಗಲಿ ಎಂದು ಪ್ರಾರ್ಥಿಸಿದ್ದೆ. ಹಾಗಾಗಿ ಈ ಪಾತ್ರ ಅಮ್ಮನೇ ಕೊಟ್ಟಿದ್ದಾರೆ ಅಂತ ಅಂದುಕೊಂಡಿದ್ದೇನೆ” ಎಂದು ನಾಯಕಿ ಪಾತ್ರಧಾರಿ ಮೋಕ್ಷಿತಾ ಪೈ ಹೇಳಿದರು.
ಪಾರು ಬಳಿಕ ಜೀಯಲ್ಲಿ ಮತ್ತೊಂದು ಒಳ್ಳೆಯ ಅವಕಾಶ ದೊರಕಿದೆ. ಈ ಪಾತ್ರಕ್ಕೆ ನಾನೇ ಬೇಕು ಎಂದು ಹಠ ತೊಟ್ಟವರಲ್ಲಿ ಜೀಯ ಫಿಕ್ಷನ್ ಹೆಡ್ ಚೇತನ್ ಪ್ರಮುಖರು. ಅವರಿಗೆ ತ್ಯಾಂಕ್ಸ್. ಪಾತ್ರಕ್ಕಾಗಿ ಹಾರ್ಡ್ ವರ್ಕ್ ಮಾಡಿದ್ದೇನೆ ಎಂದು ಹೇಳುತ್ತಾ ಮೋಕ್ಷಿತಾ ಭಾವುಕರಾದರು. ಯಾಕೆಂದರೆ ಪ್ರಾಜೆಕ್ಟ್ ಸ್ವಲ್ಪ ತಡವಾಗಿ ಬರುತ್ತಿರುವುದಕ್ಕೆ ನೆಗೆಟಿವ್ ಕೂಡ ಕೇಳಬೇಕಾಗಿ ಬಂದಿತ್ತು ಎಂದರು. ವಿಜಯ್ ಅವರು ಸೆಟ್ ನಲ್ಲಿ ತಮಗೆ ಸ್ಫೂರ್ತಿ ನೀಡಿರುವುದಾಗಿ ಹೇಳಿದ್ದಾರೆ.
ವಿಜಯ್ ಸೂರ್ಯ ಈಗ ವಿಜಯ್ ಲಲಿತಾ ಸೂರ್ಯ
ವಿಜಯ್ ಸೂರ್ಯ ತಮ್ಮ ಹೆಸರನ್ನು ವಿಜಯ್ ಲಲಿತಾ ಸೂರ್ಯ ಎಂದು ಬದಲಾಯಿಸಿಕೊಂಡಿದ್ದಾರೆ. ಮೋಕ್ಷಿತಾ ಪೈ ಅವರು ಪಾತ್ರಕ್ಕಾಗಿ ತುಂಬ ಸಮರ್ಪಣಾಭಾವದಿಂದ ಕೆಲಸ ಮಾಡಿದ್ದಾರೆ. ಆ್ಯಕ್ಷನ್ ದೃಶ್ಯಗಳಿಗಾಗಿ ಕಷ್ಟಪಟ್ಟಿದ್ದಾರೆ ಎನ್ನುತ್ತಾ ಮಾತು ಶುರು ಮಾಡಿದ ವಿಜಯ್ ಲಲಿತಾ ಸೂರ್ಯ, “ಈ ನಿರ್ದೇಶಕರ ತಂಡದೊಂದಿಗೆ ನಟಿಸಲು ಸಾಕಷ್ಟು ಪ್ಲ್ಯಾನ್ ಆಗುತ್ತಿತ್ತು. ಆದರೆ ಇಷ್ಟು ವರ್ಷಗಳ ಬಳಿಕ ಈಗ ಕಾಲ ಕೂಡಿ ಬಂದಿದೆ. ಬಹುಶಃ ದೇವಿ ಹೆಸರಿರುವ ಈ ಪ್ರೊಜೆಕ್ಟ್ ಗೆಂದೇ ಆ ತಾಯಿ ಕಾಯಿಸಿದ ಹಾಗಿದೆ ಎಂದು ವಿಜಯ್ ಸೂರ್ಯ ಹೇಳಿದರು. ನಾನು ಯಾವಾಗಲೂ ಒಂದು ಪ್ರಾಜೆಕ್ಟ್ ಒಪ್ಪಿಕೊಳ್ಳುವಾಗ ಕಥೆಗಿಂತ ಮೊದಲು ತಂಡದ ಬಗ್ಗೆ ನೋಡುತ್ತೇನೆ. ತಂಡದೊಂದಿಗೆ ಹೊಂದಿಕೊಳ್ಳಲು ಸಾಧ್ಯ ಎಂದಾದಾಗ ಕಥೆಯೂ ಇಷ್ವವಾದಾಗ ಮಾತ್ರ ಒಪ್ಪಿಕೊಳ್ಳುತ್ತೇನೆ. ಇಲ್ಲಿ ಎರಡೂ ಕೂಡಿ ಬಂದಿದೆ” ಎಂದರು.

ತಮ್ಮ ಪಾತ್ರದಲ್ಲಿ ರೊಮಾನ್ಸ್ ಜತೆಗೆ ಆ್ಯಕ್ಷನ್ ಕೂಡ ಇದೆ. ಮದುವೆಯಾಗಿ ಇಬ್ಬರು ಮಕ್ಕಳಿರುವ ನನಗೆ ರೊಮಾನ್ಸ್ ಮೈಂಡ್ ಸೆಟ್ ಇಲ್ಲ. ಆದರೆ ಪಾತ್ರಕ್ಕಾಗಿ ಮಾಡಿದ್ದೇನೆ. ಖಂಡಿತವಾಗಿ ಈ ಧಾರಾವಾಹಿ ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ಭರವಸೆ ನನಗಿದೆ. ಅದೇ ರೀತಿ ಕವಿತಾ ಅವರೊಂದಿಗೆ ಮತ್ತೊಮ್ಮೆ ನಟಿಸುವ ಅವಕಾಶ ದೊರಕಿದೆ ಎಂದರು.
ಮಾಧ್ಯಮ ಕ್ಷೇತ್ರದ ಪಾತ್ರವಾಗಿ ಕವಿತಾ ಗೌಡ
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ಕವಿತಾ ಅವರು ಈ ಧಾರಾವಾಹಿಯಲ್ಲಿ ಒಂದು ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ಟಿವಿ ಮಾಧ್ಯಮದಲ್ಲಿ ಕೌಶಿಕಿ ಎನ್ನುವ ಪತ್ರಕರ್ತೆಯಾಗಿ ಕಾಣಿಸಲಿದ್ದಾರೆ. ವರ್ಷಗಳ ಬಳಿಕವಾದರೂ ಕಿರುತೆರೆಗೆ ಮರಳಲು ಸಾಧ್ಯವಾಗಿಸಿದ್ದಕ್ಕೆ ತಂಡಕ್ಕೆ ತ್ಯಾಂಕ್ಯು ಸೋ ಮಚ್ ಎಂದರು.
ಸ್ಟೈಲಿಷ್ ಖಳನಾಗಿ ವಚನ್ ಹೊಸಮಠ
ಧಾರಾವಾಹಿಯಲ್ಲಿ ಒಬ್ಬರು ಸ್ಟೈಲಿಷ್ ಖಳನಾಯಕನಾಗಿ ವಚನ್ ಹೊಸಮಠ ನಟಿಸಲಿದ್ದಾರೆ. ಯುವರಾಜ ಅರಸ್ ಎನ್ನುವುದು ಇವರ ಪಾತ್ರದ ಹೆಸರು. ಈ ಪಾತ್ರ ಶೋ ಸ್ಟಾಪರ್ ತರಹ ಇರುತ್ತದೆ ಎನ್ನುವುದು ಧಾರಾವಾಹಿ ತಂಡದ ಅನಿಸಿಕೆ. ತಮಗೆ ಅವಕಾಶ್ ಕೊಟ್ಟಿದ್ದಕ್ಕಾಗಿ ವಚನ್ ವಂದನೆ ಸಲ್ಲಿಸಿದರು.
ಪೋಷಕ ಪಾತ್ರಗಳಲ್ಲಿ ಖ್ಯಾತ ತಾರೆಯರ ದಂಡು
ಹಿರಿಯ ನಟಿ ಗಿರಿಜಾ ಲೋಕೇಶ್ ನಾಯಕಿಯ ಅಜ್ಜಿ ಪಾತ್ರ ನಿರ್ವಹಿಸುತ್ತಿರುವುದಾಗಿ ತಿಳಿಸಿದರು. ‘ಡಾರ್ಲಿಂಗ್ ಸುಬ್ಬು’ ಎಂದು ಕರೆಸಿಕೊಳ್ಳುವ ಪಾತ್ರ ತಮ್ಮದು ಎಂದರು. ಅಂದಹಾಗೆ ಜಗದ್ಧಾತ್ರಿಯ ತಾಯಿ ಪಾತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಾನಸಿ ಸುಧೀರ್ ನಟಿಸುತ್ತಿದ್ದಾರೆ. ಅವರ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದ ಕಾರಣ, ಅವರು ಸುದ್ದಿಗೋಷ್ಠಿಗೆ ಹಾಜರಿರಲಿಲ್ಲ.
ನಟ ಮೈಕೋ ಮಂಜು ಮಾತನಾಡಿ, ತಮ್ಮದು ಅಸಹಾಯಕ ತಂದೆಯ ಪಾತ್ರ. ‘ಕಮಲಿ’ ಧಾರಾವಾಹಿಯ ಬಳಿಕ ಒಂದು ಗ್ಯಾಪ್ ಆಗಿತ್ತು. ಈಗ ಮತ್ತೆ ಜೀಗೆ ಮರಳಿದ್ದೇನೆ. ಅದೇ ರೀತಿ ಮೊದಲ ಧಾರಾವಾಹಿಯಲ್ಲೇ ಗಿರಿಜಾ ಲೋಕೇಶ್ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿತ್ತು. ಈಗಲೂ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದರು.
ಖ್ಯಾತ ನಟಿ ಲಕ್ಷ್ಮೀ ಸಿದ್ದಯ್ಯ ಅವರು ರೇಖಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣದ ಸಂದರ್ಭದಲ್ಲಿ ಮೋಕ್ಷಿತಾರನ್ನು ತಾವೆಲ್ಲ “ಅಮ್ಮಾ” ಎಂದೇ ಕರೆಯುತ್ತಿದ್ದೆವು ಎಂದು ಹೇಳಿದ್ದಾರೆ. ಮಧ್ಯಮ ವರ್ಗದ ಮಹಿಳೆಯ ಪಾತ್ರದಲ್ಲಿರುವ ತಮಗೆ ಉಮಾಗೋಲ್ಡ್ ಧರಿಸಿ ಅದನ್ನೇ ಚಿನ್ನ ಎಂದು ತೋರಿಸುವ ಹುಚ್ಚು ಇರುತ್ತದೆ. ಘಟವಾಣಿ ಹೆಣ್ಣಾಗಿ ನಾಯಕಿಗೆ ಕಾಟ ಕೊಡುತ್ತಿರುತ್ತೇನೆ ಎಂದರು. ಎಲ್ಲ ಪಾತ್ರಧಾರಿಗಳು ಒಂದೇ ಕುಟುಂಬದ ಹಾಗೆ ಇರುತ್ತೇವೆ ಎಂದರು.
ಜನಪ್ರಿಯ ನಟಿ ಅರುಣಾ ಬಾಲರಾಜ್ ಅವರು ಇಲ್ಲಿ ಅತ್ತ ನೆಗೆಟಿವ್ ಕೂಡ ಅಲ್ಲದ, ಇತ್ತ ಪಾಸಿಟಿವ್ ಕೂಡ ಅಲ್ಲದ ಪಾತ್ರ ಮಾಡಿರುವುದಾಗಿ ಹೇಳಿದರು. ಈ ಧಾರಾವಾಹಿ ಲಾಂಚಿಂಗ್ ಕಾರ್ಯಕ್ರಮಕ್ಕೆ ನಾವೆಲ್ಲರೂ ಪಾತ್ರದ ಕಾಸ್ಟ್ಯೂಮ್ಸ್ ನಲ್ಲೇ ಬಂದಿದ್ದೇವೆ. ಯಾಕೆಂದರೆ ಪ್ರತಿ ಕಾಸ್ಟ್ಯೂಮ್ ಕೂಡ ಒಂದು ಅರ್ಥವನ್ನು ಸೂಚಿಸುವುದಾಗಿ ಅರುಣಾ ಬಾಲರಾಜ್ ಹೇಳಿದರು.
ಧಾರಾವಾಹಿಗೆಂದೇ ಹಿನ್ನೆಲೆ ಸಂಗೀತದ ಸೃಷ್ಟಿ!
ಸಾಮಾನ್ಯವಾಗಿ ಧಾರಾವಾಹಿಗಳಿಗೆ ಸಿನೆಮಾದ ಹಿನ್ನೆಲೆ ಸಂಗೀತವನ್ನೇ ಬಳಸಲಾಗುತ್ತದೆ. ಅಥವಾ ಇದ್ದಬದ್ದ ಹಳೆಯ ಸಂಗೀತವನ್ನೇ ಮತ್ತೆ ಮತ್ತೆ ಬಳಸುತ್ತಾರೆ. ಆದರೆ ಜಗದ್ಧಾತ್ರಿ ಇವೆಲ್ಲಕ್ಕಿಂತ ವಿಭಿನ್ನವಾಗಿರಲಿದೆ. ಈ ಧಾರಾವಾಹಿಗೆಂದೇ ವಿಶೇಷವಾಗಿ ಹಿನ್ನೆಲೆ ಸಂಗೀತ ಸಂಯೋಜಿಸಲಾಗಿದೆ. ಆಕಾಶ್ ಪರ್ವ ಅವರು ಈ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಜಗದ್ಧಾತ್ರಿ ಗೇಮ್
ಜಗದ್ಧಾತ್ರಿ ಎನ್ನುವುದು ಕಿರುತೆರೆ ಧಾರಾವಾಹಿಯಾಗಿ ಮಾತ್ರ ಉಳಿಯುತ್ತಿಲ್ಲ. ಜಗದ್ಧಾತ್ರಿ ಹೆಸರಿನ ಗೇಮ್ ಶುರುವಾಗಲಿದೆ. ಮುಂದಿನ ವಾರದಿಂದ ಜಿ 5ನಲ್ಲಿ ಆ್ಯಪ್ ಮೂಲಕ ಈ ಆಟವನ್ನು ಆಡಬಹುದು ಎಂದು ಧಾರಾವಾಹಿ ತಂಡ ತಿಳಿಸಿದೆ.
ಮೊದಲ ಸಂಚಿಕೆ 40 ನಿಮಿಷ..!
ಇದೇ ಸಪ್ಟೆಂಬರ್ 28ರ ಸೋಮವಾರದಿಂದ ರಾತ್ರಿ 9 ಗಂಟೆಗೆ ಧಾರಾವಾಹಿ ಪ್ರಸಾರವಾಗಲಿದೆ. ಇದರ ಮೊದಲ ಸಂಚಿಕೆ 40 ನಿಮಿಷಗಳ ಕಾಲ ಇರಲಿರುವುದು ವಿಶೇಷ. ಸಿನಿಮಾ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮಹೇಶ್ ರಾವ್ ಹಾಗೂ ಪ್ರಕಾಶ್ ಅವರ ನಿರ್ಮಾಣದಲ್ಲಿ ಸಿದ್ಧವಾಗಿರುವ ಈ ಧಾರಾವಾಹಿಗೆ ಮಹೇಶ್ ಸಾರಂಗ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕೀರ್ತಿ ಅಕ್ಷಯ್ ಬ್ಯಾನರ್ ಅಡಿಯಲ್ಲಿ ಧಾರಾವಾಹಿ ನಿರ್ಮಾಣವಾಗುತ್ತಿದೆ.

