ನಗುವಿನ ಚಿತ್ರ ಎಂದು ಸುದ್ದಿ ಮಾಡಿದ್ದ ‘ಮದರ್ ಪ್ರಾಮಿಸ್’ ಚಿತ್ರಮಂದಿರದಲ್ಲಿ ಒಂದು ವಾರ ದಾಟಿದೆ. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಗಮನದಲ್ಲಿರಿಸಿಕೊಂಡು ಒಂದಷ್ಟು ಬದಲಾವಣೆಯೊಂದಿಗೆ ಎರಡನೇ ವಾರಕ್ಕೆ ಕಾಲಿಡುತ್ತಿರುವುದಾಗಿ ಡಾಲಿ ಧನಂಜಯ್ ಹೇಳಿದ್ದಾರೆ. ಅವರು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಸಿನಿಮಾಗೆ ಎದುರಾದ ಅಪಾರ ಪ್ರಶಂಸೆಯ ಜತೆಯಲ್ಲೇ ಸಿಕ್ಕಂಥ ಒಂದು ಅಭಿಪ್ರಾಯ ಎನ್ನುವುದು ಕಾಲಾವಧಿ ಹೆಚ್ಚಾಯ್ತು ಎನ್ನುವುದೇ ಆಗಿತ್ತು. ಇದೀಗ ಅವಧಿ ಹೆಚ್ಚಾಗಿಸಿದೆ ಎನ್ನುವಂಥ ದೃಶ್ಯಗಳನ್ನೇ ಕತ್ತರಿಸಿದ್ದೇವೆ. ಮೊದಲು 2 ಗಂಟೆ 40 ನಿಮಿಷ ಇದ್ದ ಚಿತ್ರ ಎರಡನೇ ವಾರದಿಂದ 2ಗಂಟೆ 20ನಿಮಿಷ ಆಗಲಿದೆ ಎಂದರು ಧನಂಜಯ್.
ಧನಂಜಯ್ ಮದರ್ ಪ್ರಾಮಿಸ್ ಚಿತ್ರದ ನಟ ಮಾತ್ರವಲ್ಲ. ನಿರ್ಮಾಪಕ ಕೂಡ ಹೌದು. ಹಾಗಾಗಿ ಕಲೆಕ್ಷನ್ ಬಗ್ಗೆ ಮಾತನಾಡುತ್ತಾ ಸಿನಿಮಾ ಎಲ್ಲ ಕಡೆ ಚೆನ್ನಾಗಿಯೇ ಓಡುತ್ತಿದೆ. ಮಲ್ಟಿಪ್ಲೆಕ್ಸ್ ನಲ್ಲಿ ಫ್ಯಾಮಿಲಿ ಎಂಟರ್ಟೇನರ್ ಆಗಿದೆ. ಕೆಲವೊಂದು ಸಿಂಗಲ್ ಥಿಯೇಟರ್ ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲಿ ಸಿನಿಮಾ ಮುಂದುವರಿಯಲಿದೆ. ದಾವಣಗೆರೆ, ಚಿಕ್ಕ ಮಗಳೂರು ಎಲ್ಲ ಕಡೆ ಚೆನ್ನಾಗಿ ಹೋಗುತ್ತಿವೆ ಎಂದರು.
ಈ ಕಥೆ ಕೇಳಿದ ತಕ್ಷಣ ನಾನು ಹೇಳಿದ ಮಾತು “ಮೋಸ್ಟ್ ಸ್ಟುಪಿಡ್ ಫಿಲ್ಮ್ ಆಫ್ ದ ಇಯರ್” ಅಂತ. ಆದ್ರೆ ಅರ್ಥ ಮಾಡ್ಕೊಳ್ಳೋಕೆ ಬುದ್ಧಿವಂತಿಕೆಯೂ ಬೇಕು. ಸಿನಿಮಾ ನೋಡಿದವರಲ್ಲಿ ಕೇವಲ 10 ಪರ್ಸೆಂಟ್ ಜನರಿಗೆ ಅರ್ಥವಾಗಿಲ್ಲ ಅಥವಾ ಇಷ್ಟವಾಗಿಲ್ಲ. ಆದರೆ ಮುಂದಿನ ವಾರಕ್ಕೆ ಪ್ರತಿಕ್ರಿಯೆ ಇನ್ನಷ್ಟು ಚೆನ್ನಾಗಿ ಆಗಬೇಕು. ಹಾಗಾಗಿ ಈ ಬಗ್ಗೆ ಸಂವಾದ ನಡೆಸಲೆಂದೇ ಈ ಸುದ್ದಿಗೋಷ್ಠಿ ನಡೆಸಿದ್ದೇವೆ ಎಂದರು ಡಾಲಿ ಧನಂಜಯ್.
ಮಧ್ಯಮ ವರ್ಗದ ವೆಹಿಕಲ್ ಸೆಂಟಿಮೆಂಟ್
ಚಿತ್ರದಲ್ಲಿ ಧನಂಜಯ್ ಪಾತ್ರದ ಬೈಕ್ ಕಳವಾಗುತ್ತದೆ. ಈ ಬಗ್ಗೆ ಪ್ರಸ್ತಾಪಿಸಿದ, ಮಾಧ್ಯಮದವರು ನಿಜವಾಗಿ ಡಾಲಿಗೆ ವೆಹಿಕಲ್ ಸೆಂಟಿಮೆಂಟ್ ಎಷ್ಟಿದೆ ಎಂದು ಪ್ರಶ್ನಿಸಿದಾಗ, ತಮಗೂ ಆರಂಭದಲ್ಲಿ ಕೊಂಡಿದ್ದ ಟಿವಿಎಸ್ ಮೇಲೆ ತುಂಬ ಕಾಳಜಿ ಇದೆ. ತಂದೆ ಕೊಡಿಸಿದ್ದ ಟಿವಿಎಸ್ ಎಕ್ಸೆಲ್ ಈಗಲೂ ಮನೇಲೇ ಇದೆ ಎಂದರು. ಎಲ್ಲ ಮಧ್ಯಮ ವರ್ಗದ ಮಂದಿಗೂ ಮೊದಲು ಕೊಂಡ ವಾಹನ ಎಂದರೆ ಪ್ರೀತಿ ಇರುತ್ತದೆ. ಅದೇ ಸೆಂಟಿಮೆಂಟ್ ಪ್ರೇಕ್ಷಕರಿಗೂ ಹಿಡಿಸಿದೆ ಎಂದು ಧನಂಜಯ್ ಹೇಳಿದರು.
ಇಷ್ಟಾಗಿಲ್ಲ ಅಂದರೆ ಬೇಜಾರಿಲ್ಲ..!
ಈ ಸಿನಿಮಾ ನೋಡಿ ನನ್ನಲ್ಲೇ ಇಷ್ಟಾಗಿಲ್ಲ ಅಂತ ಹೇಳಿದವರು ಕೂಡ ಇದ್ದಾರೆ. ಅಭಿಮಾನಿಗಳೇ ಬಂದು,
“ಈ ತರಹದ್ದೆಲ್ಲ ಮಾಡಬೇಡಿ ಅಣ್ಣ, ನಮಗೆ ಬೇಜಾರಾಗುತ್ತೆ” ಅಂತ ಹೇಳಿದವರು ಕೂಡ ಇದ್ದಾರೆ. ಅವರು ನನ್ನ ಮಾಸ್ ಪಾತ್ರದ ಅಭಿಮಾನಿಗಳು. ಆದರೆ ಪೋಸ್ಟರ್ ನಿಂದಲೇ ಇದು ನನಗಷ್ಟೇ ಪ್ರಾಮುಖ್ಯತೆ ಇರುವ ಚಿತ್ರವಲ್ಲ ಎಂದು ತೋರಿಸಲಾಗಿತ್ತು. ಜೆನ್ ಜಿಗಳಿಗೆ ಮಾಡಿರುವ ಈ ಚಿತ್ರ ನನಗೂ ಫ್ರೆಶ್ ನೆಸ್ ಕೊಡುತ್ತೆ. ಇದು ನನ್ನದೇ ಸಿನಿಮಾವಲ್ಲ. ನಾನು ಕೂಡ ಇರುವಂಥ ಒಳ್ಳೆಯ ಸಿನಿಮಾ ಅಷ್ಟೇ. ಅದನ್ನು ಅರ್ಥಮಾಡಿಕೊಂಡವರಿಗೆ ಇಷ್ಟವಾಗಿದೆ. ಇಷ್ಟವಾಗಿಲ್ಲ ಎನ್ನುವುದು ಕೂಡ ಪ್ರೇಕ್ಷಕರ ಹಕ್ಕು. ಆದರೆ ನಿಮಗೂ ಇಷ್ಟವಾಗಲ್ಲ, ನೋಡಬೇಡಿ ಎನ್ನುವುದು ತಪ್ಪು.
ಇದೇ ನನ್ನ ನಿರ್ಮಾಣದ ಕೊನೆಯ ಚಿತ್ರ!

ನೆಗೆಟಿವ್ ಮಾಡುವವರ ಬಗ್ಗೆ ರೆಸ್ಪಾಂಡ್ ಮಾಡಬಾರದು ಎಂದುಕೊಂಡಿದ್ದೆ. ಆದರೆ ತಂಡದವರು ಹೇಳಿದ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದೆ. ಸಿನಿಮಾ ಗೆದ್ದಾಗ ಅವೆಲ್ಲ ದೊಡ್ಡ ವಿಷಯವಾಗುವುದಿಲ್ಲ. ಈ ಸಿನಿಮಾಗೆ ಪ್ರೇಕ್ಷಕರೇ ತಮ್ಮ ನೈಜವಾದ ಪ್ರತಿಕ್ರಿಯೆ ಹೇಳುತ್ತಾರೆ. ಆದರೆ ಇದುವರೆಗಿನ ಪ್ರತಿಕ್ರಿಯೆ ಗಮನಿಸಿ ನನಗೆ ಸಿನಿಮಾ ನಿರ್ಮಾಣ ಸಾಕು ಅನಿಸಿದೆ.
ನಾನು ತಲೆಕೆಡಿಸಿಕೊಂಡು ಈ ಮಾತು ಹೇಳುತ್ತಿಲ್ಲ. ಒಬ್ಬ ನಿರ್ಮಾಪಕನಾಗಿ ನೆಗೆಟಿವ್ ಮಾತುಗಳು ಖಂಡಿತ ನನ್ನನ್ನು ಕುಗ್ಗಿಸಿಲ್ಲ. ಯಾಕೆಂದರೆ ಮಾಸ್ ಆಡಿಯನ್ಸ್ ಜನ ನುಗ್ಗಿ ಬಂದು ಸಿನಿಮಾ ನೋಡ್ತಾ ಇದ್ದಾರೆ. ಲಾಸ್ ಅಂತೂ ಆಗಲ್ಲ. ಲಾಸ್ ಅಂತ ಆದರೆ ನನಗೆ ಸಂಭಾವನೆ ಸಿಗಲ್ಲ ಅಷ್ಟೇ. ನಾನು ಕುಗ್ಗಿಲ್ಲವಾದರೂ ಸುಸ್ತಾಗುವುದು ಖಚಿತ.
2021ರಲ್ಲಿ ‘ಬಡವ ರ್ಯಾಸ್ಕಲ್’ ಚಿತ್ರದ ನಿರ್ಮಾಪಕನಾಗಿ ಎಂಟ್ರಿಕೊಟ್ಟು ಗೆದ್ದವನು.
ಬಡವ ರ್ಯಾಸ್ಕಲ್, ಹೆಡ್ ಬುಶ್, ಟಗರು ಪಲ್ಯ ಈ ಎಲ್ಲ ಚಿತ್ರಗಳಿಗೂ ನೆಗೆಟಿವ್ ಹೇಳಿದವರಿದ್ದರು. ಆದರೆ ಯಾವುದು ಕೂಡ ನನಗೆ ನಷ್ಟ ಮಾಡಿಲ್ಲ. ಪ್ರತಿ ಚಿತ್ರದಲ್ಲೂ ನಾವು ಹೊಸಬರನ್ನು ಪರಿಚಯಿಸಿಕೊಂಡೇ ಬಂದಿದ್ದೇವೆ. ದೊಡ್ಡ ಗೆಲುವಿರದ, ಬಂಡವಾಳ ಮಾತ್ರ ಹಿಂದಿರುಗಿಸಿದ ಚಿತ್ರಗಳೂ ಇವೆ. ನಿರ್ಮಾಪಕನಾಗಿ ನನ್ನ ಉದ್ದೇಶ ಒಳ್ಳೆಯ ಸಿನಿಮಾಗಳನ್ನು ಕೊಡಬೇಕು ಎನ್ನುವುದೇ ಆಗಿದೆ. ಸಿನಿಮಾ, ಸಾಹಿತ್ಯ, ನಾಟಕ ಎಲ್ಲವೂ ಕನ್ನಡ ಕಟ್ಟುವ ಕೆಲಸಗಳೇ ಎಂದು ನಂಬಿದವನು ನಾನು. ಆದರೆ ಸಿನಿಮಾ ಸರಾಗವಾಗಿ ಪ್ರದರ್ಶನ ಕಾಣಬೇಕಾದರೆ ತುಂಬ ಶ್ರಮ ಪಡಬೇಕಾಗುತ್ತದೆ.
ಆ್ಯಂಟಿ ಪೈರಸಿಗಾಗಿ ಹೋರಾಡಬೇಕು. ಮತ್ತೊಂದೆಡೆ ಈ ತರಹದ್ದು ನೆಗೆಟಿವ್ ಪೋಸ್ಟ್ ಮಾಡದಂತೆ ಒಂದು ಕೋರ್ಟ್ ಆರ್ಡರ್ ಇವನ್ನೆಲ್ಲ ತಂದು ತಯಾರಿಟ್ಟುಕೊಳ್ಳಬೇಕು. ಹೀಗೆ ಪ್ರತಿ ಬಾರಿ ಹಾಕುವ ಶ್ರಮವಷ್ಟೇ ಹೆಚ್ಚಾಗುತ್ತಾ ಹೋಗ್ತಿದೆ ಎಂದಾಗ ಸುಸ್ತು ಆವರಿಸಿದೆ. ಹೀಗಾಗಿಯೇ ನಿರ್ಮಾಣ ಕ್ಷೇತ್ರದಿಂದ ನಿರ್ಗಮಿಸುವ ನಿರ್ಧಾರ ಮಾಡಿದ್ದೇನೆ.
ಮುಂದಿನ ಸಿನಿಮಾವಾಗಿ ತಯಾರಾಗ್ತಿರುವ ‘ಹೆಗ್ಗಣ ಮುದ್ದು’ ನನ್ನ ಕೊನೆಯ ಚಿತ್ರ ಆಗುವ ಸಾಧ್ಯತೆ ಹೆಚ್ಚಾಗಿದೆ. ನನ್ನ ಗುರಿ ಮುಖ್ಯವಾಗಿ ನಟನಾಗಿ ಒಳ್ಳೆಯ ಸಿನಿಮಾ ಮಾಡುವುದೇ ಆಗಿದೆ. ಯಾಕೆಂದರೆ ಸಂಪಾದನೆ ಕೂಡ ಮುಖ್ಯವಾಗುತ್ತದೆ. ಇದೇ ರೀತಿ ಮುಂದುವರಿದರೆ ನಾನು ಮುಂದೊಮ್ಮೆ ನಾನು ಆಸ್ಪತ್ರೆ ಸೇರಿದಾಗ ಬಿಲ್ ಕಟ್ಟಲಿಕ್ಕಾದರೂ ಹಣ ಇರಬೇಕಲ್ವ? ಹಾಗಾಗಿ ನಾನು ಹೆಗ್ಗಣ ಮುದ್ದು ಕೊನೆಯ ಸಿನಿಮಾ ಮಾಡೋಣ ಅಂತ ಇದ್ದೇನೆ ಎಂದು ಧನಂಜಯ್ ನಿರ್ಲಿಪ್ತರಾಗಿ ನುಡಿದರು.
ಡಾಲಿ ನಿರ್ಮಾಣ ನಿಲ್ಲದು – ಹರ್ಷ ಶಿವಲಿಂಗಪ್ಪ
ಮದರ್ ಪ್ರಾಮಿಸ್ ಚಿತ್ರಕ್ಕೆ ಧನಂಜಯ್ ಜತೆ ಬಂಡವಾಳ ಹೂಡಿರುವ ಮತ್ತೋರ್ವ ನಿರ್ಮಾಪಕ ಹರ್ಷ ಮಾತನಾಡಿ, ಡಾಲಿ ಪಿಕ್ಚರ್ಸ್ ಗೆ ಮುಂದಿನದೇ ಕೊನೆಯ ಸಿನಿಮಾ ಆಗಲು ನಾವು ಬಿಡುವುದಿಲ್ಲ. ಖಂಡಿತವಾಗಿಯೂ ಮುಂದೆಯೂ ನಾವು ಅವರ ಜತೆಗಿರುತ್ತೇವೆ. ಡಾಲಿ ಬ್ಯಾನರ್ ನಲ್ಲಿ ಸಿನಿಮಾ ಮಾಡಲು ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದರು.
“ಇದು ನಿರ್ಮಾಪಕನಾಗಿ ನನಗೆ ಮೊದಲ ಅನುಭವ. ಸಿನಿಮಾ ಅಂದರೆ ಶೋಕಿ ಎಂದುಕೊಂಡಿದ್ದೆ. ಆದರೆ ಲೈಟ್ ಬಾಯ್ ನಿಂದ ಹಿಡಿದು ಕಲಾವಿದರ ತನಕ ತುಂಬಾನೇ ಕಷ್ಟ ಪಡುತ್ತಾರೆ ಎಂದು ಗೊತ್ತಾಯಿತು” ಎಂದು ಹರ್ಷ ತಮ್ಮ ಅನುಭವ ಹಂಚಿಕೊಂಡರು.
ಖಂಡಿತವಾಗಿ ಸ್ಫೂರ್ತಿ ಪಡೆದಿರುವಂಥ ಚಿತ್ರ!
ನಿರ್ದೇಶಕ ಪೂರ್ಣಚಂದ್ರ ಅವರಿಗೆ ಇದು ಮೊದಲ ಚಿತ್ರ. ಆದರೆ ಇದು ಬಾಲಿವುಡ್ ನಲ್ಲಿ ಬರುವ ಚಿತ್ರಗಳ ಮಾದರಿಯಲ್ಲಿದೆ ಎನ್ನುವುದು ಹಲವರ ಆಪಾದನೆ. ಇದನ್ನು ಪೂರ್ಣಚಂದ್ರ ಅವರು ಯಾವುದೇ ಎಗ್ಗಿಲ್ಲದೆ ಸ್ವೀಕರಿಸಿದರು. ಮದರ್ ಪ್ರಾಮಿಸ್ ಗೆ ಖಂಡಿತಾ ಅನ್ಯಭಾಷಾ ಜಾನ್ರಾಗಳ ಪ್ರಭಾವವಿದೆ. ಯಾಕೆಂದರೆ ನಾನು ಹಾಲಿವುಡ್ , ಬಾಲಿವುಡ್ ಚಿತ್ರಗಳನ್ನು ನೋಡುತ್ತಿರುತ್ತೇನೆ ಎಂದರು.
“ನಮ್ಮಲ್ಲೂ ಈಗಾಗಲೇ ಇಂಥ ಸಿನಿಮಾಗಳು ಬಂದಿವೆ. ಅದಕ್ಕೆ ‘ಗಾಂಪರ ಗುಂಪು’ ಒಂದು ಉದಾಹರಣೆ. ಬಾಲಿವುಡ್ ನಲ್ಲಿ ಬಂದ ನಿರ್ದೇಶಕ ಪ್ರಿಯದರ್ಶನ್ ಅವರ ಸಿನಿಮಾಗಳು ಕೂಡ ಸ್ಫೂರ್ತಿಯಾಗಿವೆ” ಎಂದು
ಪೂರ್ಣಚಂದ್ರ ಹೇಳಿದರು.
ಕಥೆಯನ್ನು ಹೆಣೆಯುತ್ತಾ ಹೋಗಬೇಕಾದರೆ ಹೊಸ ಹೊಸ ಪಾತ್ರಗಳು ಬಂದಿವೆ. ಆಮೇಲೆ ಕಾಸ್ಟಿಂಗ್ ಚಾಲೆಂಜ್ ಆಗಿದೆ. ಪಾತ್ರಧಾರಿಗಳ ಆಯ್ಕೆಯಲ್ಲಿ ಶಶಾಂಕ್ ಸೋಗಾಲ್ ಅವರು ಸಹಾಯ ಮಾಡಿದ್ದಾರೆ ಎಂದರು.
ಚಿತ್ರದಲ್ಲಿ ಚಾಲಕ ಮನು ಪಾತ್ರದಲ್ಲಿ ನಟಿಸಿದ ಯಶವಂತ್ ಕುಚಬಾಳ, ತಾವಾಡಿದ ಬೀದರ್ ಭಾಷೆಯ ಮಾತು ಜನಗಳಿಗೆ ಖುಷಿ ನೀಡಿವೆ ಎಂದರು. ಇವರು ‘ನೀನಾಸಂ’ನಿಂದ ಬಂದರುವ ನಟರಾಗಿದ್ದಾರೆ. ಜಿಲೇಬಿ ಎನ್ನುವ ಪಾತ್ರ ಮಾಡಿರುವ ಯಶವಂತ ಶೆಟ್ಟಿ ಇದು ನನ್ನ ಮೊದಲನೇ ಸಿನಿಮಾ ಎಂದರು. ಸೋಶಿಯಲ್ ಮೀಡಿಯಾದಲ್ಲಿರುವ ತಾವು ಈ ಹಿಂದೆ ‘ಕ್ಸೆರಾಕ್ಸ್’ ಸಿರೀಸ್ ನಲ್ಲಿ ಮಾಡಿದ್ದಾಗಿ ಹೇಳಿಕೊಂಡರು. ಗುಲ್ಕನ್ ಪಾತ್ರಧಾರಿ ಸುಪ್ರೀತ್ ಭಾರದ್ವಾಜ್, ನಟರಾದ ಮಹಾದೇವ್, ಅರುಣ್, ಶ್ರವಣ್, ಅಂಜನ್, ಸುರೇಶ್, ನಾಗಭೂಷಣ್, ಶ್ರೀವತ್ಸ ಮತ್ತು ಸಂಗೀತ ನಿರ್ದೇಶಕ ನವನೀತ್ ಶ್ಯಾಮ್ , ಛಾಯಾಗ್ರಾಹಕ ರಾಹುಲ್ ರಾಯ್ ಜಾನ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
