ಕನ್ನಡ ಚಿತ್ರರಂಗದ ಯುವ ನಿರ್ಮಾಪಕ ಉಲ್ಲಾಸ್ ಗೌಡ ನಿಧನಗೊಂಡಿದ್ದಾರೆ. ಕೊಡಚಾದ್ರಿ ಟ್ರೆಕ್ಕಿಂಗ್ ನಲ್ಲಿದ್ದ ಉಲ್ಲಾಸ್ ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಲ್ಲಾಸ್ ಅವರಿಗೆ ಕೇವಲ 28 ವರ್ಷ ದಾಟಿತ್ತು ಅಷ್ಟೆ.
ಮೃತದೇಹವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ತರಲಾಗುವುದು. ವಿಜಯನಗರದ ಮನೆಯಲ್ಲಿ ಆಪ್ತ ವರ್ಗದ ದರ್ಶನಕ್ಕೆ ಇಟ್ಟ ಬಳಿಕ ಭಾನುವಾರ ಬೆಳಿಗ್ಗೆಯೇ ಅಂತ್ಯಕ್ರಿಯೆ ನಡೆಸಲು ಯೋಜನೆ ಹಾಕಿರುವುದಾಗಿ ತಿಳಿದು ಬಂದಿದೆ.
ಚಿಕ್ಕ ವಯಸ್ಸಿನಿಂದ ಅಂದರೆ ಬಹಳ ಬೇಗನೆ ಕನ್ಸ್ಟ್ರಕ್ಟರ್ ಆಗಿ ಗುರುತಿಸಿಕೊಂಡವರು. ಆದರೆ ತಂದೆಯ ಹಾಗೆ ಒಳ್ಳೆಯ ಸಿನಿಮಾಗಳ ನಿರ್ಮಾಣದಿಂದ ಹೆಸರು ಮಾಡುವ ಆಸಕ್ತಿ ಇತ್ತು. ಅದಕ್ಕಾಗಿ ದಾಖಲೆ ಬರೆಯುವಂಥ ಸಿನಿಮಾವೊಂದರ ನಿರ್ಮಾಪಕರೂ ಆಗಿದ್ದರು. ಶೌಚಾಲಯದ ವಿಚಾರವನ್ನು ಪ್ರಮುಖವಾಗಿರಿಸಿ ‘ನಿರ್ಮಲ’ ಎನ್ನುವ ಚಿತ್ರವನ್ನು ಮಾಡಿದ್ದರು. ತಂದೆ ತಂದು ಕೊಟ್ಟಂಥ ಹಣ, ಹೆಸರು ಎಲ್ಲವೂ ಇದ್ದರೂ ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಎಂಬ ಕನಸು ಇವರದಾಗಿತ್ತು.
ತಂದೆಯವರಿಗೆ ಚಿತ್ರರಂಗದ ನಂಟು ಇರುವ ಕಾರಣ ಹೆಚ್ಚು ತಲೆ ಕೆಡಿಸುವ ಪರಿಸ್ಥಿತಿ ಉಲ್ಲಾಸ್ ಗೆ ಬಂದಿರಲಿಲ್ಲ. ಅವರ ಮಾರ್ಗದರ್ಶನದಲ್ಲೇ ‘ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾ’ ಸಂಸ್ಥೆ ಆರಂಭಿಸಿದ್ದರು. ಇದು ಇತರ ಸಿನಿಮಾ ತರಬೇತಿ ಸಂಸ್ಥೆಗಳ ಹಾಗೆ ಇರದೆ ಹೊಸತನವನ್ನು ಹೊಂದಿರಬೇಕು ಎನ್ನುವ ಕಡೆಗೆ ಒಂದು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಮಕ್ಕಳಲ್ಲಿ ಓದು, ಪಠ್ಯದ ಆಸಕ್ತಿಯ ಜತೆಗೆ ಅವರಲ್ಲಿ ಅಡಗಿರುವ ಕಲೆಯನ್ನು ಹೇಗೆ ಹೊರಗೆ ತರಬಹುದು ಎನ್ನುವ ವಿಚಾರದಲ್ಲಿ ಪ್ರಯೋಗಕ್ಕೆ ಮುಂದಾಗಿದ್ದರು. ಆದರೆ ಬದುಕು, ಕನಸು ಎಲ್ಲವನ್ನೂ ಸಾವು ಇಲ್ಲವಾಗಿಸಿದೆ.
