ಬಂಟ್ವಾಳದ ಹುಡುಗಿ ಹಾಗೂ ಬೆಂಗಳೂರು ಹುಡುಗನ ಪ್ರೇಮಕಥೆಯನ್ನು ಹೇಳುವ ಲವ್ ಟು ಲಸ್ಸಿ ಚಿತ್ರದ ಹಾಡು ಮತ್ತು ಟೀಸರ್ ಬಿಡುಗಡೆ ಸಮಾರಂಭ ನೆರವೇರಿದೆ.
“ಮೊದಲ ಸಿನಿಮಾದ ಬಗ್ಗೆ ತುಂಬ ಸಂಭ್ರಮ, ತಳಮಳ ಎಲ್ಲವೂ ಇರುತ್ತದೆ. ಅದನ್ನು ನಾನು ಈ ತಂಡದಲ್ಲಿಯೂ ಕಾಣುತ್ತಿದ್ದೇನೆ. ನಾನು ಕೂಡ ಒರಟ ಬಿಡುಗಡೆ ಸಮಯದಲ್ಲಿ ಇಂಥ ಸಂದರ್ಭವನ್ನು ನಾನು ಎದುರಿಸಿದ್ದೇನೆ ಎಂದರು ಶ್ರೀ. ಅವರು ಲವ್ ಟು ಲಸ್ಸಿ ಟೀಸರ್ ಬಿಡುಗಡೆಗೊಳಿಸಿ ಈ ಮಾತು ಹೇಳಿದರು.
“ಸಿನಿಮಾ ಚಿಕ್ಕದೇ ಇರಬಹುದು. ಆದರೆ ದೊಡ್ಡ ಗೆಲುವು ಕಾಣದು ಎಂದು ಹೇಳಲಾಗದು. ಮಾತ್ರವಲ್ಲ ದೊಡ್ಡ ಸಿನಿಮಾಗಳು ವರ್ಷಕ್ಕೆ ಒಂದೆರಡಷ್ಟೇ ಬರುತ್ತವೆ. ಆದರೆ ಚಿತ್ರೋದ್ಯಮದಲ್ಲಿ ವರ್ಷ ಪೂರ್ತಿ ಊಟ ಹಾಕುವುದು ನಿರಂತರವಾಗಿ ಬರುವ ಹೊಸಬರ ಸಿನಿಮಾಗಳೇ ಎಂದರು ಶ್ರೀ. ಟೀಸರ್ ಬಿಡುಗಡೆಗೊಳಿಸಿದ ಬೆಂಗಳೂರು ಸೆಂಟ್ರಲ್ ಡಿಸ್ಟ್ರಿಕ್ಟ್ ನ ಬಿಜೆಪಿ ಅಧ್ಯಕ್ಷ ಸಪ್ತಗಿರಿ ಗೌಡ ಮಾತನಾಡಿ, ಲವ್ ಟು ಲಸ್ಸಿ ಎರಡು ಕೂಡ ಸಿಹಿಯಾದ ಪದಗಳು. ಟೀಸರ್ ನೋಡಿದಾಗ ಖುಷಿಯಾಯಿತು. ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವ ಚಿತ್ರವಾಗಿ ಕಾಣುತ್ತಿದೆ.
ನಿರ್ಮಾಪಕಿಯವರು ಒಳ್ಳೆಯ ಚಿತ್ರ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿರುವ ನಮ್ಮ ಕ್ಷೇತ್ರದ ಹುಡುಗಿ ಜೀವಿತಾ ಪ್ರಭಾಕರ್ ಅವರಿಗೂ ಶುಭಾಶಯಗಳು ಎಂದರು.
ಲವ್ ಟು ಲಸ್ಸಿ ಚಿತ್ರದ ನಿರ್ದೇಶಕ ಹರಿಪ್ರಾಣ ಅವರೇ ಎಲ್ಲ ಹಾಡುಗಳನ್ನು ಬರೆದಿದ್ದಾರೆ. ಬಾಲ್ಯದಿಂದಲೇ ಹಾಡು ರಚಿಸುವ ಹಾಗೂ ಪತ್ರಿಕೆಗಳಿಗೆ ಕಳಿಸುವ ಹವ್ಯಾಸ ಇತ್ತು. ಹಾಗಾಗಿ ನಾನೇ ಖುದ್ದಾಗಿ ಗೀತೆ ರಚಿಸಿದ್ದೇನೆ ಎಂದು ಹರಿ ಪ್ರಾಣ ಹೇಳಿದರು. ಈ ಸಂದರ್ಭದಲ್ಲಿ “ಕಣ್ಣ ನೀರು ಜಾರೋ ಮುನ್ನ ಮನ್ನಿಸು..” ಮತ್ತು”ನಿನ್ನ ನೋಡಿದಾ ಆ ಕ್ಷಣ..” ಎನ್ನುವ ಎರಡು ಹಾಡುಗಳನ್ನು ಪ್ರದರ್ಶಿಸಲಾಯಿತು. ಚಿತ್ರದ ಬಗ್ಗೆ ಮಾತನಾಡಿದ ಹರಿ ಪ್ರಾಣ, ಇದು ನನ್ನ ಸ್ನೇಹಿತರ ವಲಯದಲ್ಲಿ ನಡೆದ ಕಥೆ. ಬಂಟ್ವಾಳದ ಹುಡುಗಿ ಮತ್ತು ಬೆಂಗಳೂರಿನ ಹುಡುಗನ ಪ್ರೇಮಕಥೆ. 2006ರಲ್ಲಿ ನಡೆದಂಥ ನೈಜ ಘಟನೆ. ನಾನು ಅವರ ಒಪ್ಪಿಗೆ ಪಡೆದೇ ಈ ಸಿನಿಮಾ ಮಾಡಿದ್ದೇನೆ. ನಾಯಕ ಆರ್ಯನ್ ಗ್ಲಿಸರಿನ್ ಇಲ್ಲದೆ ಕಣ್ಣೀರು ಹಾಕಿರುವಂಥ ಪ್ರತಿಭಾವಂತ ಎಂದರು.

ನಾಯಕ ಆರ್ಯನ್ ಮಾತನಾಡಿ, ನನ್ನ ಮೊದಲ ಚಿತ್ರ ವೇಷಧಾರಿ. ಅದು ಕಾದಂಬರಿ ಆಧಾರಿತವಾಗಿತ್ತು. ಇದೀಗ ಒಬ್ಬರ ಜೀವನದಲ್ಲಿ ನಡೆದ ನೈಜ ಘಟನೆಗೆ ಜೀವ ತುಂಬುತ್ತಿರುವುದು ಖುಷಿ ನೀಡಿದೆ. ನಾಯಕಿ ಜೀವಿತಾ ಜೊತೆಗಿನ ಪುಟಗಟ್ಟಲೆ ಸಂಭಾಷಣೆಗಳನ್ನು ಅನಾಯಾಸವಾಗಿ ಮಾತನಾಡಿದ್ದೇವೆ. ಈ ಚಿತ್ರಕ್ಕೆ ವಿನು ಮನಸು ಅವರೇ ಸಂಗೀತ ನೀಡಬೇಕು ಎನ್ನುವುದು ನನ್ನಾಸೆಯಾಗಿತ್ತು. ಯಾಕೆಂದರೆ ಈ ಹಿಂದೆ ನಾನು ಹರ್ಷಿಕಾಗೆ ಜೋಡಿಯಾಗಿದ್ದ ‘ಅದಿತಿ’ ಚಿತ್ರದಲ್ಲಿಯೂ ವಿನುಮನಸು ನೀಡಿದ್ದ ಹಾಡುಗಳು ಅದ್ಭುತವಾಗಿ ಮೂಡಿಬಂದಿದ್ದವು. ಈ ಕಾರಣದಿಂದಲೇ ಅವರೇ ಈ ಚಿತ್ರಕ್ಕೆ ಬೇಕು ಎಂದು ನಿರ್ದೇಶಕರಿಗೆ ಹೇಳಿದಾಗ ಅವರು ಕೂಡ ಒಪ್ಪಿದರು ಎಂದರು.
ಎಲ್ಲ ಸಿನಿಮಾಗಳಿಗೂ ನಾನು ಎಫರ್ಟ್ ಹಾಕಿ ಕೆಲಸ ಮಾಡುತ್ತೇನೆ. ಇಲ್ಲಿಯೂ ವಿರಾಟ್ ಎನ್ನುವ ಹಳ್ಳಿ ಹುಡುಗನ ಪಾತ್ರದ ಸಾಕಾರಕ್ಕೆ ಸಾಕಷ್ಟು ಶ್ರಮ ಹಾಕಿದ್ದೇನೆ ಎಂದು ಆರ್ಯನ್ ಹೇಳಿದರು. ಸಂಗೀತ ನಿರ್ದೇಶಕ ವಿನು ಮನಸು ಮಾತನಾಡಿ ಹಾಡುಗಳು ಚೆನ್ನಾಗಿ ಮೂಡಿ ಬಂದಿರುವ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. 4 ಹಾಡುಗಳು ಮಾತ್ರವಲ್ಲದೆ, ನಾಯಕ ಮತ್ತು ನಾಯಕಿಯ ಮೈಂಡ್ ವಾಯ್ಸ್ ಆಗಿ ಶಾಯಿರಿಗಳನ್ನು ಬಳಸಿರುವುದಾಗಿ ಹೇಳಿದರು. ಅವುಗಳನ್ನು ಗ್ಲಿಂಪ್ಸ್ ರೂಪದಲ್ಲಿ ಮುಂದೆ ರಿಲೀಸ್ ಮಾಡಲು ಚಿತ್ರ ತಂಡ ಹೇಳಿದೆ.
ಚಿತ್ರದ ನಾಯಕಿ ಜೀವಿತ ಪ್ರಭಾಕರ್ ಇದು ನನ್ನ ಎರಡನೇ ಸಿನಿಮಾ. ಹಿಂದಿನ ಚಿತ್ರದಲ್ಲೂ ಆರ್ಯನ್ ಅವರೇ ಜೋಡಿಯಾಗಿದ್ದರು. ಟೀಸರ್ ನೋಡಿ ಖುಷಿಯಾಯಿತು. ಹಾಡುಗಳು ನನಗೆ ತುಂಬ ಇಷ್ಟವಾಯಿತು. ನಿರ್ದೇಶಕರು ಪ್ರೀತಿ ಮಾತ್ರವಲ್ಲ, ಪ್ರತಿಯೊಂದು ಪಾತ್ರಗಳಲ್ಲಿನ ಭಾವನಾತ್ಮಕ ಸಂಬಂಧಗಳೊಂದಿಗೆ ತೋರಿಸಿದ್ದಾರೆ. ಮಹಿಳೆಯರ ಭಾವನೆಗಳಿಗೆ ಪ್ರಾಧಾನ್ಯತೆ ನೀಡಿದ್ದಾರೆ ಎಂದರು.
ನಾಯಕನ ತಂಗಿಯ ಪಾತ್ರ ನಿರ್ವಹಿಸಿರುವ ವೈಷ್ಣವಿ ಪರದೆಯ ಮೇಲೆ ತಮ್ಮ ಮತ್ತು ನಾಯಕನ ಜತೆಗಿನ ಬಾಂಧವ್ಯ ಚೆನ್ನಾಗಿ ಮೂಡಿ ಬಂದಿದೆ ಎಂದರು. ನಾಯಕಿಯ ತಾಯಿ ಪಾತ್ರ ಮಾಡಿರುವ ನವ ನಟಿ ತಾರಾ ಮತ್ತು ನಾಯಕನ ಗೆಳೆಯನ ಪಾತ್ರವನ್ನು ಮಾಡಿದ ಜಗನ್ ಮಾತನಾಡಿ ತಮ್ಮ ಪಾತ್ರಗಳ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.
ಭಾರತಿ ಶ್ರೀನಿವಾಸ್ ರಾಜ್ ನಿರ್ಮಿಸಿರುವ ಈ ಚಿತ್ರದಲ್ಲಿ ವಿನಯಾ ಪ್ರಸಾದ್ ಚೇತನ್ ದುರ್ಗ ಮೊದಲಾದ ಕಲಾವಿದರು ನಟಿಸಿದ್ದಾರೆ. ಲವ್ ಟು ಲಸ್ಸಿಯನ್ನು ಆಗಸ್ಟ್ ನಲ್ಲಿ ಬಿಡುಗಡೆಗೊಳಿಸಲು ಯೋಜನೆ ಹಾಕಲಾಗಿದೆ.

