‘ಗ್ರಂಥ’ ಚಿತ್ರದ ಮುಹೂರ್ತ ಸಂಭ್ರಮ

ಗ್ರಂಥ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರಿತು. ಸಂಜೀವ್ ಗವಾಂಡಿ ಕಥೆ ರಚಿಸಿ, ನಿರ್ದೇಶಿಸಲಿರುವ ಈ ಚಿತ್ರದಲ್ಲಿ ನವ ನಾಯಕ ಯುವ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಮೂರು ವರ್ಷಗಳಿಂದ ಕಥೆ ಮಾಡುತ್ತಾ ಬಂದಿದ್ದೇವೆ. ಕಥೆಗಾಗಿ ಮುಂಬೈಗೂ ಹೋಗಿದ್ದೆ. ಭೂಗತ ಜಗತ್ತಿನ ಕಥೆ ಇದೆ. ಈ ಚಿತ್ರದಲ್ಲಿ ನಾಯಕನ ಬಗ್ಗೆ ಒಂದು ಗ್ರಂಥ ಇರಲಿದೆ. ರೌಡಿಸಂನ ವ್ಯಕ್ತಿ ಗ್ರಂಥದಲ್ಲಿ ಸೇರುವಂಥ ಕೆಲಸ ಏನು ಮಾಡುತ್ತಾನೆ ಎನ್ನುವುದೇ ಈ ಚಿತ್ರದ ಕಥೆ” ಎಂದು ನಿರ್ದೇಶಕ ಸಂಜೀವ್ ಗವಾಂಡಿ ಹೇಳಿದರು.

ಇಪ್ಪತ್ತು ದಿನಗಳ ಬಳಿಕ ಈ ಸಿನೆಮಾದ ಚಿತ್ರೀಕರಣ ಶುರುವಾಗಲಿದೆ. ಉತ್ತರ ಕರ್ನಾಟಕ ಸೇರಿದಂತೆ ಬೆಂಗಳೂರು, ಮಂಗಳೂರು ಮತ್ತು ಮುಂಬೈನಲ್ಲಿ ಇದರ ಚಿತ್ರೀಕರಣ ನಡೆಯಲಿದೆ. ಅಭಿಜಿತ್, ಕಾಕ್ರೋಚ್ ಸುಧಿ, ಸಯ್ಯಾಜಿ ಶಿಂಧೆ, ರವಿಕಾಳೆ ಹೀಗೆ ದೊಡ್ಡ ಮಟ್ಟದ ತಾರಾಗಣವೇ ಚಿತ್ರದಲ್ಲಿದೆ. ವಿರೇಶ್ ಎನ್.ಟಿ ಛಾಯಾಗ್ರಹಣ, ಸಂಕಲನಕಾರರಾಗಿ ಅಂಜನ್ ಪೂಜಾರಿ ಹೀಗೆ ತಾಂತ್ರಿಕವರ್ಗವಿದೆ ಎಂದು ನಿರ್ದೇಶಕರು ತಿಳಿಸಿದರು.

ಪಾತ್ರದ ಬಗ್ಗೆ ಮಾತನಾಡಿದ ಅಭಿಜಿತ್, ನಿರ್ದೇಶಕರು “ನಾನೇ ಈ ಪಾತ್ರ ಮಾಡಬೇಕು” ಎಂದರು. ಆದರೆ ನಿರ್ಮಾಪಕರಿಗೆ ನನ್ನ ಹೆಸರು ಹೇಳಿದಾಗ ಯಾರೆಂದೇ ಗೊತ್ತಾಗಿರಲಿಲ್ಲ. ಆದರೆ ಫೊಟೋನೋಡಿದ ತಕ್ಷಣ ನನ್ನ ಪರಿಚಯ ನೆನಪಾಗಿ ಒಪ್ಪಿದ್ದಾರೆ ಎಂದು ನಕ್ಕರು. ನಿರ್ಮಾಪಕ ರವಿ ಕೊಪ್ಪ ಅವರ ಆ ನಿಷ್ಕಲ್ಮಶತೆ ನನಗೆ ಇಷ್ಟವಾಯಿತು. ನಿರ್ದೇಶಕರು ಕಥೆ ಹೇಳುವ ರೀತಿ ಚೆನ್ನಾಗಿದೆ. ಗ್ರಂಥದಲ್ಲಿ ನನ್ನಪಾತ್ರಕ್ಕೆ ಸ್ವಲ್ಪ ನೆಗೆಟಿವ್ ಶೇಡ್ ಇದೆ ಎಂದರು ಅಭಿಜಿತ್.

ಗ್ರಂಥ ಚಿತ್ರದ ನಾಯಕ ನಟ ಯುವ ಮಾತನಾಡಿ, ಇದು ನನ್ನ ಎರಡನೇ ಸಿನೆಮಾ. ಚಿಕ್ಕ ವಯಸ್ಸಿನಿಂದಲೇ ನಾನು ವಿಷ್ಣುದಾದ ಅವರ ಅಭಿಮಾನಿ. ಇಲ್ಲಿ ಪೆನ್ನು ಮತ್ತು ಲಾಂಗ್ ನಡುವಿನ ಕಥೆ ಹೇಳಲಾಗುತ್ತಿದೆ. ಆದರೆ ಇದು ರೌಡಿಸಮ್ ಗೆ ಸೀಮಿತವಾದ ಚಿತ್ರವೇನಲ್ಲ. ಗ್ರಂಥದಲ್ಲಿ ತಂದೆ ಮಗನ ಸೆಂಟಿಮೆಂಟ್ ಕೂಡ ಇದೆ ಎಂದರು.

ನಟ ಕಾಕ್ರೋಚ್ ಸುಧಿ ಮಾತನಾಡಿ, ನಿರ್ಮಾಪಕರು ಮೊದಲ ಭೇಟಿಯ ಸಂದರ್ಭದಲ್ಲೇ ಸಿಹಿಯೊಂದಿಗೆ ಆಗಮಿಸಿದ್ದರು. ಖುಷಿಯಾಯಿತು. ಈ ತಂಡದ ತಾಂತ್ರಿಕ ‘ವರ್ಗದಲ್ಲಿ ನನಗೆ ಛಾಯಾಗ್ರಾಹಕ ವೀರೇಶ್ ಅವರೊಬ್ಬರೇ ಪರಿಚಯ. ಆದರೆ ಚಿತ್ರತಂಡದ ಉತ್ಸಾಹ ಕಂಡು ಒಳ್ಳೆಯ ನಿರೀಕ್ಷೆ ಮೂಡಿದೆ ಎಂದರು. ನಿರ್ಮಾಪಕಿ ಹರಿಪ್ರಿಯಾ ರವಿ ಕೊಪ್ಪ ಉಪಸ್ಥಿತರಿದ್ದು ಖುಷಿ ಹಂಚಿಕೊಂಡರು.

ನಟ ಅನಿರುದ್ಧ ಜಟ್ಕರ್ ಕ್ಲಾಪ್ ಮಾಡಿ ಚಿತ್ರಕ್ಕೆ ಶುಭಕೋರಿದರು. ಯುವನಟ ನವೀನ್ ಶಂಕರ್ ಮುಹೂರ್ತಕ್ಕೆ ಅತಿಥಿಯಾಗಿ ಆಗಮಿಸಿದ್ದರು. ವಿಶೇಷ ಅತಿಥಿಯಾಗಿ ಆಗಮಿಸಿದ ಉಮೇಶ್ ಬಣಕಾರ್ ಚಿತ್ರದ ಶೀರ್ಷಿಕೆ ಸಾಹಿತ್ಯಕವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

Recommended For You

Leave a Reply