ಗೂಢಚಾರಿಯಾಗಿ ಪ್ರಿಯಾಂಕಾ ಸಾಹಸ!

ಚಿತ್ರ: ಡಿಟೆಕ್ಟಿವ್ ತೀಕ್ಷ್ಣ
ನಿರ್ದೇಶನ: ತ್ರಿವಿಕ್ರಮ್ ರಘು
ತಾರಾಗಣ: ಪ್ರಿಯಾಂಕಾ ಉಪೇಂದ್ರ, ವಿಜಯ ಸೂರ್ಯ, ಅವಿನಾಶ್ ಮೊದಲಾದವರು.

ಜಯ ಪ್ರಕಾಶ್ ಒಬ್ಬ ರಾಜಕಾರಣಿ. ತನ್ನ ಹೆಸರಲ್ಲೇ ಜಯವಿದೆ ಎಂದು ಗೆಲುವಿಗಾಗಿ ಅಡ್ಡದಾರಿ ಹಿಡಿದ ವ್ಯಕ್ತಿ. ಈತನಿಗೆ ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಗಳೊಂದಿಗೆ ಸಂಬಂಧವಿರುತ್ತದೆ. ಇದರ ನಡುವೆ ರಾಥೋಡ್ ಎನ್ನುವ ಹಂತಕನ ಪತ್ತೆಗಾಗಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸುತ್ತಾರೆ. ಆದರೆ ಅವರು ಆರಂಭದಲ್ಲಿ ಜಯಪ್ರಕಾಶನ ಸಂಚಿನಲ್ಲಿ ಸೇರಲು ನಿರಾಕರಿಸುತ್ತಾರೆ. ಆದರೆ ತಾನು ಹಿಂದೆ ನಿಂತು, ಈ ಪ್ರಕರಣವನ್ನು ಡಿಟೆಕ್ಟಿವ್‌ ತೀಕ್ಷ್ಣ ಕೈಗೆ ಒಪ್ಪಿಸುತ್ತಾರೆ.

ಡಿಟೆಕ್ಚಿವ್ ತೀಕ್ಷ್ಣ ಅಂದರೆ ಪೊಲೀಸ್ ಅಧಿಕಾರಿಗಳಿಗೂ ಭರವಸೆ. ಅಂಥ ತೀಕ್ಷ್ಣ ನಿಜಕ್ಕೂ ಯಾರು? ಆಕೆಯ ಹಿನ್ನೆಲೆ ಏನು? ಆಕೆಯ ತೀಕ್ಷ್ಣತೆ ಎಷ್ಟು ಎನ್ನುವುದನ್ನು ಚಿತ್ರದ ಮೂಲಕ ತೋರಿಸಲಾಗಿದೆ.

ಡಿಟೆಕ್ಟಿವ್‌ ತೀಕ್ಷ್ಣ ಪಾತ್ರದಲ್ಲಿ ನಟಿಸಿರುವ ಪ್ರಿಯಾಂಕಾ ಉಪೇಂದ್ರ ಆವರೇ ಚಿತ್ರದ ಹೈಲೈಟ್. ಟೋಪಿ, ಜಾಕೆಟ್ ಎನ್ನುವುದು ಟಿಪಿಕಲ್ ಪತ್ತೆದಾರರ ಶೈಲಿಯಾದರೂ ಪ್ರಿಯಾಂಕಾ ವಿಶಿಷ್ಟವಾಗಿ, ಆಕರ್ಷಕವಾಗಿ ಕಾಣಿಸಿದ್ದಾರೆ.
ನಗುನಗುತ್ತಾ ತನಿಖೆಗೆ ಮುಂದಾಗುತ್ತಾರೆ. ಆದರೆ ಅಗತ್ಯ ಬಿದ್ದಾಗ ಆ್ಯಕ್ಷನ್ ಕ್ವೀನ್ ಆಗುತ್ತಾರೆ.

ಜಯಪ್ರಕಾಶ ಎನ್ನುವ ಧನದಾಹಿ ರಾಜಕಾರಣಿಯಾಗಿ ಅವಿನಾಶ್ ನಟಿಸಿದ್ದಾರೆ. ಜಯಪ್ರಕಾಶನ ಚೇಲ ಪೊಲೀಸ್ ಅಧಿಕಾರಿಯಾಗಿ ಕೆ.ಎಸ್ ಶ್ರೀಧರ್ ಅವರು ಅಭಿನಯಿಸಿದ್ದಾರೆ. ಇವರ ಭಾವನ ಪಾತ್ರದಲ್ಲಿ ಮಂಜುನಾಥ ಹೆಗ್ಡೆ ನಟಿಸಿದ್ದಾರೆ. ಇನ್ನೋರ್ವ ಸಂಬಂಧಿಯಾಗಿ ಅಶ್ವಿನ್ ಹಾಸನ್ ನಟಿಸಿದ್ದಾರೆ. ತೀಕ್ಷ್ಣ ಎನ್ನುವುದು ಡಿಟೆಕ್ಟಿವ್‌ ಗೆ ನೀಡಿರುವ ಬಿರುದು ಎಂದೇ ಹೇಳಬಹುದು. ಯಾಕೆಂದರೆ ಈಕೆಗೊಂದು‌ ಫ್ಲ್ಯಾಶ್ ಬ್ಯಾಕ್ ಕಥೆಯಿದೆ. ಬಾಲ್ಯದಲ್ಲೇ ಅನಾಥತ್ವವನ್ನು ಎದುರಿಸಿದ ಹುಡುಗಿಯೊಬ್ಬಳು ನ್ಯಾಯಾಲಯದ ಸಂಪರ್ಕದೊಂದಿಗೆ ಹೇಗೆ ಕಾನೂನಿನ ಕುರಿತಾದ ಅರಿವು ಪಡೆಯುತ್ತಾಳೆ ಮತ್ತು ಅದನ್ನು ಹೇಗೆ ಸರಿಯಾಗಿ ಬಳಸಿಕೊಳ್ಳುತ್ತಾಳೆ ಎನ್ನುವುದು ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ಅನಾವರಣಗೊಳ್ಳುತ್ತದೆ.

ತೀಕ್ಷ್ಣಳ ಫ್ಲ್ಯಾಶ್ ಬ್ಯಾಕ್ ಪಾತ್ರವನ್ನು ಕೂಡ ಪ್ರಿಯಾಂಕಾ ಅವರಿಂದಲೇ ಮಾಡಿಸಬಹುದಿತ್ತು. ಉಳಿದಂತೆ ಈ ಕಥೆಯಲ್ಲಿ ಹೊಸತನವೇನೂ ಇಲ್ಲ. ಚಿತ್ರಕಥೆ ಗೊಂದಲಮಯವಾಗಿದೆ. ಇವೆಲ್ಲದರ ಮಧ್ಯೆ ಹಂತಕನ‌ ಕುರಿತಾದ ಕುತೂಹಲವನ್ನು ಎರಡನೇ ಭಾಗಕ್ಕೆ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಚಿತ್ರವು ವೀಕ್ಷಣೆಯ ಒಂದು ಪರಿಪೂರ್ಣ ಸಂಭ್ರಮವನ್ನು ನೀಡುವುದಿಲ್ಲ.

ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣದ ರೀತಿ ಎರಡೂ ಸೇರಿ ಭಯ ಬೀಳಿಸುವಲ್ಲಿ ಯಶಸ್ವಿಯಾಗಿದೆ. “ಎದುರಾಳಿ ಮುಖ ನೋಡದೆ ಯಾವತ್ತು ಅಖಾಡಕ್ಕೆ ಇಳಿದಿಲ್ಲ. ಅಖಾಡಕ್ಕೆ ಇಳಿದ ಮೇಲೆ ಯಾರ ಮುಖವನ್ನೂ ನೋಡಲ್ಲ” ಈ ರೀತಿಯ‌ ಪಂಚಿಂಗ್ ಸಂಭಾಷಣೆಗಳಿಗೆ ಕೊರತೆಯಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕ್ಲೈಮ್ಯಾಕ್ಸ್ ನಲ್ಲಿ ಎಂಟ್ರಿ ನೀಡುವ ವಿಜಯಸೂರ್ಯ ಮುಂದಿನ ಭಾಗದ ಬಗ್ಗೆ ಕುತೂಹಲ‌ ಮೂಡಿಸುತ್ತಾರೆ.

Recommended For You

Leave a Reply