ಹಲವು ಕನಸುಗಳ ಸೊಗಸುಗಾರ ಅನಿಲ್ ಶೆಟ್ಟಿ

ಕನಸು ಎಲ್ಲರೂ ಕಾಣುತ್ತಾರೆ. ಅದನ್ನು ನನಸು ಮಾಡಲು ಎಲ್ಲರಿಂದ ಸಾಧ್ಯವಾಗದು. ಆದರೆ ಅನಿಲ್ ಶೆಟ್ಟಿ ಹಾಗಲ್ಲ. ಹಲವು ಕನಸುಗಳನ್ನು ಕಂಡು ಅವುಗಳನ್ನು ನಿಜಗೊಳಿಸುವ ಸಾಧನೆ ಮಾಡಿದ್ದಾರೆ. ಅನಿಲ್ ಶೆಟ್ಟಿ ಹುಟ್ಟಿದ್ದು ರೈತನ ಮಗನಾಗಿ. ಕಲಿತಿದ್ದು ಸರ್ಕಾರಿ ಶಾಲೆಯಲ್ಲಿ. ಕಾಲೇಜು ಶಿಕ್ಷಣ ಅರ್ಧಕ್ಕೆ ಮೊಟಕು. ಆದರೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಾಧಕ. ರಾಜಕೀಯದಲ್ಲೂ ಆಕಾಂಕ್ಷಿ. ಅದಕ್ಕೆ ತಕ್ಕಂತೆ ಸಮಾಜಸೇವಕ. ಆದರೆ ಸದ್ಯಕ್ಕೆ ಹೆಸರಾಗಿರುವುದು ಮಾತ್ರ ಕಥೆಗಾರ, ನಟ ಮತ್ತು ಚಲನಚಿತ್ರ ನಿರ್ಮಾಪಕನಾಗಿ.

ಹಾಗೆ ನೋಡಿದರೆ ಲಂಬೋದರ 2.0 ಚಿತ್ರಕ್ಕಿಂತ ನಾಯಕ ನಟ ಅನಿಲ್ ಶೆಟ್ಟಿಯ ನಿಜ ಕಥೆಯೇ ಅಸಾಮಾನ್ಯವಾಗಿದೆ. ಇವರ ಬದುಕಿನ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಜೀವನದ ವಿವಿಧ ಕ್ಷೇತ್ರಗಳಲ್ಲಿ ಗುರುತನ್ನು ಸೃಷ್ಟಿಸಿಕೊಳ್ಳಲು ಹೊರಡುತ್ತಾರೆ! ಹುಟ್ಟಿದ್ದು ಕರಾವಳಿ ಭಾಗದ ಪುಟ್ಟ ಹಳ್ಳಿಯಲ್ಲಿ. ಆದರೆ ಬಡ ರೈತನ ಕುಟುಂಬದಲ್ಲಿ ಜನಿಸಿ, ಇಂದಿನ ವೈಭವದ, ಕಾರ್ಪೊರೇಟ್ ಸಂಸ್ಥೆಗಳ ಐಷಾರಾಮಿ ಕಚೇರಿಗಳಿಗೆ, ರಾಜಕೀಯದ ಅಧಿಕಾರ ಕೇಂದ್ರಗಳ ತನಕ ವ್ಯಾಪಿಸಿರುವುದು ವಿಶೇಷ. ಆದರೆ ಇದ್ಯಾವುದು ಕೂಡ ಅಷ್ಟು ಸುಲಭದ ದಾರಿ ಆಗಿರಲಿಲ್ಲ ಎನ್ನುವುದು ಅಷ್ಟೇ ಸತ್ಯ.

ಅನಿಲ್ ಕನಸುಗಾರನೇನೋ ನಿಜ. ಆದರೆ ಅದಕ್ಕೆ ಬೆಂಬಲವಾಗುವ ಶಕ್ತಿ ಕುಟುಂಬಕ್ಕೆ ಇರಲಿಲ್ಲ. ಬೆನ್ನಿಗೆ ನಿಲ್ಲುವ ಪ್ರಭಾವಿ ವ್ಯಕ್ತಿಗಳಿರಲಿಲ್ಲ. ಆರ್ಥಿಕ ಭದ್ರತೆಯಂತೂ ಇರಲೇ ಇಲ್ಲ. ಆದರೆ ಅನಿಲ್ ಹಠವಾದಿ. ಓದಿನಲ್ಲಿ ಸದಾ ಮುಂದೆ. ಶೈಕ್ಷಣಿಕ ಸಾಧನೆಯ ಮೂಲಕ ಉತ್ತಮ ಉದ್ಯೋಗ ಪಡೆದು ನೆಮ್ಮದಿಯ ಜೀವನ ನಡೆಸುವ ಅವಕಾಶ ಅವರ ಮುಂದಿತ್ತು. ಆದರೆ ಬಾಲ್ಯದಿಂದಲೇ ಅವರ ಮನಸ್ಸಿನಲ್ಲಿ ಒಂದು ವಿಭಿನ್ನ ಆಲೋಚನೆ ಬೇರೂರಿತ್ತು.

ಅನಿಲ್ ಶೆಟ್ಟಿಯ ಜೀವನದ ಅತ್ಯಂತ ನಾಟಕೀಯ ಅಧ್ಯಾಯವೊಂದು ಆರಂಭವಾಗಿದ್ದು, ಅವರು ಜೇಬಿನಲ್ಲಿ ಕೇವಲ 75 ರೂಪಾಯಿ ಹಿಡಿದು ಬೆಂಗಳೂರಿಗೆ ಬಂದಾಗ. ಬಡ ರೈತ ಕುಟುಂಬದ ಹುಡುಗನಿಗೆ ಬೆಂಗಳೂರು ಸಂಪೂರ್ಣ ಹೊಸ ಪ್ರಪಂಚವಾಗಿತ್ತು. ಬೃಹತ್ ಕಟ್ಟಡಗಳು, ಕಾರ್ಪೊರೇಟ್ ಕಚೇರಿಗಳು, ವೇಗವಾಗಿ ಓಡುವ ನಗರ ಜೀವನ — ಇವೆಲ್ಲವೂ ಅವರು ಬೆಳೆದ ಪರಿಸರಕ್ಕಿಂತ ಸಂಪೂರ್ಣ ಭಿನ್ನವಾಗಿದ್ದವು. ಆದರೆ ಅವರಲ್ಲಿ ಎಲ್ಲಕ್ಕಿಂತ ದೊಡ್ಡದಾದ ಒಂದು ನಂಬಿಕೆಯಿತ್ತು. ಅವರ ಆಧ್ಯಾತ್ಮಿಕ ಹುಡುಕಾಟ ಅವರನ್ನು ಇಸ್ಕಾನ್ ದೇವಾಲಯದತ್ತ ಕರೆದೊಯ್ದಿತು. ಅಲ್ಲಿ ಭಗವದ್ಗೀತೆಯ ಬೋಧನೆಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಉದ್ಯಮ, ರಾಜಕೀಯ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಲಿದ್ದ ಮಹತ್ವಾಕಾಂಕ್ಷಿ ಯುವಕನ ಬದುಕಿನಲ್ಲಿ ಇದೊಂದು ವಿಭಿನ್ನ ಅಧ್ಯಾಯವಾಗಿತ್ತು. ಯಾಕೆಂದರೆ ಆಧ್ಯಾತ್ಮಿಕತೆಯ ಹುಡುಕಾಟ ಅವರ ಲೌಕಿಕ ಕನಸುಗಳನ್ನು ಕುಗ್ಗಿಸಲಿಲ್ಲ. ಕೇವಲ 19ನೇ ವರ್ಷ ವಯಸ್ಸಿನಲ್ಲಿಯೇ ಉದ್ಯಮಶೀಲತೆಯ ಜಗತ್ತಿಗೆ ಕಾಲಿಟ್ಟರು.

ಅಲ್ಲಿಂದ ಆರಂಭವಾದ ಅವರ ಉದ್ಯಮಯಾನ, ಮುಂದಿನ ವರ್ಷಗಳಲ್ಲಿ ದೇಶ-ವಿದೇಶಗಳ ಉದ್ಯಮಿಗಳು, ಹೂಡಿಕೆದಾರರು, ಸ್ಟಾರ್ಟ್‌ಅಪ್ ಸಂಸ್ಥಾಪಕರು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸುವ ಅವಕಾಶಗಳನ್ನು ತೆರೆದಿಟ್ಟಿತು. ಅನಿಲ್ ಶೆಟ್ಟಿಯ ಉದ್ಯಮಯಾನ ಅವರು ಎಂದಿಗೂ ಊಹಿಸಿರದ ಅನೇಕ ಬಾಗಿಲುಗಳನ್ನು ತೆರೆದಿತು. ವರ್ಷಗಳು ಕಳೆದಂತೆ ಭಾರತದ ಸ್ಟಾರ್ಟ್‌ಅಪ್ ವಲಯ, ಕಾರ್ಪೊರೇಟ್ ಜಗತ್ತು ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಂಪರ್ಕ ಜಾಲವನ್ನು ಬೆಳೆಸಿಕೊಂಡರು. ಫ್ಯಾಷನ್, ಲೈಫ್‌ಸ್ಟೈಲ್, ತಂತ್ರಜ್ಞಾನ ಮತ್ತು ವೃತ್ತಿಪರ ನೆಟ್‌ವರ್ಕಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯಮಗಳಲ್ಲಿ ತೊಡಗಿಸಿಕೊಂಡರು. ಅವರ ಜೀವನಯಾನ ಜಾಗತಿಕ ನಾಯಕರನ್ನು ಹಾಗೂ ಭಾರತದ ಪ್ರಮುಖ ಉದ್ಯಮ ಮತ್ತು ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶಗಳನ್ನು ಕಲ್ಪಿಸಿತು. ಆದರೆ ಅನಿಲ್ ಶೆಟ್ಟಿಗೆ ಉದ್ಯಮದಲ್ಲಿ ಯಶಸ್ಸು ಗಳಿಸುವುದೇ ಅಂತಿಮ ಗುರಿಯಾಗಿರಲಿಲ್ಲ! ಉದ್ಯಮದ ಗಡಿಗಳನ್ನು ಮೀರಿ ಸಮಾಜದ ಮೇಲೆ ಪ್ರಭಾವ ಬೀರುವ ಮಹತ್ವಾಕಾಂಕ್ಷೆ ಅವರಲ್ಲಿತ್ತು.

ರಾಜಕೀಯ ಪ್ರವೇಶಿಸಿದ ಉದ್ಯಮಿ!
ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚುತ್ತಿದ್ದ ಕಾಳಜಿ ಅನಿಲ್ ಶೆಟ್ಟಿಯನ್ನು ಸಾರ್ವಜನಿಕ ಸೇವೆ ಮತ್ತು ರಾಜಕೀಯದತ್ತ ಆಕರ್ಷಿಸಿತು. ನಾಗರಿಕ ಹೋರಾಟಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಯುವಜನರಿಗಾಗಿ ಕೈಗೊಂಡ ಸಮಾಜಮುಖಿ ಚಟುವಟಿಕೆಗಳ ಮೂಲಕ ಉದ್ಯಮದಾಚೆಗೂ ತಮ್ಮದೇ ಆದ ಸಾರ್ವಜನಿಕ ಗುರುತನ್ನು ನಿರ್ಮಿಸಿಕೊಳ್ಳಲು ಆರಂಭಿಸಿದರು.

ಭಾರತೀಯ ಜನತಾ ಪಕ್ಷವನ್ನು ಸೇರಿ ಬೆಂಗಳೂರಿನ ರಾಜಕೀಯದಲ್ಲಿ, ವಿಶೇಷವಾಗಿ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾದರು. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಟಿಎಂ ಲೇಔಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಪಡೆಯುವ ಹಂತದವರೆಗೂ ತಲುಪಿದ್ದರು. ಒಂದು ದಿನದ ಖರ್ಚಿಗೂ ಸಾಕಾಗದಷ್ಟು ಹಣದೊಂದಿಗೆ ಬೆಂಗಳೂರಿಗೆ ಬಂದಿದ್ದ ಯುವಕನಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯೇ ಮತ್ತೊಂದು ಮಹತ್ವದ ತಿರುವಾಗಿತ್ತು. ಆದರೆ ರಾಜಕೀಯವೇ ಅವರ ಮುಂದಿನ ಬದುಕನ್ನು ನಿರ್ಧರಿಸಲಿದೆ ಎಂದು ಹಲವರು ಭಾವಿಸುತ್ತಿದ್ದಾಗ, ಅವರು ಮತ್ತೊಮ್ಮೆ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಈ ಬಾರಿ ಅವರ ಕನಸು ಸಿನಿಮಾ ನಾಯಕನಾಗುವುದು ಆಗಿತ್ತು. ಅದು ಕೇವಲ ನಟನಾಗಿ ಮಾತ್ರವಲ್ಲ. ಸ್ವತಃ ಕಥೆ ಬರೆಯಬೇಕು. ಸಿನಿಮಾ ನಿರ್ಮಿಸಬೇಕು. ಆ ಚಿತ್ರದ ನಾಯಕನಾಗಿಯೂ ಅಭಿನಯಿಸಬೇಕು! ಹೀಗೆ ಬಹುಮುಖಿ ಕನಸುಗಳೊಂದಿಗೆ ಚಿತ್ರರಂಗದ ಸಾಂಪ್ರದಾಯಿಕ ಹಿನ್ನೆಲೆಯಿಲ್ಲದೆ, ಔಪಚಾರಿಕ ಅಭಿನಯ ತರಬೇತಿಯೂ ಇಲ್ಲದೆ, ಅನಿಲ್ ಶೆಟ್ಟಿ ಲಂಬೋದರ 2.0 ಎಂಬ ಮಹತ್ವಾಕಾಂಕ್ಷೆಯ ವೈಜ್ಞಾನಿಕ ಕಾಲ್ಪನಿಕ ಚಿತ್ರವನ್ನು ಕೈಗೆತ್ತಿಕೊಂಡರು.

ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಶೆಟ್ಟಿ ‘ಅವ್ಯಕ್ತ’ ಎಂಬ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ಸಂತೋಷದ ಹುಡುಕಾಟದಿಂದ ರೂಪುಗೊಳ್ಳುವ ಭವಿಷ್ಯದ ಜಗತ್ತಿನಲ್ಲಿ ಸಾಗುವ ಪಾತ್ರವಿದು. ಚಿತ್ರದಲ್ಲಿ ಕುನಾಲ್ ಕಪೂರ್ ಮತ್ತು ಸಾಚಿ ಬಿಂದ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಂತ್ರಜ್ಞಾನ, ಮಾನವ ಭಾವನೆಗಳು ಮತ್ತು ನಿಜವಾದ ಸಂತೋಷದ ಅರ್ಥವೇನು ಎಂಬ ಪ್ರಶ್ನೆಗಳನ್ನು ಚಿತ್ರ ಅನ್ವೇಷಿಸುತ್ತದೆ. 2026ರ ನವೆಂಬರ್ 13ರಂದು ಬಿಡುಗಡೆಯಾದ ಲಂಬೋದರ 2.0, ಅನಿಲ್ ಶೆಟ್ಟಿಯ ಅಸಾಧಾರಣ ಜೀವನಯಾನದಲ್ಲಿ ಮತ್ತೊಂದು ಮಹತ್ವದ ಅಧ್ಯಾಯವಾಯಿತು. ಅನಿಲ್ ಶೆಟ್ಟಿಗೆ ಜೀವನವೆಂದರೆ ಒಂದೇ ಪಾತ್ರವನ್ನು ನಿರ್ವಹಿಸುವುದಲ್ಲ. ಹೊಸ ಹೊಸ ಪಾತ್ರಗಳನ್ನು ಸೃಷ್ಟಿಸುತ್ತಾ, ಪ್ರತಿಯೊಂದು ಕನಸನ್ನೂ ಬದುಕಿ ತೋರಿಸುವುದು!

Recommended For You

Leave a Reply