ಚಿತ್ರ: ಮದರ್ ಪ್ರಾಮಿಸ್
ನಿರ್ದೇಶನ: ಪೂರ್ಣಚಂದ್ರ ಮೈಸೂರು
ನಿರ್ಮಾಣ: ಧನಂಜಯ
ತಾರಾಗಣ: ಧನಂಜಯ, ಗೀತಾ, ಪೂರ್ಣಚಂದ್ರ ಮೊದಲಾದವರು.
ಮದರ್ ಪ್ರಾಮಿಸ್ ನಗುವಿನ ಚಿತ್ರವಾಗಿ ಸುದ್ದಿ ಮಾಡುತ್ತಿದೆ. ಆದರೆ ನಗುವಿಗಿಂತಲೂ ಮಗು ಕೂಡ ನೋಡಬಹುದಾದ ಚಿತ್ರದಂತೆ ಮೂಡಿಬಂದಿದೆ. ಯಾಕೆಂದರೆ ಮಗು ಮನದೊಂದಿಗೆ ನೋಡಿದಾಗ ಮಾತ್ರ ಈ ಸಿನಿಮಾ ನಗು ತರಿಸಬಲ್ಲದು. ಮಕ್ಕಳು ಲಾಜಿಕ್ ಗಿಂತ ಕಾಮಿಕ್ ಮಾತ್ರ ಬಯಸುತ್ತಾರೆ. ಅದನ್ನೇ ಸಟೈರ್, ಅಬ್ಸರ್ಬ್ಡ್, ಸ್ಪೂಫ್ ಸಿನಿಮಾ ಎನ್ನಲಾಗುತ್ತದೆ. ಇದು ಕೂಡ ಅಂಥದೇ ಸಾಲಿಗೆ ಸೇರುವ ಸಿನಿಮಾ.
ಬೆಂಗಳೂರಿನ ಗ್ಯಾಂಬ್ಲಿಂಗ್ ಕಿಂಗ್ ರೊಸ್ಸಿ ಮತ್ತು ದೊನ್ನೆ ಬಿರಿಯಾನಿ ಹೆಸರಿನ ರೌಡಿ ಇಬ್ಬರು ಒಂದು ಕಾಲದ ಆಪ್ತ ಸ್ನೇಹಿತರು. ಆದರೆ ಯಾವುದೋ ಒಂದು ಸಂದರ್ಭದಲ್ಲಿ ದೊನ್ನೆ ಬಿರಿಯಾನಿ ತನಗೆ ‘ಸಾರಿ’ ಹೇಳಿಲ್ಲ ಎನ್ನುವ ಕಾರಣದಿಂದ ಆತನಿಂದ ರೊಸ್ಸಿ ಆತನಿಂದ ದೂರಾಗಿರುತ್ತಾನೆ. ಆದರೆ ಚಿತ್ರದಲ್ಲಿ ನಡೆಯುವ ಪ್ರಮುಖ ಘಟನೆಯೊಂದು ಇವರಿಬ್ಬರನ್ನು ಮತ್ತೆ ವೈರತ್ವದಲ್ಲಿ ಮುಖಾಮುಖಿಯಾಗುವಂತೆ ಮಾಡುತ್ತದೆ. ಇದರ ಕೊನೆ ಏನು ಎನ್ನುವುದಕ್ಕಿಂತಲೂ ಅದುವರೆಗಿನ ಬೆಳವಣಿಗೆಯನ್ನು ಕಟ್ಟಿಕೊಟ್ಟಿರುವ ರೀತಿಯೇ ಪ್ರೇಕ್ಷಕರನ್ನು ಎಂಗೇಜ್ ಮಾಡಿಡುತ್ತದೆ.
ಡಾಲಿ ಧನಂಜಯ್ ಚಿತ್ರದಲ್ಲಿ ರೊಸ್ಸಿ ಪಾತ್ರವನ್ನು ನಿಭಾಯಿಸಿದ್ದಾರೆ. ಇತರ ಪಾತ್ರಗಳು ಸೌಂಡ್ ಮಾಡುವಾಗ ಧನಂಜಯ್ ಸುಮ್ಮನಿರುತ್ತಾರೆ ಎನ್ನುವುದೇ ರೊಸ್ಸಿ ಪಾತ್ರಕ್ಕೆ ಒಂದು ಮಟ್ಟಿನ ಘನತೆಯನ್ನು ಕೊಟ್ಟಿದೆ. ದೊನ್ನೆ ಬಿರಿಯಾನಿಯಾಗಿ ಮಹದೇವ್ ಪ್ರಸಾದ್ ಗಮನ ಸೆಳೆಯುತ್ತಾರೆ. ಅದೇ ರೀತಿ ನಿರ್ದೇಶಕ ಪೂರ್ಣಚಂದ್ರ ಅವರು ಕೂಡ ರ್ಯಾಂಡಿ ಎನ್ನುವ ಪಾತ್ರದ ಮೂಲಕ ಸೌಂಡ್ ಮಾಡಿದ್ದಾರೆ.
ರ್ಯಾಂಡಿ ಪಾತ್ರದ ತಾಯಿಯ ಕ್ಯಾರೆಕ್ಟರನ್ನು ಹಿರಿಯನಟಿ ಗೀತಾ ನಿಭಾಯಿಸಿದ್ದಾರೆ.
ಈ ರೀತಿಯ ಕಥೆ ಮತ್ತು ನಿರೂಪಣಾ ಶೈಲಿ ಮಲಯಾಳಂನಲ್ಲಿ ಹೆಚ್ಚು ಜನಪ್ರಿಯ. ಉದಾಹರಣೆಗೆ 2 ವರ್ಷದ ಹಿಂದೆ ತೆರೆಕಂಡ ಫಹದ್ ಫಾಜಿಲ್ ನಟನೆಯ ‘ಆವೇಶಂ’ ಚಿತ್ರವನ್ನೇ ನೆನಪಿಸಿಕೊಳ್ಳಬಹುದು. ಮಲಯಾಳಂನಲ್ಲಿ 1980ರ ದಶಕದಿಂದಲೇ ಇಂಥ ಚಿತ್ರಗಳನ್ನು ಕಾಣಬಹುದು. 89ರಲ್ಲಿ ತೆರೆಕಂಡ ‘ರಾಮ್ ಜಿ ರಾವ್ ಸ್ಪೀಕಿಂಗ್’ ನಲ್ಲಂತೂ ಮೂವರು ಸೇರಿ ನಡೆಸುವ ಅಪಹರಣ, ಗೊಂದಲ ಮೊದಲಾದವು ಇದೇ ರೀತಿಯಲ್ಲಿ ಮೂಡಿವೆ. ಆ ಚಿತ್ರಕ್ಕೆ ‘ಸೀ ದ ಮ್ಯಾನ್ ರನ್’ ಎನ್ನುವ ಅಮೆರಿಕನ್ ಟೆಲಿಫಿಲ್ಮ್ ಸ್ಫೂರ್ತಿಯಾಗಿತ್ತು. ಪ್ರಿಯದರ್ಶನ್ ನಂಥ ಮಲಯಾಳಂ ನಿರ್ದೇಶಕರು ಈ ಮಾದರಿಯ ಚಿತ್ರಗಳನ್ನು ಬಾಲಿವುಡ್ ನಲ್ಲೂ ನೀಡಿದ್ದಾರೆ. ಇದೀಗ ನಮ್ಮ ಪ್ರೇಕ್ಷಕರಿಗೆ ಕನ್ನಡದ ಸೊಗಡಿನಲ್ಲಿ ‘ಮದರ್ ಪ್ರಾಮಿಸ್’ ಲಭಿಸಿದೆ.
ಚಿತ್ರದಲ್ಲಿ ಹಲವಾರು ಹೊಸಮುಖಗಳನ್ನು ಪರಿಚಯಿಸಲಾಗಿದೆ. ಅವರಿಂದ ನೈಜ ನಟನೆಯನ್ನು ತೆಗೆಸಲಾಗಿದೆ. ಸಂಗೀತ ಆಕರ್ಷಕವಾಗಿದೆ. ನಾಯಕಿ ಬೇಕೆಂಬ ನೆನಪೇ ಬಾರದ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ. ಐಟಂ ಸಾಂಗ್, ಅಶ್ಲೀಲ ಸಂಭಾಷಣೆಯ ಕಾಟವನ್ನು ನೀಡಿಲ್ಲ. ಈ ಎಲ್ಲ ಕಾರಣಕ್ಕೆ ಚಿತ್ರವನ್ನು ಮೆಚ್ಚಲೇಬೇಕು. ಆದರೆ ಕುಡಿತವೊಂದೇ ಹಾಸ್ಯಕ್ಕೆ ಪೂರಕ ಎನ್ನುವ ಧೋರಣೆಯಿಂದ ನಿರ್ದೇಶಕರು ಹೊರಬರಬೇಕಾಗಿದೆ. ಉಳಿದಂತೆ ಪ್ರಥಮ ಪ್ರಯತ್ನದಲ್ಲಿ ನಿರ್ದೇಶಕ ಪೂರ್ಣಚಂದ್ರ ಗೆದ್ದಿದ್ದಾರೆ ಎಂದೇ ಹೇಳಬಹುದು.
ಚಿ.ಗುರುದತ್ ಒಂದು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ವಿನಯಾ ಪ್ರಸಾದ್ ಮತ್ತು ನಾಗಭೂಷಣ್ ಇತರ ಪಾತ್ರಗಳಲ್ಲಿದ್ದಾರೆ. ಕೊನೆಯಲ್ಲಿ ಕಥಾ ನಾಯಕ
ಸೇರಿದಂತೆ ಪ್ರತಿಯೊಬ್ಬರನ್ನೂ ಟೀಚರ್ ಮಕ್ಕಳಂತೆ ಕಂಡು ಪಾಠ ಮಾಡುತ್ತಾರೆ. ಹಾಗಾಗಿಯೇ ಮಕ್ಕಳ ತುಂಟಾಟವನ್ನು ಎಂಜಾಯ್ ಮಾಡಬಲ್ಲ ಮಗು ಮನಗಳಿಗೆ ಇದೊಂದು ಭರ್ಜರಿ ಮನರಂಜನೆ ಎನಿಸಬಹುದು.
