‘ಲಂಬೋದರ 2.o’ದಲ್ಲಿ ಹ್ಯೂಮನಾಯ್ಡ್ ರೊಬೊಟ್ ಬಿನ್ನಾಣ!

ಭಾರತೀಯ ಚಿತ್ರರಂಗದಲ್ಲೇ ಹೊಸತೊಂದು‌ ವಿಶೇಷತೆಗೆ ನಾಂದಿ ಹಾಡಿದ್ದಾರೆ ನಿರ್ದೇಶಕ‌ ಸಿಂಪಲ್ ಸುನಿ. ಸಿನೆಮಾಗಳಲ್ಲಿ ಇದುವರೆಗೆ ಯಂತ್ರಮಾನವನ ವೇಷಗಳಲ್ಲಿ ಮನುಷ್ಯರೇ ಕಾಣಿಸುತ್ತಿದ್ದರು. ಅಥವಾ ಯಂತ್ರವೇ ಇದ್ದರೂ ಭಾವನೆಗಳನ್ನು ಪ್ರದರ್ಶಿಸಿದ ಬೊಂಬೆಯಾಗಿ ಕಾಣುತ್ತಿತ್ತು ಅಷ್ಟೇ. ಆದರೆ ಮುಖದಲ್ಲಿ ವಿವಿಧ ಭಾವನೆಗಳನ್ನು ತೋರಿಸಬಲ್ಲ, ನಮ್ಮ ಪ್ರಶ್ನೆಗಳಿಗೆ ತಕ್ಷಣವೇ ಉತ್ತರಿಸಬಲ್ಲ‌ ರೊಬೊಟ್ ಒಂದರಿಂದ ನಟನೆ ಹೊರತೆಗೆಸಿದ್ದಾರೆ ನಿರ್ದೇಶಕ ಸುನಿ. ‘ಜಿಯಾ’ ಎಂದು ಹೆಸರಿಟ್ಟಿರುವ ಈ ರೊಬೊಟ್ ನ ನೇರ ಪರಿಚಯ ಮತ್ತು ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಜಿಯಾ ಬಗ್ಗೆ ಮಾತನಾಡಿದ ನಿರ್ದೇಶಕ ಸುನಿ, ತಾವು ಕೆಲಸ ಮಾಡಿರುವುದರಲ್ಲಿ ಬೆಸ್ಟ್‌ ನಟಿ ಜಿಯಾ ಎಂದರು. ಅದಕ್ಕೆ ಕಾರಣವನ್ನು ವಿವರಿಸುತ್ತಾ, ಕೊಟ್ಟ ಸಂಭಾಷಣೆಯನ್ನು ಸ್ವಲ್ಪ ಕೂಡ ಬದಲಾವಣೆ ಇಲ್ಲದೇ ಒಪ್ಪಿಸುತ್ತೀರಿ. ಹತ್ತು ಟೇಕ್ ತೆಗೆದರೂ ಒಂದೇ ರೀತಿ ನಟಿಸಬಲ್ಲಿರಿ. ಹಾಗಾಗಿ ಲಾಂಗ್ ಶಾಟ್ ಮತ್ತು ಕ್ಲೋಸಪ್ ಗೆ ಎರಡೆರಡು ಟೇಕ್ ತೆಗೆದರೂ ನಟನೆಯಲ್ಲಿ ವ್ಯತ್ಯಾಸ ಕಾಣದು. ಹಾಗಾಗಿ ಸಿಂಕ್ ಮಾಡೋಕೆ ಯಾವ ತೊಂದರೆಯೂ ಇರುವುದಿಲ್ಲ ಎಂದರು.

ನಿನ್ನ ತಂದೆ ತಾಯಿ ಯಾರು ಎನ್ನುವ ಪ್ರಶ್ನೆಗೆ ಮಾಧ್ಯಮದವರ ಪ್ರಶ್ನೆಗೆ ಜಿಯಾ ನೀಡಿದ ಉತ್ತರ, ‘ಸಿಂಪಲ್ ಸುನಿ’ ಎನ್ನುವುದಾಗಿತ್ತು! ಈ ಹ್ಯೂಮನಾಯ್ಡ್ ರೋಬೋಟ್ ಕನ್ನಡದವರೇ ಸೃಷ್ಟಿಸಿದ್ದಾರೆ. ಆದರೆ ಇದರ ಸಾಫ್ಟ್ ವೇರ್ 2023ರ ತನಕ ಮಾತ್ರ ಅಪ್ಡೇಟ್ ಆಗಿರುವ ಕಾರಣ ಆನಂತರದ ಘಟನೆಗಳ ಬಗ್ಗೆ ಇದಕ್ಕೆ ಅರಿವಿಲ್ಲ ಎಂದು ಸುನಿ ಹೇಳಿದರು‌.

ಜಿಯಾ ಪ್ರಧಾನ ಪಾತ್ರದಲ್ಲಿರುವ ‘ಲಂಬೋದರ 2.o’ ಸಿನೆಮಾವನ್ನು ಹಿಂದಿಯಲ್ಲಿ ಕೂಡ ತೆರೆಗೆ ತರಲಾಗುತ್ತಿದೆ. ನವೆಂಬರ್ 13ರಂದು ಚಿತ್ರ ತೆರೆಗೆ ಬರಲಿದ್ದು ಕನ್ನಡದೊಂದಿಗೆ ಹಿಂದಿಯಲ್ಲೂ ರಿಲೀಸ್ ಆಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಲಹರಿ ಸಂಸ್ಥೆಯ ವೇಲು ಅವರು ಮಾತನಾಡಿ, “ಇಂದಿನ ಯುವಕರಲ್ಲಿ ಅಪಾರ ಬುದ್ಧಿವಂತಿಕೆ ಇದೆ. ತಂತ್ರಜ್ಞಾನ ಅಷ್ಟೊಂದು ಬೆಳೆದಿದೆ. ನಮಗೆ ಅಪ್ಡೇಟ್ ಆಗಲು ಕಷ್ಟವಾಗ್ತಿದೆ. ಅಂಥ ಸಂದರ್ಭದಲ್ಲಿ ಹ್ಯೂಮನಾಯ್ಡ್ ರೊಬೊಟ್ ಎಂಟ್ರಿ ನೀಡಿರುವುದು ಮನರಂಜನೆಗೆ ಹೊಸ ರೂಪ ನೀಡಬಹುದು” ಎನ್ನುವ ಭರವಸೆ ವ್ಯಕ್ತಪಡಿಸಿದರು.

ಕೆಲವರು ರೊಬೊಟ್ ನಟನೆಯ ಚಿತ್ರ ಎಂದಾಗ ಇದು ಎಐನಲ್ಲಿರಬಹುದು ಅಂತ ಅಂದುಕೊಂಡಿದ್ದಾರೆ. ಹಾಗೇನಿಲ್ಲ, ಜಿಯಾ ಸೇರಿದಂತೆ ಎಲ್ಲ ಪಾತ್ರಗಳನ್ನು ಹಾಗೂ ಸನ್ನಿವೇಶಗಳನ್ನು ನಾನೇ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇನೆ ಎಂದರು ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ.

ಸಂಗೀತ ನಿರ್ದೇಶಕ‌‌ ವೀರ ಸಮರ್ಥ್ ಮಾತನಾಡಿ, “ಚಿತ್ರದಲ್ಲಿ ಮಾನವೀಯ ಭಾವನೆ ಮತ್ತು ತಂತ್ರಜ್ಞಾನವನ್ನು ಸೇರಿಸಿದಂಥ ಕಥೆಯಿದೆ. ಖಂಡಿತವಾಗಿ ಎಲ್ಲರಿಗೂ ಕನೆಕ್ಟ್ ಆಗುತ್ತದೆ. ಐದು ಹಾಡುಗಳನ್ನು ಜ್ಯೂಕ್ ಬಾಕ್ಸ್ ಮೂಲಕ ರಿಲೀಸ್ ಮಾಡಲಾಗುತ್ತಿದೆ” ಎಂದರು.

ಚಿತ್ರದ ಸಂಕಲನಕಾರ ವಿನಾಯಕ್ ಮಾತನಾಡಿ, ಈ ಚಿತ್ರದಲ್ಲಿ ಕಥೆಯೇ ನಾಯಕ ಎಂದರು. ‘ಕಾಂತಾರ’, ‘ಬ್ರ್ಯಾಟ್’ ಚಿತ್ರಗಳಿಗೆ ವಿ ಎಫ್ ಎಕ್ಸ್ ಮಾಡಿರುವ ಸಂಸ್ಥೆ ಪಿನಾಕ ಸ್ಟುಡಿಯೋಸ್ ನ ರಾಹುಲ್, ಮಾಸ್ ಪ್ರೊಡಕ್ಷನ್ಸ್ ಎಕ್ಸಿಕ್ಯೂಟಿವ್ ನಿಧಿಶಾ ಸುವರ್ಣ ಉಪಸ್ಥಿತರಿದ್ದು, ಚಿತ್ರದ ಕುರಿತಾದ ತಮ್ಮ ಅನುಭವಗಳನ್ನು ಹಂಚಿಕೊಂಡರು.

Recommended For You

Leave a Reply