ನವ ನಿರ್ದೇಶಕ ಶ್ರೀಶ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ತರಂಗಾಂತರಂಗ. ಈ ಸಿನೆಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನೆರವೇರಿತು. ಚಿತ್ರದ ನಾಯಕರೂ ಆಗಿರುವ ಶ್ರೀಶ ಈ ಸಂದರ್ಭದಲ್ಲಿ ಮಾತನಾಡುತ್ತಾ, ನಾಲ್ಕು ಹಾಡುಗಳು ಕೂಡ ಹೇಗೆ ವಿಭಿನ್ನವಾಗಿದೆ ಎಂದು ವಿವರಿಸಿದರು.
ಆಡಿಯೋ ರಿಲೀಸ್ ಪ್ರಯುಕ್ತ ಎರಡು ಹಾಡುಗಳ ಲಿರಿಕಲ್ ವಿಡಿಯೋಗಳನ್ನು ಮಾಧ್ಯಮದ ಮುಂದೆ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ “ಸಮಾ ಕುಡುವ..” ಎನ್ನುವ ಕುಂದಾಪುರ ಕನ್ನಡದ ಹಾಡು ತನ್ನ ಸಾಹಿತ್ಯ ಮತ್ತು ಸಂಗೀತದಿಂದ ಗಮನ ಸೆಳೆಯಿತು. ಈ ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರು. ಅವರಲ್ಲೊಬ್ಬರಾದ ಪ್ರವೀಣ್ ಸ್ವತಃ ರಚಿಸಿ ಸಂಗೀತ ಸಂಯೋಜಿಸಿರುವ ಈ ಗೀತೆ ಕುಂದಾಪುರದ ‘ಪಾರ್ಟಿಗೀತೆ’ಯಾಗುವುದರಲ್ಲಿ ಸಂದೇಹವಿಲ್ಲ.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಅವರಲ್ಲೊಬ್ಬರಾದ ಯಶಸ್ವಿನಿ ಕೆ.ಸ್ವಾಮಿ ಮಾತನಾಡಿ, “ಇದು ನನ್ನ ಮೊದಲ ಚಿತ್ರ. ಚಿತ್ರೀಕರಣ ತುಂಬ ಸುಲಲಿತವಾಗಿ ನಡೆಯಿತು. ರಾಕೇಶ್ ಪೂಜಾರಿ ಜತೆ ನಾನು ರಿಯಾಲಿಟಿ ಶೋನಲ್ಲಿ ಮಾಡುತ್ತಿದ್ದಾಗಲೇ ನಾವಿಬ್ಬರೂ ಈ ಸಿನೆಮಾದಲ್ಲಿ ನಟಿಸಿದ್ದೇವೆ. ಹಾಗಾಗಿ ಯಾವತ್ತೂ ಮರೆಯಲು ಸಾಧ್ಯವಾಗದಂಥ ಚಿತ್ರ ಇದು. ಆದರೆ ಈಗ ಪ್ರದರ್ಶಿಸಿದ ಕುಂದಾಪುರದ ಹಾಡು ಮಾತ್ರ ದೇವರಾಣೆ ಅರ್ಥಾಗಿಲ್ಲ” ಎಂದರು.
ಚಿತ್ರದ ಮತ್ತೋರ್ವ ನಾಯಕಿ ಅಶ್ವಿನಿ ಮಾತನಾಡಿ, ‘ತಮ್ಮ ಪಾತ್ರದ ಚಿತ್ರೀಕರಣವು ಮಂಗಳೂರಿನಲ್ಲಿತ್ತು. ಹದಿನೈದು ದಿನಗಳ ಕಾಲ ಶೂಟಿಂಗ್ ನಡೆದಿದ್ದಾಗಿ ಹೇಳಿದರು. ಪ್ರಸ್ತುತ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಸಿನೆಮಾ ಮತ್ತು ಧಾರಾವಾಹಿಗೆ ಹೋಲಿಸಿದರೆ, ನಿರಂತರ, ನಿಗದಿತ ಸಂಪಾದನೆ ವಿಚಾರದಲ್ಲಿ ಧಾರಾವಾಹಿಯೇ ಉತ್ತಮ” ಎನ್ನುವ ಅನಿಸಿಕೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಲಾದ ಮತ್ತೊಂದು ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ಜೋಡಿ ಸಹೋದರರು ಪ್ರದೀಪ್ ಮತ್ತು ಪ್ರವೀಣ್ ಮಾತನಾಡಿದರು. “ನಿರ್ದೇಶಕರು ಸದಾ ನಮ್ಮಲ್ಲಿ ಟ್ರೈ ಮಾಡಿ, ಏನಾದರೂ ಹೊಸತು ಟ್ರೈ ಮಾಡಿ ಎಂದಷ್ಟೇ ಹೇಳಿದ್ರು. ಹಾಗೆ ನಾವು ಮ್ಯೂಸಿಕ್ ಕಂಪೋಸ್ ಮಾ ಗೀತ ಸಾಹಿತಿ ನಾಗಾರ್ಜುನ ಶರ್ಮ ಅವರಿಗೆ ಕೊಟ್ಟೆವು. ಕಾನ್ಸೆಪ್ಟ್ ಕೇಳಿದ್ರೆ ಟೈ ಮಾಡಿದ್ದಾಗಿ ಹೇಳಿದೆವು. ಅವರು ‘ಟ್ರೈ ಮಾಡಿ..’ ಅನ್ನೋ ಪಲ್ಲವಿಯಲ್ಲೇ ಹಾಡು ಬರೆದರು’ ಎಂದು ನಕ್ಕರು.
‘ಒಂಬತ್ತು ಸುಳ್ಳು ಕಥೆಗಳು’, ಅರಸಯ್ಯನ ಪ್ರೇಮ ಪ್ರಸಂಗ’, ‘ಎಲ್ಲ ಕಾಲೆಳೆಯುತ್ತೆ ಕಾಲ ಎನ್ನುವ 3 ಚಿತ್ರಗಳ ಬಳಿಕ ಈ ಚಿತ್ರಕ್ಕೆ ಸಂಗೀತ ನೀಡಿದ್ದೇವೆ. ‘ಟ್ರೈ ಮಾಡಿ..’ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಇನ್ನೊಂದು ಹಾಡು ತುಂಬ ಪ್ರಯೋಗಾತ್ಮಕವಾಗಿದೆ. ಗಾದೆಗಳನ್ನೇ ಸೇರಿಸಿ ಬರೆದಿರುವ ಆ ಹಾಡನ್ನು ವಾರಿಜಾ ಶ್ರೀ ಹಾಡಿದ್ದಾರೆ. ಹದಿನೈದಕ್ಕೂ ಅಧಿಕ ಗಾದೆಗಳನ್ನು ಪಲ್ಲವಿ ಮತ್ತು ಚರಣದಲ್ಲಿ ಬಳಸಲಾಗಿದೆ. ಕಥೆಗೆ ಹೊಂದುವಂಥ ಗಾದೆಗಳೇ ಇರುವುದು ವಿಶೇಷ. ಬಹುಶಃ ಇಂಥ ಹಾಡು ಕನ್ನಡದಲ್ಲಿ ಇದೇ ಮೊದಲು ಅಂತ ಅಂದುಕೊಂಡಿದ್ದೇವೆ ಎಂದರು.
ಅಕ್ಷಯ್ ಎಸ್ ರಿಷಬ್ ಅವರು ಚೆನ್ನಾಗಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ಹಿಂದೆ ರಾಜಯೋಗ, ಭಾವಪೂರ್ಣ, ಊರಹಬ್ಬ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ ಅನುಭವಿ ಎಂದು ಶ್ರೀಶ ಮೆಚ್ಚುಗೆ ಸೂಚಿಸಿದರು.
ಇದೊಂದು ಸಸ್ಪೆನ್ಸ್ ದ್ರಿಲ್ಲರ್ ಚಿತ್ರ. ಚಿತ್ರದಲ್ಲಿ ಐದು ಪ್ರಮುಖ ಪಾತ್ರಗಳಷ್ಟೇ ಹೆಚ್ಚು ಕಾಣಿಸಿಕೊಳ್ಳಲಿವೆ. ಅವುಗಳಲ್ಲಿ ಇಬ್ಬರು ನಾಯಕಿಯರು ನಾನು ಮತ್ತು ರಾಕೇಶ್ ಪೂಜಾರಿಯ ಪಾತ್ರಗಳು ಇವೆ. ದಿನೇಶ್ ಮಂಗಳೂರು ಅವರ ಪಾತ್ರ ಕೈಮ್ಯಾಕ್ಸ್ ನಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ಇರುತ್ತವೆ. ಈ ಚಿತ್ರದ ಕಾಲಾವಧಿ ಎರಡು ಗಂಟೆ ಐದು ನಿಮಿಷ ಇವೆ ಎನ್ನುವುದು ನಿರ್ದೇಶಕರ ವಿವರಣೆ.
ಉಡುಪಿಯ ಹಿರಿಯ ಪೋಷಕ ನಟ ಪ್ರಭಾಕರ ಬ್ರಹ್ಮಾವರ ಮಾತನಾಡಿ, ಚಿತ್ರೀಕರಣ ಸಂದರ್ಭದ ತಮ್ಮ ನೆನಪುಗಳನ್ನು ಹಂಚಿಕೊಂಡರು. “ರಾಕೇಶ್ ಪೂಜಾರಿ ಮತ್ತು ನನ್ನ ಪಾತ್ರ ಜತೆಜತೆಯಲ್ಲೇ ಇತ್ತು. ಕಾಂತಾರದಲ್ಲೂ ನಾವು ಒಟ್ಟಾಗಿ ಅಭಿನಯಿಸಿದ್ದೆವು” ಎನ್ನುತ್ತಾ ತುಸು ಬಾವುಕರಾದರು. ಈ ಚಿತ್ರದಲ್ಲಿ ರಾಜ್ಯದ ವಿವಿದ ಬಾಗದ ಕಲಾವಿದರು ಬಾಗಿಯಾಗಿರುವುದು ವಿಶೇಷ ಎಂದರು.
ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ದಿನಾಂಕ ನಿಗದಿ ಪಡಿಸಿಲ್ಲ. ಅದುವರೆಗೆ ವಾರಕ್ಕೆ ಒಂದರ ಹಾಗೆ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸುವ ಯೋಜನೆ ಹಾಕಲಾಗಿದೆ ಎನ್ನುವುದು ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕರಾದ ಶ್ರೀಶ ಮಾತು.
