ಜನಪ್ರಿಯ ನಿರ್ದೇಶಕ ಸಿಂಪಲ್ ಸುನಿ ಜನಪ್ರಿಯ ಪಾತ್ರವೊಂದನ್ನು ಪರದೆಯ ಮೇಲೆ ತರುತ್ತಿದ್ದಾರೆ. ಲಂಬೋದರ ಎನ್ನುವುದು ಬಾಲಮಂಗಳದಲ್ಲಿ ಚಿತ್ರಕಥೆ ಓದುತ್ತಿದ್ದವರ ಮೆಚ್ಚಿನ ಪಾತ್ರ. ಆದರೆ ಲಂಬೋದರ ೨.೦ ಚಿತ್ರ ವೀಕ್ಷಿಸಿದ ಬಳಿಕ ಇದು ಮನೆ ಮಂದಿ ಎಲ್ಲರ ಮೆಚ್ಚಿನ ಪಾತ್ರವಾಗುವ ನಂಬಿಕೆ ನಿರ್ದೇಶಕರಲ್ಲಿದೆ. ಇದಕ್ಕೆ ಮುಖ್ಯ ಕಾರಣ ಪ್ರಮುಖ ಚಿತ್ರಮಂದಿರಗಳಲ್ಲಿ ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್ ಮೂಲಕ ಚಿತ್ರದ ಕುರಿತಾದ ಜನರ ನಿರೀಕ್ಷೆಯನ್ನು ಎದ್ದು ತೋರಿಸುವಂತೆ ಮಾಡಿದೆ.
ಮಹಾವೀರ್ ಜೈನ್ ಫಿಲ್ಮ್ಸ್ ಪ್ರಸ್ತುತ ಪಡಿಸುತ್ತಿರುವ ಹಾಗೂ ಮಾಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಲಂಬೋದರನಿಗೆ ಹೇಗೆ ಶಕ್ತಿಮದ್ದು ಹೊಸ ಪವರ್ ಕೊಡುತ್ತಿತ್ತೋ ಇಲ್ಲಿ ಹಾಗೆ ತಂತ್ರಜ್ಞಾನದ ಬಳಕೆ ಇದೆ. ಇಂದು ನಿತ್ಯ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಕೃತಕ ಬುದ್ಧಿಮತ್ತೆ, ಅಲ್ಗಾರಿದಮ್ ಮತ್ತು ಡಿಜಿಟಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದತೆ ಚಿತ್ರದ ಕಥೆಯೂ ಇದೆ. ಇದರ ಮಧ್ಯೆ ಮನುಷ್ಯನ ಮೇಲೆ ಈ ತಂತ್ರಜ್ಞಾನಗಳು ಬೀರುವ ಪರಿಣಾಮದಂಥ ಗಂಭೀರ ವಿಚಾರವನ್ನು ಸುನಿ ತಮ್ಮ ಎಂದಿನ ಸರಳ ಶೈಲಿಯಲ್ಲೇ ನಿರೂಪಿಸಲಿದ್ದಾರೆ. ಚಿತ್ರದಲ್ಲಿ ಅನಿಲ್ ಶೆಟ್ಟಿ, ಬಾಲಿವುಡ್ ಖ್ಯಾತ ನಟ ಕುನಾಲ್ ಕಪೂರ್ ಹಾಗೂ ಸಾಚಿ ಬಿಂದ್ರಾ ಮೊದಲಾದವರು ನಟಿಸಿರುವುದು ವಿಶೇಷ.
ಈಗಾಗಲೇ ಸದ್ದು ಮಾಡಿರುವ ಪ್ರಮುಖ ಆಕರ್ಷಣೆ ಹ್ಯೂಮನಾಯ್ಡ್ ರೋಬೋಟ್ ಜಿಯಾ ಬಗ್ಗೆ ಹೇಳಲೇಬೇಕು. ವೈಜ್ಞಾನಿಕ ಪರಿಭಾಷೆಯೊಂದಿಗೆ ಹಾಸ್ಯ, ಪ್ರೇಮ, ಥ್ರಿಲ್ಲರ್ ಎಲ್ಲವೂ ಈ ಚಿತ್ರದಲ್ಲಿ ಇರಲಿದೆ. ಎಲ್ಲ ವಯಸ್ಸಿನ ಪ್ರೇಕ್ಷಕರನ್ನು ಕೂಡ ಗಮನದಲ್ಲಿಟ್ಟುಕೊಂಡು ತಯಾರಾಗಿರುವ ಈ ಚಿತ್ರ ನಿರ್ದೇಶಕ ಸುನಿ ಅಭಿಮಾನಿಗಳನ್ನು ಖಂಡಿತವಾಗಿ ನಿರಾಶೆಗೊಳಿಸುವುದಿಲ್ಲ.
