‘ಓ ಮನಸೇ’ ಎಂದು ಮನಸಿನ ಮಾತುಗಳನ್ನು ಧಾರಾವಾಹಿಯ ಮೂಲಕ ಹೇಳಲು ಹೊರಟಿದೆ ಸ್ಟಾರ್ ಸುವರ್ಣ ವಾಹಿನಿ.
ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಢಾಳಾಗಿ ಕಾಣಿಸುವಂಥ ಕ್ರೌರ್ಯ, ಸೇಡು, ಜಿದ್ದು ಯಾವುದೂ ಇಲ್ಲಿಲ್ಲ. ಪ್ರೀತಿಯ ಏರುಪೇರನ್ನು ಸಾರುವ ಧಾರಾವಾಹಿ ಇದು ಎನ್ನುತ್ತಾರೆ ನಿರ್ದೇಶಕ ಬಿ.ಮಧುಸೂದನ್.
ಈ ಧಾರಾವಾಹಿಯ ಸುದ್ದಿಗೋಷ್ಠಿಗೂ ಮೊದಲು ವೇದಿಕೆ ನಾಲ್ಕು ಪಾತ್ರಗಳನ್ನು ಅನಾವರಣ ಮಾಡಲಾಯಿತು. ಅವುಗಳಲ್ಲಿ ಅಶ್ವಿನಿ ಗೌಡ ಮತ್ತು ಅಜಿತ್ ಹಂದೆಯವರ ಪ್ರೇಮ ಪತ್ರಗಳು ಮತ್ತು ಆನಂತರದಲ್ಲಿ ಕಥಾನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ದರ್ಶಕ್ ಗೌಡ ಮತ್ತು ನಾಯಕಿ ಮಧುಮಿತಾ ಅವರ ವಾಟ್ಸಾಪ್ ಚಾಟ್ ಗಳನ್ನು ಕುತೂಹಲ ಭರಿತವಾಗಿ ಪ್ರದರ್ಶಿಸಲಾಯಿತು, ವಿಶೇಷ ಏನೆಂದರೆ ಅವುಗಳು ಚಿತ್ರೀಕರಿಸಲ್ಪಟ್ಟ ತುಣುಕುಗಳಾಗಿರಲಿಲ್ಲ. ಈ ನಾಲ್ವರು ಕಲಾವಿದರು ಅವನ್ನು ವೇದಿಕೆಯ ಮೇಲೆಯೇ ನಟಿಸಿ ತೋರಿಸಿದ್ದು ಹೊಸತನದಿಂದ ಕೂಡಿತ್ತು.
ಧಾರಾವಾಹಿಯ ಪ್ರಮುಖ ಆಕರ್ಷಣೆ ನಟಿ ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಬಿಗ್ ಬಾಸ್ ಬಳಿಕ ತುಂಬ ದಿನಗಳ ಬಳಿಕ ಕನ್ನಡದ ಕಿರುತೆರೆಗೆ ಮರಳಿದ್ದಾರೆ. ಇದರ ಮಧ್ಯೆ ತೆಲುಗು ಭಾಷೆಯಲ್ಲೂ ನಟಿಸಿ ಮರಳಿ ಬಂದಿದ್ದಾರೆ.
“ನಾನು ಆಂಗ್ಲಮಾಧ್ಯಮದಲ್ಲಿ ಕಲಿತ ಕಾರಣ, ಬಿಗ್‌ಬಾಸ್ ನಲ್ಲಿ ಸರಿಯಾಗಿ ಕನ್ನಡ ಬರೆಯಲು ಸಾಧ್ಯವಾಗದೇ ಟ್ರೋಲ್ ಆಗಿದ್ದೆ. ಆದರೆ ಅದರಿಂದ ನನ್ನ ಕನ್ನಡದ ಹೋರಾಟಕ್ಕೆ ಕಷ್ಟವಾಗಿಲ್ಲ. ಯಾಕೆಂದರೆ ನಾನು ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲೆ. ಅದಕ್ಕೆ ನನ್ನ ಧಾರಾವಾಹಿ ಗುರುಗಳಾದ ವಿನು ಬಳಂಜ ಮತ್ತು ಟಿ.ಎನ್ ಸೀತಾರಾಮ್ ಸರ್ ಕಾರಣ. ಆ ಪಯಣ ಇಲ್ಲಿಯವರೆಗೆ ತಲುಪಿದೆ. ಇಲ್ಲಿ ಕೂಡ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಹಾಗಾಗಿಯೇ ಒಪ್ಪಿಕೊಂಡೆ” ಎಂದರು ಅಶ್ವಿನಿ. ಆದರೆ ಈ ಧಾರಾವಾಹಿಯಲ್ಲಿನ ತಮ್ಮ ಪಾತ್ರ ಹೋರಾಟಗಾರ್ತಿ ಅಲ್ಲ, ಉಪನ್ಯಾಸಕಿಯ ಪಾತ್ರ. ತಮ್ಮ ನೈಜ ವ್ಯಕ್ತಿತ್ವಕ್ಕಿಂತ ತೀರ ವಿಭಿನ್ನವಾಗಿರಲಿದೆ ಎಂದು ಅಶ್ವಿನಿ ಗೌಡ ಮಾಹಿತಿ ನೀಡಿದರು.
ಈ ಧಾರಾವಾಹಿಗೆ ‘ಪ್ರೇಮದ ಊರಲಿ’ ಖ್ಯಾತಿಯ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಸಂಗೀತ ಸಂಯೋಜಿಸಿರುವ ಶೀರ್ಷಿಕೆ ಗೀತೆ ಇದೆ. ಸುನಾದ್ ಸಹೋದರಿ ನಿನಾದ ನಾಯಕ್ ಹಾಡಿದ್ದಾರೆ.
ಧಾರಾವಾಹಿಯ ನಿರ್ಮಾಪಕ ಗಣಪತಿ ಭಟ್ ಮಾತನಾಡಿ, “ಆರು ತಿಂಗಳಿನಿಂದ ಈ ಧಾರಾವಾಹಿಗಾಗಿ ಕೆಲಸ ಮಾಡುತ್ತಿದ್ದೇವೆ. ಇದರ ಕಥೆ ಯುವಕರನ್ನು, ಯುವ ಸಮೂಹವನ್ನು ಹೆಚ್ಚು ಸೆಳೆಯಬಹುದು ಎಂದು ಅಂದುಕೊಂಡಿದ್ದೇನೆ” ಎಂದರು.
ನಾಯಕ ರಿಷಿ ಪಾತ್ರವನ್ನು ದರ್ಶಕ್ ಗೌಡ ನಿರ್ವಹಿಸಿದ್ದಾರೆ. ನಾಯಕಿ ರಾಗಾ ಮಧ್ಯಮ ವರ್ಗದ ಹೆಣ್ಣು ಮಗಳ ಪಾತ್ರವನ್ನು ಮಾಡಿದ್ದಾರೆ, ರೇಖಾ ಕೃಷ್ಣಪ್ಪ ಮತ್ತು ರಮೇಶ್ ಪಂಡಿತ್ ಹಿರಿಯ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಧಾರಾವಾಹಿ ಪ್ರತಿ ದಿನ ರಾತಿ 8.30ರಿಂದ ಸ್ಟಾರ್ ಸುವರ್ಣದಲ್ಲಿ ಪ್ರಸಾರಗೊಳ್ಳಲಿದೆ.

