ಕೊಲೆಯೊಂದರ ಸುತ್ತ ನಡೆಯುವ ಕೌಟುಂಬಿಕ ಕಥೆಯನ್ನು ಆಧಾರವಾಗಿಟ್ಟುಕೊಂಡ ಸಸ್ಪೆನ್ಸ್ ಡ್ರಿಲ್ಲರ್ ‘ಕಾಲಾಗ್ನಿ’ಯ ಮುಹೂರ್ತ ಸಮಾರಂಭ ಅಂದ್ರಹಳ್ಳಿ ವಿದ್ಯಾಮಾನ್ಯ ನಗರದ ಪಲಿಮಾರು ಮಠದಲ್ಲಿ ನೆರವೇರಿತು. ಕಾಲಾಗ್ನಿ ಎನ್ನುವ ಶೀರ್ಷಿಕೆಯ ಜತೆಯಲ್ಲೇ “ನಿಮ್ಮ ಮೈ ನೆರಳು ಕೂಡ ನಿಮ್ಮನ್ನು ಬೆನ್ನಟ್ಟಿದಾಗ.. ಎನ್ನುವ ಉಪಶೀರ್ಷಿಕೆ ಕೂಡ ಇದೆ. ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿರುವ ಸಿ.ಮಲ್ಲಿಕಾರ್ಜುನ್
ಮಾಧ್ಯಮದ ಜತೆ ಮಾತನಾಡುತ್ತಾ, “ಇದೊಂದು ಸಸ್ಪೆನ್ಸ್ ಕಥೆ. 1998ರಲ್ಲಿ ನಡೆದಂಥ ನೈಜ ಘಟನೆ. ಅಣ್ಣನೋರ್ವ ತನ್ನ ತಮ್ಮನನ್ನು ಪ್ರೀತಿಯಿಂದ ಬೆಳೆಸುವ ಪ್ರಯತ್ನದಲ್ಲಿ ಸ್ವತಃ ಮದುವೆಯೂ ಆಗುವುದಿಲ್ಲ. ತಮ್ಮನನ್ನು ಡಾಕ್ಟರೋ, ಇಂಜಿನಿಯರೋ ಮಾಡಬೇಕೆಂದು ಕನಸು ಕಾಣುತ್ತಿರುತ್ತಾನೆ. ಈ ತಮ್ಮ ಮಾತ್ರ ಹುಡುಗಿಯೊಬ್ಬಳ ಹಿಂದೆ ಹೋಗುತ್ತಾನೆ. ಆದರೆ ಅವಳನ್ನು ರೌಡಿಯೊಬ್ಬ ಪ್ರೀತಿಸುತ್ತಿರುತ್ತಾನೆ. ಇದರ ನಡುವೆ ಅಣ್ಣನ ಮುದ್ದಿನ ತಮ್ಮನ ಕೊಲೆಯಾಗುತ್ತದೆ. ಆಘಾತಗೊಂಡ ಅಣ್ಣ ತನ್ನ ತಮ್ಮನ ಕೊಲೆಗೆ ಕಾರಣರಾದವರನ್ನು ಪತ್ತೆ ಮಾಡಲು ಮುಂದಾಗುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕಥೆ ಎಂದರು ನಿರ್ದೇಶಕ ಮಲ್ಲಿಕಾರ್ಜುನ್.
“ಕಥೆ ಹೇಳಿದ ಕೂಡಲೇ ಆತ್ಮೀಯರಾದ ಬಾಲು ಸರ್ ಮೊದಲ ಪ್ರೋತ್ಸಾಹ ನೀಡಿದರು. ಅದೇ ರೀತಿ ಚಿತ್ರಕ್ಕೆ ಸಹ ನಿರ್ಮಾಪಕರಾಗಲು ಸಿದ್ಧರಾದರು. ಆರ್. ರಾಜು ಅವರೇ ಈ ಚಿತ್ರದ ಪ್ರಧಾನ ನಿರ್ಮಾಪಕ” ಎಂದು ಮಲ್ಲಿಕಾರ್ಜುನ್ ತಿಳಿಸಿದರು. ರಾಜು ತಮಗೆ ಮೂವತ್ತು ವರ್ಷಗಳ ಸ್ನೇಹಿತ ಎಂದು ಸಹ ನಿರ್ಮಾಪಕ ಬಾಲ್ಯಾನಾಯಕ್ ತಿಳಿಸಿದರು.
ಕಾಲಾಗ್ನಿ ಚಿತ್ರದ ನಾಯಕಿಯ ಪಾತ್ರದಲ್ಲಿ ವೇದಶ್ರೀ ಪರಿಚಯವಾಗುತ್ತಿದ್ದಾರೆ. ಮೈಸೂರಿನ ಹುಡುಗಿಯಾದ ತಾನು ಎರಡನೇ ನಾಯಕಿಯಾಗಿ ಈ ಹಿಂದೆ ಒಂದೆರಡು ಚಿತ್ರಗಳಲ್ಲಿ ಮಾಡಿದ್ದೇನೆ. ಆದರೆ ನಾಯಕಿಯಾಗಿ ನನಗೆ ಇದೇ ಮೊದಲ ಚಿತ್ರ ಎಂದರು. ಇದೊಂದು ಸಸ್ಪೆನ್ಸ್ ಡ್ರಿಲ್ಲರ್ ಚಿತ್ರವಾದರೂ ಇಲ್ಲಿ ನನ್ನ ಪಾತ್ರಕ್ಕೆ ಫ್ಯಾಮಿಲಿ ಕೂಡ ಬೆಂಬಲವಾಗಿರುತ್ತದೆ. ಹಾಗಾಗಿ ನನ್ನ ಪಾಲಿಗೆ ಕೌಟುಂಬಿಕ ಚಿತ್ರ ಎಂದು ವೇದಶ್ರೀ ವಿವರಿಸಿದರು.
ಚಿರಂಜೀವಿ ಅಭಿರಾಮ್ ಎನ್ನುವ ಯುವ ಸಂಗೀತ ನಿರ್ದೇಶಕ ಈ ಚಿತ್ರದ ಹಾಡುಗಳಿಗೆ ರಾಗ ಸಂಯೋಜಿಸಲಿದ್ದಾರೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಈ ಹಿಂದೆ ‘ಕೀರ್ತಿ ಐ ಲವ್ಯು ಯೂ’ ಸೇರಿದಂತೆ ಎರಡು ಚಿತ್ರಗಳಿಗೆ ಸಂಗೀತ ನೀಡಿದ್ದೇನೆ ಎಂದು ಚಿರಂಜೀವಿ ಅಭಿರಾಮ್ ಹೇಳಿದರು.
ಚಿತ್ರದ ನಾಯಕನ ಪಾತ್ರಕ್ಕೆ ಕಲಾವಿದರ ಆಯ್ಕೆ ಮಾಡಿಲ್ಲ. ಉಳಿದಂತೆ ಕಿರುತೆರೆ ನಟಿ, ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆದ್ಯಾ ಮಾಚಯ್ಯ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಯುವನಟ ದಯಾನಂದ್ ವರದ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಷಕ ಪಾತ್ರಗಳಲ್ಲಿ ಉಗ್ರಂ ರವಿ, ಅಂಜನಪ್ಪ, ಮಂಜುನಾಥ್ ಭಟ್ ಮೊದಲಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಬೆಂಗಳೂರು, ಸಕಲೇಶಪುರ, ಕಳಸ ಮೊದಲಾದ ಭಾಗಗಳಲ್ಲಿ ಶೂಟಿಂಗ್ ನಡೆಯಲಿದೆ. ಇವತ್ತಿನಿಂದಲೇ ಚಿತ್ರೀಕರಣ ಶುರುವಾಗಲಿದೆ ಎಂದು ನಿರ್ದೇಶಕರು ತಿಳಿಸಿದರು.

