ಪವನ್ ಒಡೆಯರ್ ಗೆ ಮಾತೃ ವಿಯೋಗ

ಕನ್ನಡದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ನಿಧನರಾಗಿದ್ದಾರೆ.‌ ಮೃತರ ಅಂತಿಮ‌ ಸಂಸ್ಕಾರ ಇಂದು ಕುಣಿಗಲ್ ನಲ್ಲಿ‌ ನೆರವೇರಲಿದೆ.

ಶಿವರಾಜ್ ಕುಮಾರ್ ನಟನೆಯ ಬಹು‌ನಿರೀಕ್ಷಿತ ಚಿತ್ರ ‘ಬೇಲ್’ನ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಂಕಷ್ಟ ಎದುರಾಗಿದೆ. ಹೆತ್ತು, ಹೊತ್ತು ಬೆಳೆಸಿದ ತಾಯಿ ಗೀತಾ ಒಡೆಯರ್ ಅವರನ್ನು ಕಳೆದುಕೊಂಡಿದ್ದಾರೆ. ತಾಯಿಗೆ 73 ವರ್ಷ ವಯಸ್ಸಾಗಿತ್ತು.

‘ಸಿನಿಕನ್ನಡ.ಕಾಮ್’ ಜತೆ ಮಾತನಾಡಿದ ಪವನ್ ಒಡೆಯರ್ “ತಾಯಿಗೆ ಕ್ಯಾನ್ಸರ್ ಆಗಿತ್ತು. ಎರಡು ತಿಂಗಳ‌ ಹಿಂದೆ ಅನಾರೋಗ್ಯ ಪತ್ತೆಯಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಗಂಭೀರ ಪರಿಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದರು” ಎಂದು ತಿಳಿಸಿದ್ದಾರೆ.

“ಕಳೆದ ಮೂರು‌ ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು
ಇವತ್ತು (ಬುಧವಾರ) ಮುಂಜಾನೆ 3.57ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಪವನ್ ಒಡೆಯರ್ ಮೂಲ ಕುಟುಂಬ ಕುಣಿಗಲ್ ನಲ್ಲಿರುವ ಕಾರಣ ನಾವು ಪಾರ್ಥಿವ ಶರೀರದೊಂದಿಗೆ ಕುಣಿಗಲ್ ಗೆ ಹೊರಟಿದ್ದೇವೆ” ಎಂದು ಪವನ್ ಪತ್ನಿ, ನಟಿ ಅಪೇಕ್ಷಾ ಒಡೆಯರ್ ಹೇಳಿದ್ದಾರೆ.

ಪವನ್ ತಂದೆ ಗಜಾನನ ಒಡೆಯರ್, ಪವನ್ ಹಿರಿಯ ಸಹೋದರಿ ಅಶ್ವಿನಿ ಮಧುಸೂದನ್ ಹೀಗೆ ಆಪ್ತ ವಲಯ ಮತ್ತು ಇಡೀ ಕುಟುಂಬ ದುಃಖದಲ್ಲಿದೆ. ಮಧ್ಯಾಹ್ನ ಸುಮಾರ್ 12 ಗಂಟೆಯ ಸುಮಾರಿಗೆ ಕುಣಿಗಲ್ ನಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಿದ್ಧತೆ ನಡೆಸಲಾಗಿದೆ.

ಪವನ್ ಒಡೆಯರ್ ಯಶ್ ನಟನೆಯ ಗೂಗ್ಲಿ, ಪುನೀತ್ ರಾಜ್ ಕುಮಾರ್ ಅವರ ರಣ ವಿಕ್ರಮ, ನಟಸಾರ್ವಭೌಮ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಹಾಗೂ ಕನ್ನಡ ಚಿತ್ರೋದ್ಯಮಕ್ಕೆ ಆಪ್ತರಾದವರು. ಹೀಗಾಗಿ ಅವರ ನೋವಿಗೆ ಕನ್ನಡದ ಪ್ರೇಕ್ಷಕರು ಮರುಗಿದ್ದಾರೆ. ನೋವಿನಲ್ಲಿ ಚಿತ್ರರಂಗ ಭಾಗಿಯಾಗಿದೆ. ಸಿನಿಕನ್ನಡ.ಕಾಮ್ ಕೂಡ ಸಂತಾಪ ಸೂಚಿಸುತ್ತದೆ.

Recommended For You

Leave a Reply

error: Content is protected !!