ರಂಗಭೂಮಿ ನಟ ಹೃತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೇವಲ 26 ವರ್ಷವಷ್ಟೇ ವಯಸ್ಸಾಗಿತ್ತು.
ಮಂಡ್ಯ ರಮೇಶ್ ಅವರ ಜನಪ್ರಿಯ ರಂಗ ತಂಡ ‘ನಟನ’ದ ಸದಸ್ಯನಾಗಿ ಉತ್ತಮ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದವರು ಹೃತಿಕ್. ಆದರೆ ತೀರ ಅನಿರೀಕ್ಷಿತ ಎನ್ನುವಂತೆ ರಾಜರಾಜೇಶ್ವರಿ ನಗರದ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿ ಪಟ್ಟಣಗೆರೆಯ ದಿವ್ಯಶ್ರೀ ಅಪಾರ್ಟ್ಮೆಂಟ್ ನಲ್ಲಿ ಈ ದುರಂತ ಘಟನೆ ಸಂಭವಿಸಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ಮೃತ ಹೃತಿಕ್ ತಂದೆ ಮೋಹನ್ ಕೃಷ್ಣ ಕನ್ನಡದ ಜನಪ್ರಿಯ ಗಾಯಕರು. ಕಿರುತೆರೆಯ ಮೂಲಕ ಜನಪ್ರಿಯತೆ ಪಡೆದಿರುವ ‘ರೆಮೋ’ ಮೋಹನ್ ಅವರ ಪತ್ನಿ. ಆದರೆ ಹೃತಿಕ್ ಅವರು ಮೋಹನ್ ಕೃಷ್ಣ ಅವರ ಮೊದಲ ಪತ್ನಿಯ ಪುತ್ರ. ಹೃತಿಕ್ ಪುಟ್ಟ ಮಗುವಾಗಿ ಇದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದರು. ಆನಂತರ ರೆಮೋ ಜತೆಗಿನ ವಿವಾಹದಲ್ಲಿ ಮೋಹನ್ ಕೃಷ್ಣ ಅವರಿಗೆ ಹೆಣ್ಣು ಮಗು ಕೂಡ ಇದೆ. ನಿನ್ನೆ ಯಾವುದೋ ಕಾರ್ಯಕ್ರಮದಿಂದ ಮನೆಗೆ ಮರಳುತ್ತಿದ್ದಾಗ ಮೋಹನ್ ಕೃಷ್ಣ ಅವರಿಗೆ ಮನೆಯಿಂದ ಫೋನ್ ಮೂಲಕ ಈ ದುರಂತ ಸಂದೇಶ ಬಂದಿತ್ತು. ಮೋಹನ್ ಕೃಷ್ಣ ಮತ್ತು ಕುಟುಂಬ ಸಾವಿನ ಆಘಾತದಲ್ಲಿದೆ. ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಜರು ನಡೆದಿದೆ.
ಮಂಡ್ಯ ರಮೇಶ್ ಸಂತಾಪ
ಘಟನೆಯ ಬಗ್ಗೆ ‘ಸಿನಿ ಕನ್ನಡ’ದ ಜತೆ ಮಾತನಾಡಿದ ಮಂಡ್ಯ ರಮೇಶ್ ಅಪಾರ ದುಃಖ ವ್ಯಕ್ತಪಡಿಸಿದ್ದಾರೆ. ಹೃತಿಕ್ ಮೈಸೂರಲ್ಲೇ ತಂಗಿದ್ದ. ನಟನದಲ್ಲಿ ಉತ್ತಮ ಪಾತ್ರಗಳನ್ನು ನಿಭಾಯಿಸುತ್ತಿದ್ದ. ‘ಚೋರ ಚರಣದಾಸ’ದ ಕುಡುಕ, ಈ ವರ್ಷದ ಹೊಸ ನಾಟಕ ‘ಚೆಕ್ ಪೋಸ್ಟ್ ನಂಬರ್ 840’ ಯಲ್ಲಿನ ರಾಜಕಾರಣಿಯ ಪಾತ್ರಗಳು ಜನಪ್ರಿಯತೆ ತಂದು ಕೊಟ್ಟಿತ್ತು. ನಾಟಕ ನೋಡಲು ಖುದ್ದು ಆತನ ತಂದೆ ಮೋಹನ್ ಬಂದಿದ್ದರು. ನಾಟಕ ಮುಗಿದ ಬಳಿಕ ಬಹಿರಂಗವಾಗಿ ಪ್ರಶಂಸೆ ಮಾಡಿದ್ದರು. ಇವಲ್ಲದೆ ‘ಬೆತ್ತಲೆ ಅರಸನ ರಾಜ ರಹಸ್ಯ’ ಸೇರಿದಂತೆ ಹಲವಾರು ನಾಟಕಗಳಲ್ಲಿ ಜನಪ್ರಿಯ ಆಗಿದ್ದ. ಉತ್ತಮ ಗಾಯಕ ಕೂಡ ಹೌದು. ಉತ್ತಮ ರಿದಮಿಸ್ಟ್. ಇವತ್ತು ಕೂಡ ನಾಟಕ ಮಾಡಬೇಕಿತ್ತು. ನಿನ್ನೆ ಪ್ರಾಕ್ಟಿಸ್ ಗೆ ಬಂದಿರಲಿಲ್ಲ. ಫೋನ್ ಮಾಡಿದಾಗ ಸ್ವಿಚ್ ಆಫ್ ಇತ್ತು. ರಾತ್ರಿ ಬೆಂಗಳೂರಿನಿಂದ ಈ ವಿಷಯ ತಿಳಿದು ಬಂತು. ಕಾರಣ ಏನೇ ಇರಲಿ. ಇಂಥ ತೀರ್ಮಾನ ಮಾಡದೇ ಇದ್ದಿದ್ದರೆ ಖಂಡಿತಾ ನಾಡಿಗೆ ಹೆಸರು ತರುವ ಕಲಾವಿದ ಆಗಿರುತ್ತಿದ್ದ ಎಂದಿದ್ದಾರೆ. ಇತ್ತೀಚೆಗಷ್ಟೇ ಹೃದಯಾಘಾತದಿಂದ ನಿಧನರಾದ ಅಣ್ಣನ ಸಾವಿನ ನೋವಿನಿಂದ ಹೊರ ಬರುವ ಮೊದಲೇ ಇದೀಗ ತಮ್ಮ ಪ್ರಿಯ ಶಿಷ್ಯನ ಸಾವು ರಮೇಶ್ ಅವರನ್ನು ಇನ್ನಷ್ಟು ನೋವಿಗೆ ತಳ್ಳಿದೆ.
