ಆದರ್ಶ್ ಅಯ್ಯಂಗಾರ್ ಅವರ ಶ್ರೀಕೃಷ್ಣ ಪ್ರೊಡಕ್ಷನ್ ಹೌಸ್ ಮೂಲಕ ‘ಘಮ’ ಎನ್ನುವ ಕಿರುಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಘಮವನ್ನು ಬಿಡುಗಡೆಗೊಳಿಸಿದ ಖ್ಯಾತ ಸಾಹಿತಿ ಜೋಗಿಯವರು ಕಿರುಚಿತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
“ಇದರ ನಿರ್ದೇಶಕಿ ವಿದ್ಯಾಲಕ್ಷ್ಮಿ ಬಂಟ್ವಾಳದ ಹುಡುಗಿ. ಇವರು ಮೊದಲು ನನಗೆ ಸ್ನೇಹಿತ ಶ್ರೀನಿವಾಸ ಜೋಕಟ್ಟೆಯವರ ಮೂಲಕ ಪರಿಚಯವಾದವರು. ಧಾರಾವಾಹಿ ಬರೆಯಲು ಬೆಂಗಳೂರಿಗೆ ಬಂದವರು. ಇವರ ಪತಿ ಪ್ರಹ್ಲಾದ್ ಕೂಡ ಪರಿಚಯ. ಗೃಹಿಣಿಯಾಗಿದ್ದುಕೊಂಡು ಇವರಂತೆ ಬರೆಯುವುದು ಕಷ್ಟ. ಯಾಕೆಂದರೆ ಎರಡು ಕೂಡ ಜವಾಬ್ದಾರಿಯುತ ಕೆಲಸಗಳು. ಅದರಲ್ಲೂ ಈ ಬಾರಿ ಬರೆಯುವುದರ ಜತೆ ನಿರ್ದೇಶನವನ್ನು ಮಾಡಿರುವಂಥ ಈ ಸಾಬೂನಿನ ಕಿರುಚಿತ್ರ ನಮ್ಮ ಜನರೇಶನ್ ಗೆ ಕಾಡುವಂತಿದೆ” ಎಂದು ಜೋಗಿಯವರು ಹೇಳಿದರು.
ಘಮವನ್ನು ಸುಮಾರು ತೊಂಬತ್ತರ ದಶಕದಲ್ಲಿ ಕರಾವಳಿ ಭಾಗದಲ್ಲಿ ನಡೆಯುವ ಕಥೆಯಂತೆ ಚಿತ್ರಿಸಲಾಗಿದೆ. ಸಾಬೂನಿಗಾಗಿ ಆಸೆ ಪಡುವ ಪುಟ್ಟ ಮಗುವೊಂದು ಎದುರಿಸುವ ಸನ್ನಿವೇಶಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.
ಕುಲವಧು, ನಮ್ಮನೆ ಯುವರಾಣಿ, ಪ್ರೇಮಲೋಕ, ಸೇವಂತಿ ಶಾಂತಂ ಪಾಪಂ ಸೇರಿದಂತೆ, ಸಧ್ಯ ಪವಿತ್ರ ಬಂಧನ, ಹೀಗೆ ಹಲವು ಧಾರಾವಾಹಿಗಳಿಗೆ ಕಥೆ , ಚಿತ್ರಕಥೆ ಬರೆದಿರುವ, ಬರೆಯುತ್ತಿರುವ ಎಂ ವಿದ್ಯಾಲಕ್ಷ್ಮೀ ಪ್ರಹ್ಲಾದ್ ಅವರು ಮೊದಲ ಬಾರಿಗೆ ನಿರ್ದೇಶಿಸಿರುವ ಕಿರು ಚಿತ್ರ ಇದು.

‘ಘಮ’ ಪ್ರದರ್ಶನಗೊಂಡ ಬಳಿಕ ಮಾಧ್ಯಮದ ಜತೆ ಮಾತನಾಡಿದ ವಿದ್ಯಾಲಕ್ಷ್ಮೀ ಪ್ರಹ್ಲಾದ್, ಇದನ್ನು ಮೊದಲು ಕಥೆಯಾಗಿ ಮಾತ್ರ ಬರೆದಿದ್ದೆ ಎಂದರು. ಬಳಿಕ ಮಾರ್ಗದರ್ಶಕರಾದ ಡಾ.ವೆಂಕಿಯವರ ಸಲಹೆಯಂತೆ ಕಿರುಚಿತ್ರ ಮಾಡುವ ಯೋಜನೆ ಹಾಕಿದೆ. ಜತೆಯಾಗಿ ನಿಂತ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರೇ ನನ್ನ ಗುರುಗಳು. ಇದರ ಛಾಯಾಗ್ರಹಣವನ್ನು ಶಾಂತಿ ಸಾಗರ್ ಹೆಚ್.ಜಿ ನಿರ್ವಹಿಸಿದ್ದಾರೆ. ಸುಧೀರ್ ಎಸ್.ಜಿ. ಸಂಕಲನ ನಿರ್ವಹಿಸಿದ್ದಾರೆ. ಖ್ಯಾತ ವಿನ್ಯಾಸಕಾರ ‘ಅಪಾರ’ ಅವರು ಶೀರ್ಷಿಕೆ ವಿನ್ಯಾಸ ಮಾಡಿಕೊಟ್ಟಿದ್ದಾರೆ. ಅಂದಹಾಗೆ ಈ ಘಮ ಎನ್ನುವ ಶೀರ್ಷಿಕೆ ನೀಡಿದ ಕೀರ್ತಿ ನನ್ನ ಮಗಳು ಗೌರಿ ಮನೋಹರಿಗೆ ಸಲ್ಲುತ್ತದೆ ಎಂದರು. ಶೀರ್ಷಿಕೆಯ ಅಡಿಬರಹವಾಗಿ ‘ಪರಿಮಳಕ್ಕೆ ಪರವಶ’ ಎನ್ನುವ ಸಾಲು ಇದೆ.
ಬಾಲ್ಯದಲ್ಲಿ ಮಾವನ ಸ್ನೇಹಿತ ತಂದುಕೊಟ್ಟಿದ್ದ ಸಾಬೂನಿನ ಕುರಿತಾದ ನೆನಪು ಇಂಥದೊಂದು ಕಥೆ ಬರೆಯಲು ಪ್ರೇರಣೆಯಾಯಿತು. ಟಿ.ವಿಯಲ್ಲಿ ಬರುತ್ತಿದ್ದ ‘ಶಾಂತಂ ಪಾಪಂ’ ಸಂಚಿಕೆಗೆ ನಿರಂತರವಾಗಿ ನಾನೇ ಕಥೆ ಬರೆಯುತ್ತಿದ್ದೆ. ಕ್ಲೈಮ್ಯಾಕ್ಸ್ ಕಾಡುವಂತೆ ಮಾಡುವುದು ನನ್ನ ಅಭ್ಯಾಸ. ಹಾಗಾಗಿ ಇಲ್ಲಿಯೂ ಅಂಥದ್ದೇ ಎಂಡಿಂಗ್ ಇದೆ ಎಂದು ನಕ್ಕರು ವಿದ್ಯಾಲಕ್ಷ್ಮಿ.
ಕಿರುಚಿತ್ರ ಬಿಡುಗಡೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಭಾವನಾ ಮಾತನಾಡಿ, ಇದು ನೈಜತೆಗೆ ಹತ್ತಿರವಿರುವ ಕಥೆ. ನಾವು ಇಂಥದೇ ಎಳೆಯನ್ನು ಇಟ್ಟುಕೊಂಡೇ ‘ಬಾಲ್ ಪೆನ್’ ಎನ್ನುವ ಸಿನೆಮಾ ಮಾಡಿದ್ದೆವು ಎಂದರು. ಮತ್ತೋರ್ವ ಅತಿಥಿ ವೀರಸಮರ್ಥ್ ಮಾತನಾಡಿ, “ಚಿತ್ರದ ಶುರುವಾದೊಡನೆ ನನಗೆ ಪುನೀತ್ ರಾಜ್ ಕುಮಾರ್ ಅವರ ನಟನೆಯ ‘ಬೆಟ್ಟದ ಹೂ’ ಸಿನೆಮಾ ನೆನಪಾಯಿತು. ಹೊಡಿ ಬಡಿ ಸಿನೆಮಾಗಳ ನಡುವೆ ಈ ಕಿರುಚಿತ್ರ ನಿಜಕ್ಕೂ ಒಂದು ಘಮವೇ” ಎಂದರು.
ಖ್ಯಾತ ಕಿರುತೆರೆ ನಿರ್ಮಾಪಕಿ ಹಾಗೂ ನಟ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ರಾಜ್ ಮಾತನಾಡಿ, ವಿದ್ಯಾಲಕ್ಷ್ಮಿ ಇಷ್ಟು ಚೆನ್ನಾಗಿ ನಿರ್ದೇಶಿಸಬಲ್ಲರು ಎಂದು ಊಹಿಸಿರಲಿಲ್ಲ ಎಂದರು. ಕೆಲವೇ ನಿಮಿಷಗಳಲ್ಲೇ ನನ್ನನ್ನು ಭಾವುಕಗೊಳಿಸಿದ್ದಾರೆ ಎಂದು ಪ್ರಶಂಸಿಸಿದರು.
ಘಮದಲ್ಲಿ ವಜ್ರ ಭಾರ್ಗವಿ ಎನ್ನುವ ಪುಟ್ಟಮಗು ಪ್ರಧಾನ ಪಾತ್ರ ಮಾಡಿದೆ. ಶ್ರೀಗಂಧದ ಗುಡಿ, ಶ್ರಾವಣಿ ಸುಬ್ರಹ್ಮಣ್ಯ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿರುವ ವಜ್ರ ಭಾರ್ಗವಿ ಇಲ್ಲಿ ಮಂಗಳೂರು ಕರಾವಳಿಯ ಮಗುವಾಗಿ ನಟಿಸಿದೆ. ಮೂಲತಃ ಉತ್ತರ ಕರ್ನಾಟಕದ ಈ ಮಗು ಸಿಂಕ್ ಸೌಂಡ್ ಡಬ್ಬಿಂಗ್ ನಲ್ಲಿ ಕೂಡ ಕರಾವಳಿ ಶೈಲಿಯ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಿ ಅಚ್ಚರಿಯ ಅಭಿನಯ ನೀಡಿದೆ.
ಬೇಬಿ ಎನ್ನುವ ಯುವತಿಯ ಪಾತ್ರ ನಿರ್ವಹಿಸಿರುವ ಪ್ರಜ್ಞಾ ಶೆಟ್ಟಿ ಮಾತನಾಡಿ, ಕಥೆ ಇಷ್ಟವಾದ ಕಾರಣದಿಂದಲೇ ಈ ಪಾತ್ರವನ್ನು ಒಪ್ಪಿಕೊಂಡೆ ಎಂದರು. ಮಗುವಿನ ಅಜ್ಜಿಯಾಗಿ ನಟಿಸಿರುವ ತೀರ್ಥಹಳ್ಳಿಯ ಫಾತಿಮಾ ರಾಡ್ರಿಗಸ್ ತಾವು ರಂಗಭೂಮಿ ಕಲಾವಿದೆ ಎಂದರು.
ಕೊನೆಯಲ್ಲಿ ಮಾತನಾಡಿದ ನಿರ್ಮಾಪಕ ಆದರ್ಶ ಅಯ್ಯಂಗಾರ್, ನಾವು ನಮ್ಮ ನಿರ್ಮಾಣದಲ್ಲಿ ಕ್ವಾಲಿಟಿ ಕಂಟೆಂಟ್ ಗೆ ಒತ್ತು ನೀಡುತ್ತೇವೆ. ಆದರೆ ರಕ್ಷಿತ್ ತೀರ್ಥಹಳ್ಳಿ ಅವರಿಲ್ಲದೆ ಹೋಗಿದ್ದರೆ ಪ್ರೊಡಕ್ಷನ್ ಕಷ್ಟವಾಗುತ್ತಿತ್ತು ಎಂದರು. ವಸ್ತ್ರ ವಿನ್ಯಾಸಕಿ ತಾರಾ, ಮೇಕಪ್ ಕಲಾವಿದ ಸುರೇಶ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಘಮ ಕಿತುಚಿತ್ರವು ಆದರ್ಶ್ ಅಯ್ಯಂಗಾರ್ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.

