ಇದು ಗಣೇಶನ ಹಬ್ಬದ ಕಾಲ. ಇದೇ ಸಂದರ್ಭದಲ್ಲಿ ನಿರ್ದೇಶಕ ಸಂದೇಶ್ ಶೆಟ್ಟಿಅಜ್ರಿ ಪಚ್ಚೆ ಗಣೇಶನೊಂದಿಗೆ ಬಂದಿದ್ದಾರೆ. ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಫಸ್ಟ್ ಲುಕ್ ಮೋಶನ್ ಪೋಸ್ಟರ್ ಅನ್ನು ಪಚ್ಚೆ ಗಣೇಶನ ಆಶೀರ್ವಾದೊಂದಿಗೆ ವೇದಿಕೆಯಲ್ಲಿ ಅನಾವರಣಗೊಳಿಸಲಾಯಿತು.
ಚಿತ್ರದ ಹೆಸರಿನ ಜತೆಗೆ ಸಂಬಂಧವೇ ಇರದ ಹಾಗೆ ‘ಇದು ದೇವರ ತಾಣ’ ಎನ್ನುವ ಟ್ಯಾಗ್ ಲೈನ್ ಇದೆ. ನಿರ್ದೇಶಕರ ಪ್ರಕಾರ ಇದು ತಮಾಷೆಗೆ ಹಾಕಿರುವ ಅಡಿ ಬರಹವಲ್ಲ. ಇದು ಸಿನೆಮಾದ ಮತ್ತೊಂದು ಶೀರ್ಷಿಕೆ. ಯಾಕೆಂದರೆ ಚಿತ್ರದ ಮಧ್ಯಂತರದ ಬಳಿಕ ಪಚ್ಚೆ ಗಣಪನ ಹಿನ್ನೆಲೆಯಲ್ಲಿ ಚಿತ್ರ ಮುಂದುವರಿಯುತ್ತದೆ ಎಂದಿದ್ದಾರೆ. ಪೂರ್ತಿ ಚಿತ್ರತಂಡದ ಸಮ್ಮುಖದಲ್ಲಿ ಪೋಸ್ಟರ್ ಲಾಂಚ್ ಮಾಡುವುದರ ಜತೆಗೆ ಚಿತ್ರ ತಂಡದ ಪರಿಚಯ ಮಾಡಿದೆ.

ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ಸೆನ್ಸೇಶನಲ್ ಸ್ಟಾರ್ ಕೋಮಲ್ ಮಾತನಾಡಿ, ಕಥೆ ಕೇಳಿದಾಗಲೇ ಕುತೂಹಲ ಮೂಡಿಸಿದಂಥ ಚಿತ್ರ ಇದು. ಸಾಮಾನ್ಯವಾಗಿ ಪಚ್ಚೆ ಗಣಪತಿ ಎನ್ನುವುದು ಎಲ್ಲಿಯೂ ಕಾಣಿಸಲ್ಲ. ಅಂಥ ಗಣೇಶನನ್ನೇ ಇಟ್ಟುಕೊಂಡು ಕಥೆ ಮಾಡಿದ್ದಾರೆ. ಈ ತಂಡದ ಕೆಲಸದ ರೀತಿಯೂ ಮೆಚ್ಚುವಂಥದ್ದು. ಇವರ ರೀತಿ ಶಿಸ್ತುಬದ್ಧವಾಗಿ ನಾನು ಕೂಡ ಪ್ರಿಪ್ರೊಡಕ್ಷನ್ ಕೆಲಸ ಮಾಡಿದ್ದಲ್ಲಿ ನಿರ್ಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದ್ದೆ ಅನಿಸುತ್ತೆ ಎಂದು ತಂಡದ ಬಗ್ಗೆ ಮೆಚ್ಚುಗೆ ಮಾತನಾಡಿದರು. ಅದೇ ರೀತಿ ಸೆಟ್ ಹಾಕುವ ಯೋಜನೆ ಮತ್ತು ಸೆಟ್ ಬಳಸುವ ರೀತಿಯನ್ನು ಇವರಿಂದಲೇ ಕಲಿಯಬೇಕು ಎಂದು ಪ್ರಶಂಸಿಸಿದರು.
ಚಿತ್ರದಲ್ಲಿನ ಪ್ರಧಾನ ಮಹಿಳಾ ಪಾತ್ರವನ್ನು ಮೇಘನಾ ರಾಜ್ ಮಾಡಿದ್ದಾರೆ. ಅದರಲ್ಲಿ ಅವರು ಕೇರಳದ ಭಾಗವೊಂದರ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಮೇಘನಾ, “ನನ್ನ ಮಾತೃಭಾಷೆ ಕನ್ನಡ. ಮನಸಿಗೆ ಹತ್ತಿರವಾಗಿರುವ ಭಾಷೆ ಮಲಯಾಳಂ. ಹಾಗಾಗಿಯೇ ಕಥೆ ಕೇಳಿದಾಗ ಇಷ್ಟವಾಯಿತು. ಕೋಮಲ್ ಸರ್ ಅವರೊಂದಿಗೆ ಮೊದಲ ಚಿತ್ರ. ಕೋಮಲ್ ಅವರು ತುಂಬ ಸೂಕ್ಷ್ಮವಾಗಿ ಜೋಕ್ ಮಾಡುತ್ತಾರೆ. ನಮ್ಮ ಚಿತ್ರ ತಕ್ಕಮಟ್ಟಿಗೆ ಉತ್ತಮ ಬಜೆಟ್ ಹೊಂದಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಅಶ್ರಫ್ ಮಾಸ್ಟರ್ ಅವರು ನನಗೆ ಸಾಹಸ ತರಬೇತಿ ನೀಡಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದೇನೆ ಎಂದರು.
ಅನುಷಾ ರೈ ಮಾತನಾಡಿ, ಮೊದಲ ಬಾರಿ ದ್ವಿಪಾತ್ರ ಮಾಡುತ್ತಿದ್ದೇನೆ. ಸಂಗೀತ ಮತ್ತು ಸಾಹಿತ್ಯ ಎನ್ನುವುದು ನನ್ನ ಎರಡು ಹೆಸರುಗಳು. ಇನ್ನು ಮೇಘನಾ ರಾಜ್ ಅವರು ನಮ್ಮೊಂದಿಗೆ ಜೋವಿಯಲ್ ಆಗಿದ್ರು.

ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಮಾತನಾಡಿ, ಸದ್ಯಕ್ಕೆ ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್ ನಿಂದ ಈಗ 30 ಎಮ್.ಎಲ್ ಮಾತ್ರ ಬಿಡುಗಡೆಯಾಗಿದೆ. ಇನ್ನು ಟೀಸರ್, ಟ್ರೇಲರ್ ಬಳಿಕ ಬಿಡುಗಡೆಯೂ ಸೇರಿದರೆ ಫುಲ್ ಬಾಟಲ್ ಕಿಕ್ ದೊರೆಯಲಿದೆ ಎಂದರು. ನಾನು ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವ ಪುಟ್ಟ ನಿರ್ದೇಶಕ. ಆದರೆ ಈ ಚಿತ್ರಕ್ಕಾಗಿ ಕೋಮಲ್ ಅವರಂಥ ಅನುಭವಿ ನಟರು ನೀಡಿದ ಸಹಕಾರ ಅದ್ಭುತವಾಗಿತ್ತು. ಅವರು ಶೂಟಿಂಗ್ ಲೊಕೇಶನ್ ಗೆ ನಾವು ಹೇಳುವ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಬರುತ್ತಿದ್ದರು. ಅದೇ ರೀತಿ ಮೇಘನಾ ರಾಜ್ ಅವರು ಬಹುಭಾಷಾ ನಟಿ. ಆದರೆ ನಮ್ಮೊಂದಿಗೆ ಸರಳವಾಗಿ ಬೆರೆತರು. ಅನುಷಾ ರೈ ಕೂಡ ಯಾವುದೇ ಅಸಮಾಧಾನಗಳಿಲ್ಲದೆ ಅಭಿನಯಿಸಿದ್ದು ಖುಷಿ ನೀಡಿದೆ ಎಂದರು.
ನಟ ವಜ್ರಧೀರ್ ಜೈನ್ ಅವರು ಕನ್ನಡದ ಆಸ್ತಿ. ಅದನ್ನು ಸಾಬೀತು ಮಾಡುವಂಥ ಪಾತ್ರ ಮಾಡಿದ್ದಾರೆ. ಇನ್ನು ಈ ಚಿತ್ರದ ವಸ್ತ್ರ ವಿನ್ಯಾಸ ಮಾಡಿರುವುದು ನನ್ನ ಪತ್ನಿ ಎಂದು ನೆನಪಿಸಿಕೊಂಡರು.
ಇದು19ನೇ ಶತಮಾನದಲ್ಲಿನ ಕಾಸರಗೋಡು ಜಿಲ್ಲೆಯ ಕಾಯಂಕೋಡ್ ಎಂಬಲ್ಲಿನ ರಾಣಿಯ ಕಥೆ. ಐತಿಹಾಸಿಕಕ್ಕೆ ಕಾಲ್ಪನಿಕತೆ ಬೆರೆಸಿ ಮಾಡಿರುವ ಕಥೆ ಇದು. ರಾಣಿ ವರ್ಣಚಿತ್ರ ಕಲಾವಿದೆಯೂ ಆಗಿರುತ್ತಾಳೆ ಎಂದರು. ಈ ಚಿತ್ರಕ್ಕಾಗಿ 9 ಸೆಟ್ ಗಳನ್ನು ಹಾಕಲಾಗಿತ್ತು . ಒಂದು ರೀತಿಯಲ್ಲಿ ನೋಡಿದರೆ ಪಚ್ಚೆ ಗಣಪನೇ ಚಿತ್ರದ ನಾಯಕ ಎಂದು ಸಂದೇಶ್ ಶೆಟ್ಟಿ ಅಜ್ರಿ ಹೇಳಿದರು. ಅವರು ಈ ಕಥೆಯನ್ನು ತಾವು 2012 ರಲ್ಲಿಯೇ ಬರೆದು ಮುಗಿಸಿದ್ದಾಗಿ ಹೇಳಿದರು. ನಿರ್ದೇಶನದ ಜತೆಗೆ ಸುಲ್ತಾನ್ ಎನ್ನುವ ಪಾತ್ರ ಮಾಡಿದ್ದಾಗಿ ಹೇಳಿದರು.

ನಿರ್ಮಾಪಕ ವಿಕಾಸ್ ಶೆಟ್ಟಿ ಮಾತನಾಡಿ, ಈ ಚಿತ್ರ ಮಾಡುವಾಗ ನವರಸನಾಯಕ ಜಗ್ಗೇಶ್ ಅವರ ಸಲಹೆ ಇತ್ತು. ಅದು ನನಗೆ ಸಹಾಯ ಮಾಡಿದೆ ಎಂದರು.
ಬಿಗ್ ಬಾಸ್ ಖ್ಯಾತಿಯ ಸಿರಿ ತಾವು ನಾಲ್ವರ ತಂಡದಲ್ಲಿ ಒಬ್ಬರಾಗಿ ಕಾಣಿಸಿರುವುದಾಗಿ ಹೇಳಿದರು. ತಂಡದಲ್ಲಿ ತಮ್ಮನ್ನು ಬಿಟ್ಟು ಮೂವರು ಹುಡುಗರು ಎಂದರು. ಮೇಘನಾ ಅವರು ರಾಣಿಯ ಪಾತ್ರದಲ್ಲಿ ತುಂಬ ಚೆನ್ನಾಗಿ ಕಾಣಿಸುತ್ತಿದ್ದರು. ನನ್ನ ಪಾತ್ರದ ಬಗ್ಗೆ ಹೇಳುವಂತಿಲ್ಲ ಎಂದರು.
ಜನಪ್ರಿಯ ನಟ ಪ್ರಶಾಂತ್ ಸಿದ್ದಿ ಮಾತನಾಡಿ, ನಿರ್ಮಾಪಕರನ್ನು ಮುಹೂರ್ತದ ಬಳಿಕ ಇವತ್ತೇ ನೋಡುತ್ತಿರುವುದು ಎಂದರು. ಬಳಿಕ ಹಿರಿಯ ಪೋಷಕ ನಟ ಎಮ್.ಕೆ. ಮಠ ಮಾತನಾಡಿ, ತಮ್ಮದು ಗಣೇಶನ ದೇವಾಲಯದ ಅರ್ಚಕನ ಪಾತ್ರ. ಈ ಚಿತ್ರದ ಸ್ಕ್ರಿಪ್ಟ್ ,ನಿಂದ ಚಿತ್ರೀಕರಣದ ತನಕ ನಾನು ಸಂದೇಶ್ ಅವರನ್ನು ಗಮನಿಸಿದ್ದೇನೆ. ಅವರು ಒಬ್ಬ ಒಳ್ಳೆಯ ನಿರ್ದೇಶಕ ಎಂದು ಅರ್ಥಮಾಡಿಕೊಂಡಿದ್ದೇನೆ ಎಂದರು.
ರಂಗಭೂಮಿ ಕಲಾವಿದೆ ದಿವ್ಯಾ ಭಾಸ್ಕರ್ ಆಚಾರ್ಯ ಮಾತನಾಡಿ, ಮೊದಲ ಚಿತ್ರದಲ್ಲೇ ಒಳ್ಳೆಯ ಅವಕಾಶ ಸಿಕ್ಕಿರುವುದಾಗಿ ತಿಳಿಸಿದರು. ನಟಿ ರಾಧಿಕಾ ರಾವ್ ಮಾತನಾಡಿ, ನಾನು ಮಂಗಳೂರಿನ ಕಲಾವಿದೆ. ರಂಗಭೂಮಿಯಿಂದ ಬಂದಿದ್ದೇನೆ ಎಂದರು. ಕಿರುತೆರೆಯ ಜನಪ್ರಿಯ ನಟಿ ಸಿರಿ ಮಾತನಾಡಿ, ಈ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ತ್ಯಾಂಕ್ಸ್. ಆದರೆ ಪಾತ್ರದ ಬಗ್ಗೆ ಸದ್ಯಕ್ಕೆ ಏನೂ ಹೇಳುವಂತಿಲ್ಲ ಎಂದರು. ಪ್ರಕಾಶ್ ರಾಜ್ ಅವರ ರಂಗ ಶಿಬಿರದಿಂದ ಹೊಮ್ಮಿದಂಥ ಪ್ರತಿಭೆ ಅಕ್ಷತಾ ಅವರು ಸೇರಿದಂತೆ ಲಕ್ಷ್ಮೀ ಪ್ರಿಯ, ದಾಮೋದರ್ , ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ, ರಘು ರಾಮನಕೊಪ್ಪ ಹೀಗೆ ಜನಪ್ರಿಯ ಕಲಾವಿದರ ದಂಡೇ ಅಲ್ಲಿತ್ತು.

