‘ಮ್ಯಾರೇಜ್ ಪಾರ್ಟಿ’ಯಲ್ಲಿ ‘ಗಲಾಟೆ’ ಗೀತೆ

ಅಧಿಪತ್ರ ಸಿನೆಮಾದ ನಿರ್ದೇಶಕ ಚಯನ್ ಶೆಟ್ಟಿ ನಿರ್ದೇಶನದ ಎರಡನೇ ಚಿತ್ರ ಮ್ಯಾರೇಜ್ ಪಾರ್ಟಿ. ರಿತ್ವಿಕ್ ಮುರಳೀದರ್ ಸಂಗೀತದಲ್ಲಿರುವ ಚಿತ್ರದ ಗಲಾಟೆ ಹಾಡಿನ ಬಿಡುಗಡೆ ಬೆಂಗಳೂರಿನಲ್ಲಿ ನೆರವೇರಿತು.

ಹಾಡಿನ ಪ್ರದರ್ಶನದ ಬಳಿಕ ಮಾತನಾಡಿದ ರಿತ್ವಿಕ್ ಮುರಳೀಧರ್ “ಹಾಡುಗಳ ಜತೆಗೆ ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಕೂಡ ತಾವೇ ನೀಡಿರುವುದಾಗಿ” ಹೇಳಿದರು. ಹಾಗಾಗಿ ಸಿನೆಮಾ ನೀಡುವ ಮನರಂಜನೆಯನ್ನು ತಾವು ಅನುಭವಿಸಿರುವುದಾಗಿ ಹೇಳಿದರು. ಈ ಚಿತ್ರದಲ್ಲಿ ಮೂರು ಹಾಡುಗಳಿವೆ. ಮೂರು ಕೂಡ ಚೆನ್ನಾಗಿ ಮೂಡಿ ಬಂದಿವೆ. ಗಲಾಟೆ ಹಾಡಿಗೆ ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯವಿದ್ದು ಮುರುಗ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಸು ಫ್ರಂ ಸೋ ಎನ್ನುವ ಚಿತ್ರದ ಯಶಸ್ಸು ನೋಡಿ ಅಂಥದೇ ಒಂದು ಸರಳ ಚಿತ್ರವನ್ನು ಮಾಡುವ ಉದ್ದೇಶದಿಂದ ನಿರ್ಮಾಣ ರಂಗಕ್ಕೆ ಬಂದಿರುವುದಾಗಿ ನಿರ್ಮಾಪಕ ಸಂತೋಷ್ ಹೇಳಿದರು. ವಾರಾಹಿ ಬ್ಯಾನ‌ರ್ ಮೂಲಕ ಚಿತ್ರ ನಿರ್ಮಿಸುತ್ತಿರುವ ಸಂತೋಷ್, ಈ ಚಿತ್ರದ ನಿರ್ದೇಶಕರ ಹಾರ್ಡ್ ವರ್ಕ್ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.

ಮ್ಯಾರೇಜ್ ಪಾರ್ಟಿ ಎನ್ನುವ ಹೆಸರಿದ್ದರೂ ಇಲ್ಲಿ ಮದುವೆ ಪಾರ್ಟಿಯಷ್ಟೇ ಕತೆ ಅಲ್ಲ. ಕತೆಯಲ್ಲಿ ಹಾರರ್ ಅಂಶಗಳು ಕೂಡ ಬೆಸೆಯುತ್ತದೆ ಎಂದು ನಿರ್ದೇಶಕ ಚಯನ್ ಶೆಟ್ಟಿ ಹೇಳಿದರು. ತುಳುರಂಗ ಭೂಮಿಯ ಖ್ಯಾತ ಕಲಾವಿದ ನವೀನ್ ಡಿ ಪಡೀಲ್ ಅವರು ಮಾತನಾಡಿ, ಚಿತ್ರದಲ್ಲಿ ತಾವು ಪಂಚಾಯತಿ ಅಧ್ಯಕ್ಷನ ಪಾತ್ರ ಮಾಡಿರುವುದಾಗಿ ಹೇಳಿದರು. ಕಾಂತಾರ ಖ್ಯಾತಿಯ ಪ್ರಕಾಶ್ ತೂಮಿನಾಡು, ತಾನು ಈ ಚಿತ್ರದಲ್ಲಿ ಮೈಮ್ ರಾಮದಾಸ್ ಅವರ ಮನೆಗೆ ಪದೇಪದೆ ಊಟಕ್ಕೆಂದು ಹೋಗುವವನು ಎಂದು ನಕ್ಕರು.

ಸು ಪ್ರಂ ಸೋ ಚಿತ್ರದಲ್ಲಿ ಕುಡುಕ ಭಾವನಾಗಿ ಕಾಣಿಸಿದ ನಟ ಪ್ರಕಾಶ್ ಬೊಳ್ಳಾರ್ ಇಲ್ಲಿಯೂ ಒಂದು ಪ್ರಧಾನ ಪಾತ್ರದಲ್ಲಿದ್ದಾರೆ. ಆದರೆ ಈ ಬಾರಿ ತಾವು ಕುಡುಕನಾಗಿ ಕಾಣಿಸಿಲ್ಲ ಎಂದರು. ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಸೋತವನ ಪಾತ್ರ ತಾವು ಮಾಡಿರುವುದಾಗಿ ನಟ ಜ್ಯೋತಿಷ್‌ ಶೆಟ್ಟಿ ಹೇಳಿದರು. ಯುವ ನಟ ಪ್ರವೀಣ್ ತಾವು ಪೈಂಟ‌ರ್ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದರು. ಸುಂದರ ಭಟ್ಟನಾಗಿ ನಟಿಸಿದ ಭೀಮ ರಾವ್‌ ಸೇರಿದಂತೆ ಕಾರ್ತಿಕ್ ರಾವ್, ಬಾಲನಟಿ ಆಜ್ಞಾ ತಾಯಿ ಮೊದಲಾದವರು ತಮ್ಮ ಅನುಭವ ಹಂಚಿಕೊಂಡರು.

ಚಿತ್ರದಲ್ಲಿ ಕಮಲಿ ಎನ್ನುವ ಪಾತ್ರ ಮಾಡಿರುವ ಕಾವ್ಯಾ ತಾವು ಒಂದು ಗ್ಯಾಪ್ ಬಳಿಕ ಚಿತ್ರರಂಗಕ್ಕೆ ಮರಳಿರುವುದಾಗಿ ಮತ್ತು ಉತ್ತಮ ಪಾತ್ರವೇ ಲಭಿಸಿರುವುದಾಗಿ ಖುಷಿ ಹಂಚಿಕೊಂಡರು, ನಟಿ ಅನನ್ಯಾ ತಾವು ಸ್ವಾತಿ ಎನ್ನುವ ವಿದ್ಯಾರ್ಥಿನಿಯ ಪಾತ್ರ ಮಾಡಿದ್ದಾಗಿ ಹೇಳಿದರು. ಮತ್ತೋರ್ವ ನಟಿ ರಕ್ಷಿತಾ ಮಾತನಾಡಿ ಇದು ನನ್ನ ಮೊದಲ ಚಿತ್ರ ಎಂದರು, ರಾಧಾ ಎನ್ನುವ ಹಳ್ಳಿಹುಡುಗಿಯಾಗಿ ಕಾಣಿಸಿದ್ದೇನೆ ಎಂದರು. ಮತ್ತೋರ್ವ ಕಲಾವಿದೆ ನಮಿತಾ ಕಿರಣ್ ತಾವು ಮೈಮ್ ರಾಮದಾಸ್ ಅವರ ಪತ್ನಿಯಾಗಿ ನಟಿಸಿರುವುದಾಗಿ ಹೇಳಿದರು. ಮೈಮ್ ರಾಮದಾಸ್‌ ಅವರು ಕೊಲ್ಲೂರಿನ ಕಾಡಿನ ಮಧ್ಯೆ ಚಿತ್ರೀಕರಣ ನಡೆದಿದ್ದು ಅವಿಸ್ಮರಣೀಯ ಅನುಭವ ಎಂದರು.

ಚಿತ್ರವನ್ನು ಕುಂದಾಪುರದ ವಿವಿಧೆಡೆಗಳಲ್ಲಿ 65 ದಿನಗಳ ಕಾಲ ಶೂಟ್ ಮಾಡಲಾಗಿದೆ. ಸುಮಾರು 2000 ಆಟೋಗಳಲ್ಲಿ ಚಿತ್ರದ ಬಗ್ಗೆ ಪ್ರಚಾರ ನಡೆಸಲಾಗಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಕೊನೆಯಲ್ಲಿ ಚಿತ್ರ ತಂಡ ಗಲಾಟೆ ಹಾಡಿಗೆ ಹೆಜ್ಜೆ ಹಾಕಿದ್ದು ಆಕರ್ಷಕವಾಗಿತ್ತು.

Recommended For You

Leave a Reply