ಟೀಸರ್ ನಲ್ಲೇ ಹೊಸ ಪ್ರಯೋಗ ನಡೆಸಿದ ‘ಲಾರ್ಡ್ ಗಾಗ’

ಲಾರ್ಡ್ ಗಾಗ ಹೆಸರಲ್ಲಿ ‘ರೊಮ್ಯಾಂಟಿಕ್ ಡ್ರಿಲ್ಲರ್ ಒಂದು ಸಿದ್ಧವಾಗಿದೆ. ಇದು ಹೊಸಬರ ಚಿತ್ರತಂಡದ ಕೊಡುಗೆ. ಅದಕ್ಕೆ ತಕ್ಕಂತೆ ಬಿಡುಗಡೆಯಾದ ಟೀಸರ್ ನಲ್ಲಿಯೂ ಹೊಸತನ ಎದ್ದು ಕಾಣುವಂತಿತ್ತು.

ನಿರ್ದೇಶಕ ವೈ.ಕೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟೀಸರ್ ಜತೆಗೆ ಪ್ರದರ್ಶಿಸಲಾದ ಪೋಸ್ಟರ್ ಕೂಡ ತಲೆಗೆ ಕೆಲಸ ನೀಡುವಂತಿತ್ತು. ಮೆದುಳಿನ ಮೇಲೆ ಚಪ್ಪಲಿ ಇಟ್ಟಿರುವ ಚಿತ್ರಗಳು ಕೂಡ ಇಲ್ಲಿದ್ದವು. ಅದರ ಅರ್ಥ ಪ್ರತಿಯೊಂದು ಹೆಜ್ಜೆಯನ್ನು ಕೂಡ ನೋಡಿಕೊಂಡು ಇಡಬೇಕು ಎನ್ನುವುದಾಗಿತ್ತು. ದೇವರ ಸೃಷ್ಟಿ ಅದ್ಭುತವಾಗಿದೆ. ಅದನ್ನು ಅರ್ಥ ಮಾಡಬೇಕಿದೆ ಎಂದು ವಿವರಿಸಿದ ನಿರ್ದೇಶಕರು ಪ್ರತಿಯೊಂದರ ಅರ್ಥ ತಿಳಿಯಬೇಕಾದರೆ ಪ್ರೇಕ್ಷಕರು ಈ ಚಿತ್ರ ನೋಡಲೇಬೇಕು ಎಂದರು.

ಮುಖ್ಯವಾಗಿ ಈ ಚಿತ್ರದಲ್ಲಿ ನಾವು ಇನ್ನೊಬ್ಬರ ಬಗ್ಗೆ ನಿರೀಕ್ಷೆ ಇಡುವುದು ತಪ್ಪು ಎನ್ನುವ ಸಂದೇಶ ಇದೆ. ಯಾಕೆಂದರೆ ನಮ್ಮದೇ ಉಗುರು, ತಲೆಗೂದಲು, ಹೃದಯ ಮೊದಲಾದವು ಅವುಗಳ ಇಷ್ಟದ ಹಾಗೆ ಕೆಲಸ ಮಾಡುತ್ತವೆ. ನಮ್ಮ ಅವಯವಗಳೇ ನಮ್ಮ ನಿಯಂತ್ರಣದಲ್ಲಿ ಇಲ್ಲ ಎಂದ ಮೇಲೆ ಎದುರು ಭಾಗದವರು ನಮ್ಮ ಮಾತು ಕೇಳಬೇಕು ಎಂದು ಬಯಸಬಾರದು ಎನ್ನುವುದನ್ನು ತೋರಿಸಲಾಗಿದೆ. ಒಟ್ಟಿನಲ್ಲಿ ಇದನ್ನೊಂದು ಕೌಟುಂಬಿಕ ಚಿತ್ರವಾಗಿಯೇ ಮಾಡಿದ್ದೇವೆ. ಗಂಡ ಹೆಂಡತಿ ಕೂಡ ಕುಟುಂಬ ಸಮೇತ ನೋಡಬೇಕಾದ ಚಿತ್ರ ಎಂದು ನಿರ್ದೇಶಕರು ಹೇಳಿದರು.

ಇದೇ ಸಂದರ್ಭದಲ್ಲಿ ‘ಹೈಯಾದೆ’ ಎನ್ನುವ ಸೆಲೆಬ್ರೇಷನ್‌ ಹಾಡು ಬಿಡುಗಡೆಗೊಳಿಸಲಾಯಿತು. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ಕೆ. ಹೇಮಂತ್ ಕುಮಾರ್, ಆದಿಲ್ ನಡಾಪ್ ಮತ್ತು ಶಿವೋಂ ಎನ್ನುವ ಮೂವರು ಸಂಗೀತ ನೀಡಿದ್ದಾರೆ. ಪಾತ್ರವನ್ನೂ ಮಾಡಿರುವ ನಿರ್ಮಾಪಕ ಮುಕಿ ರಘುನಾಥನ್ ಮಾತನಾಡಿ, ನಾನು ಸಿನೆಮಾರಂಗದಲ್ಲಿ ಕೇವಲ 18 ತಿಂಗಳ ಮಗು. ಇದು ನನ್ನ 24ನೇ ಬಿಸ್ನೆಸ್. ಇತ್ತೀಚೆಗೆ ಚಿತ್ರಗಳು ಸೋಲುತ್ತಿವೆ. ಆದರೆ ಗೆಲ್ಲಬಲ್ಲೆವು ಎನ್ನುವ ಧೈರ್ಯದೊಂದಿಗೆ ಈ ಚಿತ್ರ ಮಾಡಿದ್ದೇವೆ. ಈ ಲಾರ್ಡ್ ಗಾಗ ಚಿತ್ರವನ್ನು ‘ಪ್ರೇಮದ ಊರಲಿ’ ಚಿತ್ರದ ವಿತರಕ ಪ್ರಶಾಂತ್ ವಿತರಣೆ ಮಾಡುತ್ತಿದ್ದಾರೆ” ಎಂದರು. ಪ್ರಶಾಂತ್ ಮಾತನಾಡುತ್ತಾ ‘ಪ್ರೇಮದ ಊರಲಿ’ ಪ್ರಚಾರಕ್ಕೆ 7 ತಿಂಗಳು ತೆಗೆದುಕೊಂಡಿದ್ದೆವು. ಮಿನಿಮಮ್ 6 ತಿಂಗಳು ಖಂಡಿತವಾಗಿ ಬೇಕು ಎಂದರು.

ನಟ ಶೂನ್ಯ ಅವರು ಈ ಚಿತ್ರದಲ್ಲಿ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ಅವರು ಈ ಹಿಂದೆ ದನಂಜಯ್ ನಟನೆಯ ‘ಹೆಡ್ ಬುಶ್’ ಚಿತ್ರವನ್ನು ನಿರ್ದೇಶಿಸಿ ಗುರುತಿಸಿಕೊಂಡಿದ್ದರು. ದಿಶಾ ಶೆಟ್ಟಿ ಅವರು ತಮ್ಮ ಪಾತ್ರದ ಹೆಸರು ರಾದ ಎಂದರು. ಇಲ್ಲಿ ತಮ್ಮದು ಕಣ್ಣು ಕಾಣದ ಯುವತಿಯ ಪಾತ್ರ. ಕೆಲವೊಂದನ್ನು ಕಾಣದಂತೆ ಇರುವ ಅಗತ್ಯ ಇದೆ ಎನ್ನುವ ಸಂದೇಶ ನನ್ನ ಪಾತ್ರದಲ್ಲಿದೆ ಎಂದರು. ಅಲ್ಕಾ ಅವರು ಚಿತ್ರಕ್ಕೆ ಸಹ ನಿರ್ಮಾಪಕಿಯಾಗಿ ಕಾರ್ಯ ನಿರ್ವಹಿಸಿದ್ದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Recommended For You

Leave a Reply