ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ವಸಿಷ್ಠ ಸೌಂಡ್!

ಐತಿಹಾಸಿಕ ಹಿನ್ನೆಲೆಯ ಚಿತ್ರಕ್ಕೆ ಆರಂಭದ ವಿವರಣೆ ಖಂಡಿತಾ ಮುಖ್ಯವಾಗುತ್ತದೆ. ಅಂಥದೊಂದು ನಿರೂಪಣೆಗೆ ವಸಿಷ್ಠ ಸಿಂಹ ಅವರ ಕಂಠ ಸಿಕ್ಕರೆ ಬೇರೇನು ಬೇಕು? ಈ ನಿಟ್ಟಿನಲ್ಲಿ ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಟ್ಟಿಯಾಗಿಯೇ ಸೌಂಡ್ ಮಾಡಿದೆ.

ಈ ಚಿತ್ರದ ಹೆಸರೇ ಮೊದಲ ಆಕರ್ಷಣೆ. ಅದರ ಬಳಿಕ ಇಡುತ್ತಿರುವ ಪ್ರತಿ ಹೆಜ್ಜೆಯೂ ಆಕರ್ಷಕ. ಅದರಲ್ಲೂ ತಮ್ಮ ಕಂಠದಿಂದ ಮಂತ್ರಮುಗ್ದಗೊಳಿಸುವ ಮಾಂತ್ರಿಕ ವಸಿಷ್ಠ ಸಿಂಹ ಅವರ ಧ್ವನಿಯನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ.

ಕೇವಲ ಒಂದು ಮೋಶನ್ ಪೋಸ್ಟರ್ ಮೂಲಕವೇ ಸದ್ದು ಮಾಡಿದಂಥ ಚಿತ್ರ ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್. ಅದಕ್ಕೆ ಮೊದಲ ಕಾರಣ ಮೋಶನ್ ಪೋಸ್ಟರ್ ಬಿಡುಗಡೆಯ ಸುದ್ದಿಗೋಷ್ಠಿಯನ್ನು ಆಯೋಜಿಸಿದ ರೀತಿಯೇ ವಿಶಿಷ್ಠವಾಗಿತ್ತು.‌ ಎರಡನೆಯದಾಗಿ ಐತಿಹಾಸಿಕ‌ ಹಿನ್ನೆಲೆಯ ಚಿತ್ರಕ್ಕೆ ನೀಡಲಾದ ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಎನ್ನುವ ಹೆಸರು ಕುತೂಹಲ ಮೂಡಿಸಿತ್ತು. ಈ ಐತಿಹಾಸಿಕ, ಆಧುನಿಕ ವಿಚಾರಗಳ ಮಧ್ಯೆ ಪಚ್ಚೆಗಣಪನ ವಿಶೇಷತೆಯನ್ನು ಕೂಡ ಸಾರಿ ಧಾರ್ಮಿಕ ಸೆಳೆತವನ್ನು ಕೂಡ ಸೃಷ್ಟಿಸಲಾಗಿತ್ತು.‌ ಇದೀಗ ಆ ಪಚ್ಚೆ ಗಣಪ ವಸಿಷ್ಠ ಸಿಂಹ ಅವರ ಮಡಿಲು ಸೇರಿದೆ. ಅವರ ಜನ್ಮದಿನದಂದು ಚಿತ್ರತಂಡ ಅವರ ಬಳಿಗೆ ತೆರಳಿ, ಪಚ್ಚೆ ಗಣಪನನ್ನು ಉಡುಗೊರೆ ನೀಡಿತ್ತು. ಜನ್ಮದಿನ, ದಸರಾ ಸಂಭ್ರಮದ ಮಧ್ಯೆ ಪಚ್ಚೆ ಗಣಪ ಕೂಡ ಆಗಮಿಸಿದ ಖುಷಿಗೆ ವಸಿಷ್ಠ ಸಿಂಹ ಖುಷಿಯಾಗಿದ್ದರು.

ಬಾರ್ ನಲ್ಲಿ ತಾರೆಯರ ಕಲರವ

ಸಂಗೀತ ಬಾರ್ ಆಂಡ್ ರೆಸ್ಟೋರೆಂಟ್, ಇದು ದೇವರ ತಾಣ ಎನ್ನುವುದು ಚಿತ್ರದ ಪೂರ್ತಿ ಹೆಸರು. ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಈ ಚಿತ್ರದ ಪ್ರಮುಖ ಆಕರ್ಷಣೆ. ಖಳನಟ, ಹಾಸ್ಯನಟ, ನಾಯಕ ನಟ ಹೀಗೆ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿ ಸ್ಟಾರ್ ಆದವರು ಕೋಮಲ್. ಹೀಗಾಗಿಯೇ ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಚಿತ್ರದಲ್ಲಿ ಏನು ಮಾಡಲಿದ್ದಾರೆ ಎನ್ನುವುದು ಮೊದಲ ಕುತೂಹಲ. ಮತ್ತೊಂದೆಡೆ ಈಗಾಗಲೇ ಮಲಯಾಳಂ‌ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮೇಘನಾ ರಾಜ್, ಕೇರಳದ ರಾಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಣಿಯ ಪಾತ್ರ ಸಿಂಹಾಸನಕ್ಕೆ ಮೀಸಲಾಗಿರದೆ ಖಡ್ಗ ಹಿಡಿದು‌ ಕಳರಿ ಪಯಟ್ ಮಾಡಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. ಇದರ ಜತೆಗೆ ಚಿತ್ರದ ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಖುದ್ದಾಗಿ ಒಂದು ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಅನುಷಾ ರೈ, ವಜ್ರಧೀರ ಜೈನ್, ಪ್ರಶಾಂತ್ ಸಿದ್ದಿ ಮೊದಲಾದವರ ತಾರಾಗಣ ಚಿತ್ರದಲ್ಲಿದೆ. ನವೆಂಬರ್ 2ರಂದು ನವರಸನಾಯಕ ಜಗ್ಗೇಶ್ ಅವರು ಈ ಚಿತ್ರದ ಟೀಸರ್ ಬಿಡುಗಡೆಗೊಳಿಸಲಿದ್ದಾರೆ. ಜ್ಯೋತಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ವಿಕಾಸ್ ಎಸ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Recommended For You

Leave a Reply