‘ರಿಯಲ್ ಫೈಟರ್ಸ್’ ಸಾಹಸದೊಂದಿಗೆ ಮೊಳಗಿದ ಹಾಡು

ಚಾಮರಾಜ್ ಮಾಸ್ಟ‌ರ್ ನಿರ್ದೇಶನದ ‘ರಿಯಲ್ ಫೈಟರ್ಸ್ ಚಿತ್ರದ ಆಡಿಯೋ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಶನಿವಾರ ನಡೆದ ರಾಜ್ಯೋತ್ಸವ ವಿಶೇಷ ಸಮಾರಂಭದಲ್ಲಿ ಗಣ್ಯ ಅತಿಥಿಗಳ ನಡುವೆ ಲವಿ ಸ್ಟಾರ್ ಪ್ರೇಮ್ ಆಡಿಯೋ ಲಾಂಚ್ ಮಾಡಿದರು.

ಚಾಮರಾಜ್ ಮಾಸ್ಟರ್ ಒಂದು ಅದ್ಭುತ ಪ್ರಯೋಗ ಮಾಡಿದ್ದಾರೆ. ಈಗಾಗಲೇ ಸಾವಿರಾರು ಮಕ್ಕಳನ್ನು ತರಬೇತಿಗೊಳಿಸಿ, ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈ ಚಿತ್ರದಲ್ಲಿ ಹೆಸರಿಗೆ ತಕ್ಕಂತೆ ರಿಯಲ್ ಫೈಟರ್ಸ್ ಶಕ್ತಿಯನ್ನು ತೋರಿಸಿದ್ದಾರೆ. ಕೋತಿರಾಜ್ ಖ್ಯಾತಿಯ ಜೋತಿರಾಜ್ ನಮ್ಮಕರ್ನಾಟಕದ ಹೆಮ್ಮೆ. ಅವರು ವರುಣ್ ಸೇರಿದಂತೆ ಅಪ್ರತಿಮ ಪ್ರತಿಭಾವಂತರೆಲ್ಲ ಈ ಚಿತ್ರದಲ್ಲಿರುವುದು ಹೆಮ್ಮೆಯ ವಿಷಯ ಎಂದು ಲವ್ಲಿ ಸ್ಟಾರ್ ಪ್ರೇಮ್ ಖುಷಿ ವ್ಯಕ್ತಪಡಿಸಿದರು.

ಸ್ವತಃ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಾಮರಾಜ ಮಾಸ್ಟರ್ ಮಾತನಾಡಿ, ಚಿತ್ರದಲ್ಲಿ ಯಾವುದೇ ಹಗ್ಗ ಅಥವಾ ಹಾಸಿಗೆಗಳನ್ನು ಬಳಸದೆ ನಿಜವಾದ ಸಾಹಸವನ್ನು ಪ್ರದರ್ಶಿಸಲಾಗಿದೆ ಎಂದು ಚಾಮರಾಜ ಮಾಸ್ಟರ್ ಹೇಳಿದರು. ಈ ಚಿತ್ರದಲ್ಲಿ ಅನಿಲ್ ಪ್ರಧಾನ ಪಾತ್ರ ಮಾಡಿದ್ದಾರೆ. ಅರುಣ್ ರೋಹಿತ್ ಖಳ ಪಾತ್ರ ಮಾಡಿದ್ದಾರೆ. ನೇತ್ರಾ, ಶ್ರೀಹರ್ಷ ಮೊದಲಾದವರು ಕೂಡ ರಿಯಲ್ ಸ್ಟಂಟ್ ಮಾಡಿದ್ದಾರೆ ಎಂದು ಖುಷಿ ಹಂಚಿಕೊಂಡರು.

ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಸತೀಶ್ ಆರ್ಯನ್ ಮಾತನಾಡಿ, ಈ ಚಿತ್ರದಲ್ಲಿ 13ರಿಂದ 14 ಫೈಟ್ಸ್ ಇವೆ. ಇವುಗಳ ಜತೆಯಲ್ಲೇ 5 ಹಾಡುಗಳಿವೆ. ಇಲ್ಲಿ ಈ ಪ್ರದರ್ಶಿಸಲಾದ ಗುರುವಿನ ಗೀತೆಯನ್ನು ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ. ಟಿಪ್ಪು ಹಾಡಿದ್ದಾರೆ. ಬೆಂಗಳೂರು, ಮಂಗಳೂರು, ಚಿಕ್ಕ ಮಗಳೂರು, ಚಾಮರಾಜ ನಗರ ಸೇರಿದಂತೆ ರಾಜ್ಯದ ಹತ್ತಾರು ಬಾಗಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಡಿಸೆಂಬರ್ ಒಳಗೆ ಸಿನೆಮಾ ತೆರೆಗೆ ತರುವ ಯೋಜನೆ
ಹಾಕಲಾಗಿದೆ ಎಂದು ಚಾಮರಾಜ್ ಮಾಸ್ಟರ್ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೋತಿರಾಜ್. ತಾವು ಎರಡು ತಿಂಗಳ ಹಿಂದೆ ಅತ್ತೆ ಮಗಳನ್ನು ಮದುವೆಯಾಗಿದ್ದಾಗಿ ಹೇಳಿದರು. ಖ್ಯಾತ ನೃತ್ಯಪಟು ವರುಣ್ ಅಲಿಯಾಸ್ ಅದ್ಭುತ್ ಮಾತನಾಡಿ, ‘ನಾನು ಗುರುಸ್ಥಾನ ಕೊಟ್ಟಿರುವುದು ಚಾಮರಾಜ್ ಮಾಸ್ಟರ್ ಅವರಿಗೆ ಈ ಚಿತ್ರದಲ್ಲಿ ಖಳನಟನಾಗಿ ಕಾಣಿಸಿದ್ದೇನೆ’ ಎಂದರು.

ಸಮಾರಂಭದಲ್ಲಿ ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣಯ್ಯ, ಕಲಾವಿದರಾದ ರವಿಗೌಡ, ವಕೀಲರಾದ ಜಗದೀಶ್ ಎಲ್ ಮೊದಲಾದವರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭಕೋರಿದರು. ಕನ್ನಡ ಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Recommended For You

Leave a Reply