ಗಿಲ್ಲಿ ನಟನ ‘ಪಳಾರ್’ ಮುಹೂರ್ತ

ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿ ಸದ್ದು ಮಾಡಿದವರು ಗಿಲ್ಲಿ ನಟ ಯಾನೇ ನಟರಾಜ್. ಇದೀಗ ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ಆಕರ್ಷಕವಾಗಿ ನೆರವೇರಿದೆ.

ಬೆಂಗಳೂರಿನ ಗವಿಪುರ ಬಂಡೆ ಮಹಾಕಾಳಿ ದೇವಾಲಯದಲ್ಲಿ ಇಂದು ನೆರವೇರಿದ ಮುಹೂರ್ತದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲ್ಯಾಪ್ ಮಾಡಿ ಶುಭಕೋರಿದ್ದಾರೆ. ನಾನು ಕಾಮಿಡಿ ಶೋನಲ್ಲಿ ಸ್ಪರ್ಧಿಯಾಗಿದ್ದಾಗಲೇ ಸಿನಿಮಾ ಮಾಡುವಂತೆ ರವಿಚಂದ್ರನ್ ಅವರು ಪ್ರೋತ್ಸಾಹ ನೀಡಿದ್ದರು. ಹಾಗಾಗಿ ಅವರನ್ನೇ ಕ್ಲ್ಯಾಪ್ ಮಾಡಲು ಆಹ್ವಾನಿಸಿದ್ದೆವು. ಬಂದು ಶುಭ ಹಾರೈಸಿದ್ದು ತುಂಬಾನೇ ಖುಷಿಯಾಯಿತು ಎಂದು ಗಿಲ್ಲಿ ಸಂಭ್ರಮಿಸಿದ್ದಾರೆ.

ಜನ್ಮದಿನದ ಸಂಭ್ರಮದಲ್ಲೇ ನಾಯಕನಾಗುವ ಚಿತ್ರದ ಮುಹೂರ್ತ ಆಚರಿಸಿಕೊಂಡ ಗಿಲ್ಲಿ ಖುಷಿಯಿಂದಲೇ ಮಾತು ಆರಂಭಿಸಿದರು. “ಮೊದಲ‌ಬಾರಿಗೆ ಕೇಕ್ ಕಟ್ ಮಾಡಿ ಬರ್ತ್ ಡೇ ಮಾಡಿದ್ದೀನಿ. ನಾನು ಮೊದಲು ಇದೇ ಏರಿಯಾದಲ್ಲಿದ್ದೆ. ಹಾಗಾಗಿ ಇಲ್ಲೇ ಮೊದಲ ಚಿತ್ರದ ಮುಹೂರ್ತವಾಗಿರುವುದು ಖುಷಿಯಾಗಿದೆ. ಬಿಗ್ ಬಾಸ್ ನಿಂದ ಬಂದ ಮೇಲೆ ಸುಮಾರು ಏಳೆಂಟು ಸಿನಿಮಾ ಆಫರ್ಸ್ ಬಂದಿದ್ದವು. ಆದರೆ ಈ ಕಥೆ ತುಂಬ ಇಷ್ಟವಾಗಿತ್ತು. ಚಿತ್ರಕ್ಕೆ ಪಳಾರ್ ಅಂತ ಹೆಸರಿಡಲಾಗಿದೆ.‌ ನಮ್ಮ ಊರಕಡೆ ‘ಪಳಾರ್ ನನ್ಮಗ’ ಅಂದರೆ ಕಿಲಾಡಿ ನನ್ಮಗ ಎನ್ನುವ ರೀತಿಯಲ್ಲಿ ಬಳಸುತ್ತೇವೆ. ಬಿಗ್ ಬಾಸ್ ಮನೆಯೊಳಗೆ ನಾನು ಅದೇ ಹೆಸರಲ್ಲಿ ಗುರುತಿಸಿಕೊಂಡಿದ್ದೆ. ಹಾಗಂತ ಸಿನಿಮಾಗೆ ಇದು ಮೊದಲೇ ಪ್ಲ್ಯಾನ್ ಮಾಡಿ ಇಟ್ಟಿರೋ ಹೆಸರೇನಲ್ಲ. ನಾನು ಮತ್ತು ಡೈರೆಕ್ಟರ್ ಸೇರ್ಕೊಂಡು ಯಾವ ಹೆಸರಿಡೋದು ಅಂತ ಯೋಚಿಸ್ತಾ ಇದ್ದೆವು. ಆದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ‘ಪಳಾರ್ ಗಿಲ್ಲಿ’ ಎಂದು ಬರೆದಿರುವ ಫೊಟೊ ಉಡುಗೊರೆ ಕೊಟ್ಟಿದ್ದರು. ಅದನ್ನು ನೋಡಿದ ಬಳಿಕ ಅದೇ ಸೂಕ್ತ ನಮಗೂ ಅನಿಸಿತು.

ಖುಷಿಗಿಂತಲೂ‌ ಭಯ ಇದೆ..!

ಶರಣ್ ನಂಥ ಕಾಮಿಡಿ ಹೀರೋಗಳು ನೂರು ಸಿನಿಮಾದಲ್ಲಿ ಹಾಸ್ಯ ಕಲಾವಿದರಾದ ಬಳಿಕ ಹೀರೋವಾಗಿದ್ದಾರೆ. ಆದರೆ ನಿಮಗೆ ಈ ಅವಕಾಶ ಇಷ್ಟು ಬೇಗ ದೊರಕಿರುವುದಕ್ಕೆ ಎಷ್ಟು ಖುಷಿ ಇದೆ ಎನ್ನುವ ಮಾಧ್ಯಮದ ಪ್ರಶ್ನೆಗೆ “ನನಗೆ ಖುಷಿಗಿಂತಲೂ‌ ಭಯ ಇದೆ” ಎನ್ನುವುದು ಗಿಲ್ಲಿಯ ಉತ್ತರವಾಗಿತ್ತು. “ಕೆವಿಎನ್ ನಂಥ ದೊಡ್ಡ ಸಂಸ್ಥೆ ನಿರ್ಮಾಣಕ್ಕೆ ಬಂದಿದೆ. ‘ಸು ಫ್ರಮ್ ಸೋ’ ಚಿತ್ರದ ಛಾಯಾಗ್ರಹಕ ಇದ್ದಾರೆ. ಇದೆಲ್ಲ ನನ್ನ ಜವಾಬ್ದಾರಿ ಹೆಚ್ಚಿಸಿದೆ.‌ ಆದರೆ ಇಲ್ಲಿ ನಾನು ನಾಯಕ ಎನ್ನುವುದಕ್ಕಿಂತ ಕಾಮಿಡಿ ಹೀರೋ ಎಂದೇ ಹೇಳಬಹುದು.‌ ಉಳಿದ ಕಾಮಿಡಿ ಹೀರೋ ಸಿನಿಮಾಗಿಂತ ಇದು ಹೇಗೆ ವಿಭಿನ್ನ ಎನ್ನುವುದಕ್ಕಿಂತ ಮನೋರಂಜನೆಗೆ ಹೆಚ್ಚು ಒತ್ತು ನೀಡಲಾಗಿದೆ” ಎಂದರು ಗಿಲ್ಲಿ.

ಯುವರತ್ನ ಚಿತ್ರಕ್ಕೆ ನಾನು ಸೆಟ್ ಬಾಯ್ ಆಗಿದ್ದೆ!

ಸಿನಿಮಾ ಹೀರೋವಾಗಿರುವ ಗಿಲ್ಲಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಈ ಚಿತ್ರದ ಛಾಯಾಗ್ರಹಕರನ್ನು ತಾನು ಈ ಹಿಂದೆ ‘ಯುವರತ್ನ’ ಸಿನಿಮಾದ ಸೆಟ್ ನಲ್ಲಿ ನೋಡಿದ್ದೆ. ಅಲ್ಲಿ ನಾನು ಸೆಟ್ ಬಾಯ್ ಆಗಿದ್ದೆ ಎಂದು ಹೇಳಿಕೊಂಡ ಸಂದರ್ಭ ಅದಾಗಿತ್ತು.

‘ಪಳಾರ್ ಎಂದು ಬರೆದಿರುವ ಸಿನಿಮಾ ಪೋಸ್ಟರ್ ಅನಾವರಣಗೊಂಡಾಗ ಅದರ ತುಂಬ ಸಾಕಷ್ಟು ಬರಹಗಳು ಕಾಣುವಂತಿತ್ತು. ಆಯಾ ಸಮಯಕ್ಕೆ ಇದೇ ಕೆಲಸ ಎನ್ನುವಂಥ ಸೂಚನೆಗಳು ಅಲ್ಲಿದ್ದವು. ಆ ಬಗ್ಗೆ ಮಾತನಾಡಿದ ಗಿಲ್ಲಿ, “ಅದು ಪಾತ್ರಕ್ಕೆ ಹೊಂದಿಕೊಂಡ ದಿನಚರಿ” ಎಂದರು.

ನಾಯಕಿ ರಿವೀಲ್ ಗೆ ಕಾಲ ಕೂಡಿ ಬಂದಿಲ್ಲ!

ಪಳಾರ್ ಚಿತ್ರಕ್ಕೆ ಗಿಲ್ಲಿಯ ಬಿಗ್ ಬಾಸ್ ಜೋಡಿ ನಟಿ ಕಾವ್ಯ ನಾಯಕಿಯಾಗುವ ಬಗ್ಗೆ ಸುದ್ದಿಯಾಗಿದೆ. ಈ ಜೋಡಿಯ ಫೊಟೊ ಶೂಟ್ ಕೂಡ ನಡೆದ ಬಗ್ಗೆ ಮಾಹಿತಿ ಇದೆ. ಆದರೆ “ನನ್ನ ಮನಸಲ್ಲಿ ಯಾರೂ ನಾಯಕಿ ಇಲ್ಲ” ಎಂದು ಗಿಲ್ಲಿ ಹೇಳಿದರೆ, ನಾಯಕಿ ಬಗ್ಗೆ ಇನ್ನೂ ರಿವೀಲ್ ಮಾಡಲು ಕಾಲ ಬಂದಿಲ್ಲ ಎಂದು ನಿರ್ದೇಶಕ ಚಂದ್ರಮೋಹನ್ ಹೇಳಿದರು. ಈ ಚಿತ್ರಕ್ಕಾಗಿ ತಾವು ಕೂಡ ನಿರ್ದೇಶಕರ ಜತೆ ಮೂರು ತಿಂಗಳು ಕುಳಿತು ಕೆಲಸ ಮಾಡಿದ್ದಾಗಿ ಗಿಲ್ಲಿ ಹೇಳಿದರು. ಇತರ ಪಾತ್ರಗಳಲ್ಲಿ ನಟ ಶೋಭರಾಜ್, ಸು ಫ್ರಂ ಸೋ ಭಾವ ಖ್ಯಾತಿಯ ಪುಷ್ಪರಾಜ್ ಮೊದಲಾದವರು ಇದ್ದಾರೆ. ಕೆವಿಎನ್ ನಂಥ ದೊಡ್ಡ ಸಂಸ್ಥೆ ನಿರ್ಮಾಣಕ್ಕೆ ಬಂದಿದೆ ಎಂದು ಗಿಲ್ಲಿ ಹೇಳಿದರು. ವಾಸುಕಿ ವೈಭವ್ ಸಂಗೀತದಲ್ಲಿ ಚಿತ್ರದಲ್ಲಿ ನಾಲ್ಕು ಹಾಡುಗಳಿರುವುದಾಗಿ ಮಾಹಿತಿ ನೀಡಲಾಗಿದೆ.

Recommended For You

Leave a Reply

error: Content is protected !!