ಪಪ್ಪಿ ಎನ್ನುವ ಚಿತ್ರದ ಮೂಲಕ ಸಿನಿ ಪ್ರಿಯರನ್ನು ಉತ್ತರ ಕರ್ನಾಟಕದ ಕಡೆಗೆ ಸೆಳೆದಂಥ ನಿರ್ದೇಶಕ ಆಯುಷ್ ಮಲ್ಲಿ ಮರಳಿ ಬಂದಿದ್ದಾರೆ. ಈ ಬಾರಿ ಕೂಡ ಮಕ್ಕಳನ್ನೇ ಪ್ರಧಾನ ಪಾತ್ರವಾಗಿಸಿ ಚಿತ್ರ ಮಾಡಿರುವ ಇವರು ಸಿನೆಮಾಗೆ ನಾವು ತುಂಬಾ ಒಳ್ಳೆಯವರು ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ ಹಾಡುಗಳ ಬಿಡುಗಡೆ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ನಿರ್ದೇಶಕ ಆಯುಷ್ ಮಲ್ಲಿ ಮಾತನಾಡುತ್ತಾ, ‘ಪಪ್ಪಿ ಸಿನೆಮಾ ಮುಗಿದೊಡನೆ ಮತ್ತೊಂದು ಚಿತ್ರ ಶುರು ಮಾಡಿದ್ದೆ. ಯಾಕೆಂದರೆ ಅದಕ್ಕೆ ಚಿತ್ರರಂಗದಿಂದ ಸಿಕ್ಕ ಪ್ರೋತ್ಸಾಹ ಆ ಮಟ್ಟದಲ್ಲಿತ್ತು. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಧ್ರುವ ಸರ್ಜಾ, ರಮ್ಯಾ ಮೊದಲಾದವರು ಚಿತ್ರ ನೋಡಿ ಖುದ್ದಾಗಿ ಪ್ರೋತ್ಸಾಹ ಮಾಡಿದ್ದರು. ಅದರಿಂದಲೇ ಹೊಸ ಪ್ರಾಜೆಕ್ಟ್ ನೆಡೆಗೆ ಮತ್ತೊಮ್ಮೆ ಧೈರ್ಯದಿಂದ ಮುನ್ನುಗ್ಗಲು ಸಾಧ್ಯವಾಯಿತು ಎಂದರು.
ಈ ಬಾರಿ ಕೂಡ ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಸಾರಬೇಕು ಎನ್ನುವ ಉದ್ದೇಶ ನನ್ನದಾಗಿತ್ತು. ಆರಂಭದಲ್ಲಿ ನಾವು ಚಿತ್ರಕ್ಕೆ ಹೆಸರೇ ಇಟ್ಟಿರಲಿಲ್ಲ. ಆದರೆ ಹೆಸರು ಕೇಳಿದವರಿಗೆಲ್ಲ, ‘ನಾವು ತುಂಬ ಒಳ್ಳೆಯವರು’ ಅಂತಾನೇ ಹೇಳುತ್ತಿದ್ದೆ. ಆಗ ಅವರೆಲ್ಲ, ಮತ್ತೆ ನಾವೇನು ಕೆಟ್ಟವರಾ ಅಂತ ಕೇಳ್ತಿದ್ರು. ನಮ್ಮ ಸಿನೆಮಾ ಹೆಸರು ಕೇಳಿದಾಗಲೇ ಪ್ರತಿಯೊಬ್ಬರಲ್ಲೂ ಪ್ರಶ್ನೆ ಮೂಡುವಂತಿದೆ ಎನ್ನುವುದಾದರೆ ಆ ಹೆಸರೇ ಸೂಕ್ತ ಅಂತ ನನಗೂ ಅನಿಸಿತು. ಹಾಗಾಗಿ ಇದೇ ಹೆಸರನ್ನೇ ಫೈನಲ್ ಮಾಡಿದೆ” ಎಂದರು. ಮಾತ್ರವಲ್ಲ, ನಾನು ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ. ಅವರು ಆ ಕಾಲದಲ್ಲೇ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಎನ್ನುವ ಹೆಸರನ್ನು ಸಿನೆಮಾಗೆ ಇಟ್ಟಿದ್ದರು. ಅದನ್ನು ನೋಡಿಯೇ ಇಂಥ ಶೀರ್ಷಿಕೆಯೇ ನನಗೂ ಬೇಕು ಅನಿಸಿದ್ದು ಕೂಡ ನಿಜ ಎಂದು ಆಯುಷ್ ಮಲ್ಲಿ ಹೇಳಿದರು.
ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ತೋರಿಸಿದ್ದೇವೆ. ಅಲ್ಲಿನ ರಂಗಭೂಮಿ ಕಲಾವಿದರನ್ನು ಬಳಸಿದ್ದೇವೆ. ಆರಂಭದಿಂದ ಕೊನೆಯ ತನಕ ಹಾಸ್ಯವೇ ತುಂಬಿದೆ. ವಠಾರದ ಅಜ್ಜಿ ಮನೆಯಲ್ಲಿ ಬಾಡಿಗೆಗೆ ಇರುವವರ ಕಥೆ. ಬಾಡಿಗೆದಾರರು ಮತ್ತು ಅಜ್ಜಿ ನಡುವಿನ ಹಾಸ್ಯದ ಕಥೆ, ಕೊನೆಯಲ್ಲಿ ಭಾವನಾತ್ಮಕ ರೂಪ ಪಡೆಯುತ್ತದೆ. ಅದೇನು ಎನ್ನುವುದನ್ನು ಪರದೆ ಮೇಲೆ ನೋಡಿ ಎನ್ನುವುದು ನಿರ್ದೇಶಕರ ಮನವಿ. ಅವರು ಚಿತ್ರದ ನಾಯಕರು ಕೂಡ ಹೌದು, ಮನೆದಾಳು ವಾಡೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಬಿಜಾಪುರ ಭಾಗವನ್ನು ಪರದೆ ಮೇಲೆ ತೋರಿಸಿರುವುದಾಗಿ ಹೇಳಿದ್ದಾರೆ.
ಪಪ್ಪಿ ಖ್ಯಾತಿಯ ಬಾಲನಟ ಜಗದೀಶ್ ಈ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವೊಂದನ್ನು ಮಾಡಿದ್ದು ಅದರ ಖುಷಿಯನ್ನು ಹಂಚಿಕೊಂಡರು, ಮತ್ತೋರ್ವ ಬಾಲನಟ ಆದಿತ್ಯ ತಾನು ನಾಯಕಿಯ ತಮ್ಮನ ಪಾತ್ರದಲ್ಲಿ ನಟಿಸಿದ್ದೇನೆ ಎಂದರು.
ನಾಯಕಿಯ ತಮ್ಮನ ಪಾತ್ರದಲ್ಲಿ ನಟಿಸಿದ್ದೇನೆ ಎಂದರು. ಬಾಲನಟಿ ಸಾಹಿತಿ ತನಗೆ ಇದು ಮೊದಲ ಚಿತ್ರ ಎನ್ನುವ ಮಾಹಿತಿ ನೀಡಿದರು. ಆದರೆ ಏಳನೇ ತರಗತಿ ವಿದ್ಯಾರ್ಥಿನಿಯಾಗಿರುವ ಧಾರಾವಾಡದ ಈ ಬಾಲಕಿಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಹೆಸರಿದೆ.
ಚಿತ್ರದ ನಾಯಕಿ ಸಹನಾ ಪ್ರಕಾಶ್ ಮಾತನಾಡಿ, ‘ಇದು ನನ್ನ ಎರಡನೇ ಚಿತ್ರ. ಇದರಲ್ಲಿ ನಾನು ಪೂರ್ಣಿ ಎನ್ನುವ ಬಬ್ಲಿ ಹುಡುಗಿಯ ಪಾತ್ರ ಮಾಡಿದ್ದೇನೆ. ನಮ್ಮ ಮನೆಯಲ್ಲಿ ಸಿನೆಮಾ ಹಿನ್ನೆಲೆಯವರು ಯಾರೂ ಇಲ್ಲ. ನಟಿಯಾಗಿ ಹೊಸ ಅನುಭವ ಎಂದರು. ಮತ್ತೋರ್ವ ನಟಿ ಸಂಜನಾ ಮೂಲಿ ನಾನು ಮೂಲತಃ ಗದಗಿನವಳು. ನನ್ನ ಹೆಸರನ್ನೇ ಪಾತ್ರಕ್ಕೂ ಇಟ್ಟಿದ್ದಾರೆ. ಇದರಲ್ಲಿ ಶಿಕ್ಷಕಿಯಾಗಿ ಕಾಣಿಸಿದ್ದೇನೆ. ನನ್ನ ಪಾತ್ರ ಹೆಚ್ಚು ಮೌನಿ. ನಾನು ವಾಸ್ತವದಲ್ಲಿ ಇರುವುದು ಕೂಡ ಹೀಗೆಯೇ. ಹಾಗಾಗಿ ಈ ಪಾತ್ರ ಅಪ್ತವಾಗಿದೆ ಎಂದರು. ಬಾಲ ಕಲಾವಿದರಿಂದಲೇ ಚಿತ್ರದ ಹಾಡನ್ನು ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು. ರೋಹಿತ್ ಸೊವೆರ್ ಸಂಗೀತದಲ್ಲಿರುವ ಹಾಡುಗಳು ಅಲಿಸಲು ಆಪ್ತವಾಗಿವೆ. ‘ಇದುವರೆಗೆ 150ರಷ್ಟು ಕಿರುಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದೇನೆ. ಆದರೆ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವಾಗ ಪ್ರತಿ ಬಾರಿ ನೋಡಿದಾಗಲೂ ನಗು ಉಕ್ಕುವಂತೆ ಮಾಡಿದೆ. ಹತ್ತು ಸಿನೆಮಾಗಳಿಗೆ ಕೆಲಸ ಮಾಡಿದ್ದೇನೆ. ಕೊನೆಯದಾಗಿ ಧನಂಜಯ್ ಅವರ ನಿರ್ಮಾಣದ ಜೆ.ಸಿ ಚಿತ್ರಕ್ಕೂ ನಾನೇ ಹಿನ್ನೆಲೆ ಸಂಗೀತ ನೀಡಿದ್ದೆ” ಎಂದರು. ಈ ಚಿತ್ರದಲ್ಲಿ 5 ಹಾಡುಗಳು ಹಾಗೂ 2 ಬಿಟ್ ಗಳಿವೆ.
ನಾಗೇಂದ್ರ ಪ್ರಸಾದ್ ಅವರು ರಚನೆಯಲ್ಲಿ ಅನುರಾಧ ಭಟ್ ಹಾಡಿರುವ ಗೀತೆಯ ಮೇಕಿಂಗ್ ವೀಡಿಯೋವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಉಳಿದಂತೆ ಇತರ ಹಾಡುಗಳನ್ನು ಆಕಾಶ್ ಮನಗೂಳಿ ಮತ್ತು ಹರೀಶ್ ಶೃಂಗ ಅವರು ರಚಿಸಿದ್ದಾರೆ. ಚಿತ್ರಕ್ಕೆ ಬಿ. ಸುರೇಶ್ ಬಾಬು ಅವರು ಛಾಯಾಗ್ರಾಹಕರಾಗಿರುವುದು ಮಾತ್ರವಲ್ಲ, ಸಣ್ಣದೊಂದು ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ.
ಸಂಕಲನಕಾರ ಎಮ್.ಎನ್.ವಿಶ್ವ ತಾವು ಈ ಚಿತ್ರವನ್ನು ಗದಗದಲ್ಲೇ ಸಂಕಲನ ಮಾಡಿದ್ದಾಗಿ ತಿಳಿಸಿದರು. 2ಗಂಟೆ 10 ನಿಮಿಷ ಕಾಲಾವಧಿ ಇರುವ ‘ನಾವು ತುಂಬ ಒಳ್ಳೆಯವರು’ ಮುಂದಿನ ತಿಂಗಳು ತೆರೆಗೆ ಬರಲು ಸಿದ್ಧವಾಗಿದೆ. ಟ್ರೇಲರ್ ಈಗಾಗಲೇ ಜನಪ್ರಿಯಗೊಂಡಿದೆ. ಬಿ ಬಿ ಸಂಕನೂರು ಬ್ಯಾನರ್ ನಲ್ಲಿ ಅಂದಪ್ಪ ಸಂಕನೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
