ಮೊಹಮ್ಮದ್ ಕಿಜಾರ್ ಮೊದಲ ಬಾರಿ ನಾಯಕರಾಗಿ ನಟಿಸುತ್ತಿರುವ ಚಿತ್ರ ‘ಪತ್ತೇದಾರಿ’. ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.
ಚಿತ್ರದ ಹೆಸರೇ ಹೇಳುವಂತೆ ಇದೊಂದು ಕ್ರೈಮ್ ಥ್ರಿಲ್ಲರ್. ಇದೇ ಜಾನ್ರದಲ್ಲಿ ತಯಾರು ಮಾಡುತ್ತಿರುವಂಥ ಚಿತ್ರ. ಈ ಹಿಂದೆ ಬಂದಿರುವ ಎಲ್ಲ ಸಿನೆಮಾಗಳಿಗಿಂತ ಇದು ವಿಭಿನ್ನವಾಗಿರುತ್ತದೆ. ಅದೇ ಕಾರಣದಿಂದಲೇ ಈಗಾಗಲೇ ಐದು ವರ್ಷನ್ ಕಥೆ ಬರೆದು, ಆರನೇ ವರ್ಷನ್ ಅನ್ನು ಅಂತಿಮಗೊಳಿಸಿದ್ದೇವೆ. ಒಟ್ಟು 44 ದಿನಗಳ ಕಾಲ ಚಿತ್ರೀಕರಣದ ಯೋಜನೆ ಹಾಕಿದ್ದೇವೆ. ಖ್ಯಾತ ಡೈಲಾಗ್ ರೈಟರ್ ರಘು ನಿಡುವಳ್ಳಿಯವರು ಸಂಭಾಷಣೆ ರಚಿಸಿದ್ದಾರೆ ಎನ್ನುವ ಮಾಹಿತಿಯನ್ನು ನಿರ್ದೇಶಕ ಶ್ರೀನಿವಾಸ್ ಜಯರಾಮ್ ನೀಡಿದರು. ಎರಡೂವರೆ ದಶಕದಿಂದ ಡೈರೆಕ್ಷನ್ ವಿಭಾಗದಲ್ಲಿ ಗುರುತಿಸಿಕೊಂಡಿರುವ ಇವರು ಓಂ ಪ್ರಕಾಶ್ ರಾವ್, ಹರ್ಷ ಮಾಸ್ಟರ್ ಮೊದಲಾದವರೊಂದಿಗೆ ಕೆಲಸ ಮಾಡಿದಂಥ ಅನುಭವ ಹೊಂದಿದ್ದಾರೆ.
ನಾಯಕ ನಟ ಮಹಮ್ಮದ್ ಕಿಜಾರ್ ಮಾತನಾಡಿ, ನಿರ್ದೇಶಕರು ಹೇಳಿದ ಕಥೆ ಕೇಳಿ ತುಂಬ ಇಷ್ಟವಾಯಿತು. ಇಲ್ಲಿ ನಾನು ನಾಯಕ ಮಾತ್ರವಲ್ಲ. ಚಿತ್ರದ ನಿರ್ಮಾಪಕ ಕೂಡ ಹೌದು. ಅದಕ್ಕೆ ಈ ಕಥೆಯ ಮೇಲಿರುವ ಭರವಸೆಯೇ ಕಾರಣ ಎಂದರು.
ಕಿಜಾರ್ ಅವರಿಗೆ ಜೋಡಿಯಾಗಿ ರೂಪಾಗೌಡ ಅಭಿನಯಿಸುತ್ತಿದ್ದಾರೆ. ಇದು ತಮ್ಮ ನಟನೆಯ ಐದನೆಯ ಚಿತ್ರ ಎಂದು ಅವರು ಹೇಳಿದರು. ಕಥೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ. ಅದೇ ವಿಶೇಷ ಎಂದರು. ನಟ ಸಿದ್ದೇಶ್ ಮಾತನಾಡಿ, 12 ವರ್ಷಗಳ ವೃತ್ತಿ ಬದುಕಿನ ಪಯಣದಲ್ಲಿ ಇದು 3ನೇ ಸಿನಿಮಾ.ಈ ಹಿಂದೆ ಗಜಪಡೆ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದೇನೆ. ಇಲ್ಲಿ ತಾವು ಡಿಟೆಕ್ಟಿವ್ ಪಾತ್ರದಲ್ಲಿ ಅಭಿನಯಿಸಿರುವುದಾಗಿ ಹೇಳಿದರು.

ಸಂತು – ಸೂರಜ್ ಹಾಸ್ಯ ಜೋಡಿ.!
ಪತ್ತೇದಾರಿ ಕಥೆಯೇ ಚಿತ್ರದ ವಸ್ತುವಾಗಿದ್ದರೂ ಇಲ್ಲಿ ಹಾಸ್ಯಕ್ಕೆ ಕೊರತೆ ಇರದು. ಯಾಕೆಂದರೆ ಕನ್ನಡ ಕಿರುತೆರೆಯಲ್ಲಿ ಹಾಸ್ಯದಿಂದಲೇ ಗುರುತಿಸಿಕೊಂಡಿರುವ ತುಕಾಲಿ ಸಂತು ಮತ್ತು ಸೂರಜ್ ಮಂಗಳೂರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದ ಸೂರಜ್ “ನನ್ನ ಪಾತ್ರ ನಿಮಗೆ ಕೊಟ್ಟಿದ್ದಾರೆ” ಎಂದು ಆಪಾದನೆ ಮಾಡುತ್ತಿರುವುದಾಗಿ ತುಕಾಲಿ ಸಂತು ಕಾಲೆಳೆದರು. ನನಗೆ ಇಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ. ಹೆಚ್ಚಾಗಿ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದ ನನಗೆ, ಹಾಸ್ಯಾತ್ಮಕ ಪೊಲೀಸ್ ತನಿಖಾಧಿಕಾರಿಯ ಪಾತ್ರ ಮಾಡಬೇಕು ಎನ್ನುವ ಕನಸಿತ್ತು. ಅದು ಈಗ ನನಸಾಗಿದೆ ಎಂದರು. ಇದುವರೆಗೆ ಸಿಕ್ಕ ಪಾತ್ರಗಳನ್ನೆಲ್ಲ ಒಪ್ಪಿಕೊಳ್ತಿದ್ದೆ. ಈಗ ಉತ್ತಮ ಪಾತ್ರಗಳನ್ನು ಹುಡುಕಿ ಆಯ್ಕೆ ಮಾಡುತ್ತಿದ್ದೇನೆ. ಆ ಪಟ್ಟಿಯಲ್ಲಿ ಇದೇ ಮೊದಲನೆಯದು ಎಂದು ಸಂತು ಹೇಳಿದರು. ಇಲ್ಲಿ ತಮಗೆ ಜೋಡಿ ಇದೆಯೋ ಇಲ್ವೋ ಗೊತ್ತಿಲ್ಲ. ಸಿಕ್ಕರೆ ಖುಷಿಯೇ ಎಂದರು.
ಕಾಕ್ರೋಚ್ ಸುಧಿ, ವರ್ಧನ್, ಗಿರೀಶ್ ಜತ್ತಿ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ನಾಯಕ ನಿರ್ಮಾಪಕ ಮಹಮ್ಮದ್ ಕಿಜಾರ್ ಜೊತೆಗೆ ಮೊಹಮ್ಮದ್ ಆತಿಕ್, ಮಧುಸೂದನ್ ಟಿ.ವಿ ಹಾಗೂ ಟಿ.ಕೃಷ್ಣಪ್ಪ ಮೊದಲಾದವರು ಬಂಡವಾಳ ಹೂಡಿದ್ದಾರೆ. ರವಿವರ್ಮ ಮತ್ತು ನರಸಿಂಹ ಸಾಹಸ ನಿರ್ದೇಶಿಸಲಿದ್ದಾರೆ.

