ಇಶಾ ಚಿತ್ರರಂಗ ಪ್ರವೇಶ

ಕನ್ನಡ ಚಿತ್ರರಂಗದಲ್ಲಿ ಪಿ. ಲಂಕೇಶ್ ಅಳಿಸಲಾಗದ ಅಧ್ಯಾಯ.‌ ಮಾಧ್ಯಮ, ಸಾಹಿತ್ಯದ ಸಹವಾಸದೊಂದಿಗೆ ಚಿತ್ರರಂಗ ಪ್ರವೇಶಿಸಿ ಹೊಸ ಅಲೆಯ ಸೃಷ್ಟಿಗೆ ಕಾರಣರಾದವರು ಲಂಕೇಶ್. ವಿಶ್ವ ಮಹಿಳಾ‌ದಿನಾಚರಣೆಯಂದೇ ಜನಿಸಿದ ಇವರು, ಮಹಿಳಾ ಪ್ರಾಧಾನ್ಯತೆಯ ದೃಷ್ಟಿಕೋನ ಹೊಂದಿದ್ದರು. ಸ್ವತಃ ನಿರ್ದೇಶಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಪಲ್ಲವಿ ಚಿತ್ರದಲ್ಲೂ ಅವರ ಮಹಿಳಾ ಪರ ಧೋರಣೆಯನ್ನು ಕಾಣಬಹುದಿತ್ತು. ಗೌರಿ ಮತ್ತು ಕವಿತಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಲ್ಲಿಯೂ ಅಗಾಧ ಪ್ರೀತಿ ಇರಿಸಿದ್ದರು. ನಿರ್ದೇಶಕಿಯಾಗಿ ಹೆಸರು ಮಾಡಿದ ಕವಿತಾ ಲಂಕೇಶ್ ಬಳಿಕ ಇದೀಗ ಕವಿತಾ ಪುತ್ರಿ ಇಶಾ ಕೂಡ ಸಿನಿಮಾ ಪಥಕ್ಕೆ ಕಾಲಿಡುತ್ತಿದ್ದಾರೆ. ಇದೇ ತಿಂಗಳಾರಂಭದಲ್ಲಿ ಅಜ್ಜಿ ಇಂದಿರಾ ಲಂಕೇಶ್ ನಿಧನರಾದಾಗ ಖುದ್ದಾಗಿ ಕೊಳ್ಳಿಯಿಟ್ಟು ಸುದ್ದಿಯಾದವರು ಇಶಾ. ಇದೀಗ ಅಜ್ಜಿ ಸೇರಿದಂತೆ ತಲೆಮಾರಿನ ಕನಸುಗಳ ಬಳ್ಳಿ ಚಿಗುರಿಸಿದ್ದಾರೆ. ನಾಯಕಿಯಾಗಿ ಬೆಳ್ಳಿ ಪರದೆಗೆ ಎಂಟ್ರಿ ನೀಡಿದ್ದಾರೆ. ಅವರೊಡನೆ ಸಿನಿಕನ್ನಡ.ಕಾಮ್ ನಡೆಸಿದ ಮಾತುಕತೆ ಇದು.

ಶಶಿಕರ ಪಾತೂರು

ಸಿನಿಮಾ‌ ನಟನೆಯ ಆಸಕ್ತಿ ನಿಮ್ಮಲ್ಲಿ ಹುಟ್ಟಿದ್ದು ಯಾವಾಗ?

ಸಿನಿಮಾ ಅಂತ ಅಲ್ಲ. ನಟನೆ ಎನ್ನುವುದು ನನ್ನ ಸ್ಟುಡೆಂಟ್ ಲೈಫ್ ನಲ್ಲೇ ಸೇರಿತ್ತು. ನಾನು ಕಳೆದ ನಾಲ್ಕು ವರ್ಷಗಳಿಂದ ದೆಹಲಿ ಅಶೋಕ ಯೂನಿವರ್ಸಿಟಿಯ ವಿದ್ಯಾರ್ಥಿನಿ.‌ ಅಲ್ಲಿ ನಾನು ಲಿಟರೇಚರ್ ಆ್ಯಂಡ್ ಪರ್ಫಾರ್ಮಿಂಗ್ ಆರ್ಟ್ಸ್ ಅಂದ್ರೆ ಡ್ರಾಮದಲ್ಲೇ ಪದವಿ ಮಾಡಿದ್ದೇನೆ. ಕಳೆದ ವರ್ಷ ಯುಕೆಯ ಬರ್ಮಿಂಗ್ಹ್ಯಾಮ್‌ ವಿಶ್ವವಿದ್ಯಾಲಯದ ಡ್ರಾಮ ವಿಭಾಗದಲ್ಲಿ ಅಧ್ಯಯನ ಮಾಡಿದ್ದೇನೆ. ತೀರ ಇತ್ತೀಚೆಗೆ ಪ್ರಕಾಶ್ ಸರ್ ಅವರ ‘ನಿರ್ದಿಗಂತದ’ ಕಾರ್ಯಾಗಾರದಲ್ಲೂ ಮೂರು ವಾರ ಭಾಗಿಯಾಗಿದ್ದೆ.

ರಂಗಭೂಮಿಯಿಂದ ನೇರ ಸಿನಿಮಾಗೆ ಪ್ರವೇಶ ಮಾಡಿದ್ದು ಹೇಗೆ?

ರಂಗಭೂಮಿಯಲ್ಲಿದ್ದಾಗ ಸಹಜವಾಗಿ ನಾನು ಎಲ್ಲ ವಿಭಾಗಗಳಲ್ಲಿ ಕೂಡ ತೊಡಗಿಕೊಂಡಿದ್ದೆ. ಅಭಿನಯಿಸುವುದರ ಜತೆಗೆ ನಿರ್ದೇಶನ ಕೂಡ ಮಾಡಿದ್ದೇನೆ‌. ಅಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸಿನಿಮಾಗಳಿಗೆ, ಜಾಹಿರಾತುಗಳಿಗೆ ಆಡಿಶನ್ ಕೂಡ ಕೊಡ್ತಾ ಇದ್ದೆ. ಮಾಧ್ಯಮ ಬೇರೆ ಬೇರೆಯಾದರೂ ನಟನೆಯ ಕಲೆ ಎನ್ನುವುದು ಒಂದೇ ಎಂದು ನನ್ನ ಅನಿಸಿಕೆ. ಹಾಗೆ ವಿದ್ಯಾಭ್ಯಾಸ ಮುಗಿಸಿದ ಬಳಿಕ ನಾನು ಪ್ರೀತಮ್ ಗುಬ್ಬಿಯವರ ಹೊಸ ಸಿನಿಮಾದ ಆಡಿಶನ್ ಗೂ ಅಪ್ಲೈ ಮಾಡಿದ್ದೆ. ಅವರು ಕೂಡ ಮೆಚ್ಚಿ ಪ್ರತಿಕ್ರಿಯಿಸಿ ಸ್ಕ್ರಿಪ್ಟ್ ಹೇಳಿದರು. ನನಗೂ ಒಕೆ ಅನಿಸಿತು.

ಈ‌‌‌ ಚಿತ್ರ ವಿಶೇಷತೆಗಳೇನು?

ಕಥೆ ಎರಡು ಪ್ರಮುಖ‌‌ ಪಾತ್ರಗಳ ಮೂಲಕ ನಡೆಯುತ್ತದೆ. ಇನ್ನೂ ಉಳಿದ ಕಾಸ್ಟಿಂಗ್ ಆಗಿಲ್ಲ. ಹೆಚ್ಚಿನ ಮಾಹಿತಿ ನೀಡುವ ಹಂತಕ್ಕೆ ಇನ್ನೂ ತಲುಪಿಲ್ಲ.

ನೀವು ಸಿನಿಮಾ ಒಪ್ಪಿಕೊಳ್ಳುವ ಮೊದಲು, ಒಟ್ಟು ಚಿತ್ರದ ಕತೆ ಕೇಳುವುದು ಕೂಡ ಮುಖ್ಯ ಎಂದುಕೊಳ್ಳುತ್ತೀರ?

ಖಂಡಿತವಾಗಿ. ಆದರೆ ಜಸ್ಟ್ ಕ್ಯಾರೆಕ್ಟರ್ ಹೇಳಿದಾಕ್ಷಣ ಅದು ಇಂಟರೆಸ್ಟಿಂಗ್ ಅನಿಸಿದ್ರೆ ಆಡಿಶನ್ ಗೆ ರೆಡಿ ಇರುತ್ತೇನೆ. ಪಾತ್ರ ಒಪ್ಪಿಕೊಳ್ಳುವ ಮೊದಲು ಪೂರ್ತಿ ಕಥೆ ಗೊತ್ತಾಗಲೇಬೇಕು. ಯಾಕೆಂದರೆ ಒಂದು ವೇಳೆ ನನ್ನ ಪಾತ್ರ ನೆಗೆಟಿವ್ ಆಗಿದ್ದರೂ ಪರ್ವಾಗಿಲ್ಲ. ಆದರೆ ಒಟ್ಟು ಸಿನಿಮಾ ಏನು ಹೇಳುತ್ತದೆ ಎನ್ನುವುದು ಮುಖ್ಯವಾಗುತ್ತದೆ.

ಕಲಾರಂಗದಲ್ಲಿ ನಿಮ್ಮ ಗುರಿ ಏನು?

ತುಂಬಾ ವಿಶಾಲವಾದ ಪ್ರಶ್ನೆ. ಸದ್ಯಕ್ಕೆ ನಾನು ಪಾತ್ರಗಳನ್ನು ಹೇಗೆ ಒಳಗೊಳ್ಳಬೇಕು ಎನ್ನುವುದರತ್ತ ಗಮನ ಹರಿಸಿದ್ದೇನೆ. ಸಿನಿಮಾದ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದೇನೆ‌.

ರಾಷ್ಟ್ರಮಟ್ಟದಲ್ಲಿ ಸ್ಟಾರ್ ಹೀರೋಯಿನ್ ಆಗಬೇಕು ಎನ್ನುವ ಆಸೆಗಳು ಇವೆಯೇ?

ಖಂಡಿತವಾಗಿ ಇದೆ.‌ ಆದರೆ ಮೊದಲು ಆಸಕ್ತಿಕರವಾದ ಪ್ರಾಜೆಕ್ಟ್ ಗಳನ್ನು ಮಾಡಬೇಕು. ಅದೇ ದೊಡ್ಡಮಟ್ಟದಲ್ಲಿ ಸಿಕ್ಕಿದರೆ ತುಂಬಾ ಖುಷಿ. ಇಲ್ಲವಾದರೆ ನಟನೆಗೆ ಉತ್ತಮ ಅವಕಾಶ ಇರುವ ಪಾತ್ರಗಳನ್ನು, ಕಥೆಗಳನ್ನು ಆಯ್ಕೆ ಮಾಡುತ್ತಾ ಹೋಗುತ್ತೇನೆ.

ನಿಮಗೆ ಕಲಾವಿದೆಯಾಗಿ ಸ್ಫೂರ್ತಿ ಅನಿಸುವ ನಟಿ ಯಾರು?

ತುಂಬಾ ಮಂದಿ ಇದ್ದಾರೆ. ನನಗೆ ಆರಂಭದಿಂದಲೇ ರಮ್ಯಾ ಅವರು ಇಷ್ಟ. ಈಗ ರುಕ್ಮಿಣಿ ವಸಂತ್ ಅವರು ಮಾಡುತ್ತಿರುವ ಪಾತ್ರಗಳು ಆಸಕ್ತಿಕರವಾಗಿರುತ್ತವೆ. ಅಭಿನೇತ್ರಿಯಾಗಿ ನಂದಿತಾ ದಾಸ್ ತುಂಬ ಇಷ್ಟ. ದೀಪಿಕಾ ಪಡುಕೋಣೆ ಕೂಡ ತುಂಬ ಚೆನ್ನಾಗಿ ಪಾತ್ರಗಳನ್ನು ನಿರ್ವಹಿಸುತ್ತಾರೆ.

ದೀಪಿಕಾ ಅವರನ್ನು ಚಿತ್ರರಂಗಕ್ಕೆ ತಂದ ಇಂದ್ರಜಿತ್ ಲಂಕೇಶ್ ಚಿತ್ರಗಳ ಬಗ್ಗೆ ಏನಂತೀರಿ?

ಅವರ ಚಿತ್ರಗಳು ಫನ್ ಆಗಿ, ಹೆಚ್ಚು ಮಾಸ್ ಆಗಿರುತ್ತವೆ. ಎಲ್ಲರಿಗೂ ಅವರದ್ದೇ ಆದ ಶೈಲಿಗಳಿರುತ್ತವಲ್ಲ .. ಹಾಗೆ!

ನಿಮ್ಮ ಇತರ ಹವ್ಯಾಸಗಳೇನು?

ಇಲ್ಲಸ್ಟ್ರೇಷನ್ ಮಾಡುತ್ತೇನೆ. ನನಗೆ ಕಲೆ ಅಂದರೆ ತುಂಬ ಇಷ್ಟ. ಪೆಯಿಂಟಿಂಗ್ ಮಾಡ್ತೀನಿ. ಚಿಕ್ಕವಳಾಗಿದ್ದಾಗಿ ಅಮ್ಮನ ಸಿನಿಮಾಗಳ ಆರ್ಟ್ ವಿಭಾಗದಲ್ಲೇ ಸಹಾಯ ಮಾಡುತ್ತಿದ್ದೆ. ನಾನು ಆಗ ಕ್ಯಾಮರಾ ಹಿಂದೆ ಚಿತ್ರದ ಭಾಗವಾಗಿರುತ್ತಿದ್ದೆ.

ತಾಯಿಯ ಸಿನಿಮಾಗಳು ನಿಮ್ಮ ಮೇಲೆ ಎಷ್ಟು ಪ್ರಭಾವ ಬೀರಿವೆ?

ತುಂಬಾನೇ ಬೀರಿವೆ. ‘ಅವ್ವ’, ‘ದೇವೀರಿ’ ನನ್ನ ಫೇವರಿಟ್ ಸಿನಿಮಾಗಳು. ಆದರೆ ಅವರ ಎಲ್ಲ ಸಿನಿಮಾಗಳನ್ನು ಬಾಲ್ಯದಿಂದಲೇ ನೂರಾರು ಬಾರಿ ನೋಡಿದ್ದೇನೆ. ಅಮ್ಮನೇ ಎಷ್ಟು ಸಾರಿ ನೋಡ್ತೀಯ ಅಂತ ಕೇಳಿದ್ದೂ ಇದೆ!

Recommended For You

Leave a Reply

error: Content is protected !!