‘ಗಂಧದ ಗುಡಿ ಸಿನಿಹಬ್ಬ’ ಶೀರ್ಷಿಕೆ ಅನಾವರಣ

‘ಮೈಸೂರು ಸಿನಿಮಾ ಸೊಸೈಟಿ’ ಆಯೋಜಿಸುತ್ತಿರುವ ಕನ್ನಡ ಕಿರುಚಿತ್ರಗಳ ಉತ್ಸವ ಬೆಂಗಳೂರಿನಲ್ಲಿ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ನೀಡಲಾಗಿರುವ ‘ಗಂಧದ ಗುಡಿ ಸಿನಿ ಹಬ್ಬ’ ಎನ್ನುವ ಶೀರ್ಷಿಕೆಯನ್ನು ಚಿತ್ರನಟಿ ತೇಜಸ್ವಿನಿ ಶರ್ಮ ಅನಾವರಣಗೊಳಿಸಿ ಶುಭಕೋರಿದರು.

ಡಾ.ರಾಜ್ ಕುಮಾರ್ ಅವರ ಸಿನೆಮಾ ಹೆಸರಿನ ಸ್ಫೂರ್ತಿಯೊಂದಿಗೆ ಇರಿಸಲಾದ ಗಂಧದ ಗುಡಿ ಸಿನಿಹಬ್ಬದಲ್ಲಿ 30 ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ. ಎರಡು ದಿನಗಳ ಕಾಲ ಒಟ್ಟು ಮೂವತ್ತು ಸಿನೆಮಾಗಳು ಪ್ರದರ್ಶನಗೊಳ್ಳಲಿವೆ. ಇವುಗಳು ಪ್ರೇಕ್ಷಕರಿಗೆ ಉಚಿತವಾಗಿ ಲಭ್ಯವಾಗಲಿದೆ. ನವೆಂಬರ್ 21 ಮತ್ತು 22ರ ಶನಿವಾರ ಮತ್ತು ಭಾನುವಾರಗಳಂದು ಬೆಂಗಳೂರು ಗಾಂಧಿನಗರದ ಸರ್ ಎಂ.ವಿ ಅಡಿಟೋರಿಯಂನಲ್ಲಿ ಈ ಕಾರ್ಯಕ್ರಮ ನೆರವೇರಲಿದೆ ಎಂದು ಮೈಸೂರು ಸಿನಿಮಾ ಸೊಸೈಟಿಯ ಕಾರ್ಯದರ್ಶಿ ಜಯಶೇಖರ ವಿ.ಆ‌ರ್ ತಿಳಿಸಿದರು.

ಮೊದಲ ದಿನ ಸಂಜೆ ಲಾಸ್ಯ ನಾಗರಾಜ್ ಅವರಿಂದ ನೃತ್ಯ ಪ್ರದರ್ಶನ ಇರಲಿದೆ. ಎರಡು ದಿನಗಳಲ್ಲಿ ನಿರಂತರವಾಗಿ 30 ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸದ್ಯಕ್ಕೆ ಎರಡು ಸಭಾಂಗಣಗಳನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದಂತೆ ನಾಲ್ಕು ಮಾಸ್ಟರ್ ಕ್ಲಾಸ್ ಗಳು ನಡೆಯಲಿವೆ. ಯಾವುದಕ್ಕೂ ಕೂಡ ಪ್ರವೇಶ ದರಗಳು ಇರುವುದಿಲ್ಲ. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಸಿನೆಮಾ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಜಯಶೇಖ‌ರ್ ಮಾಹಿತಿ ನೀಡಿದರು.

ಲೋಗೋ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ನಿರ್ದೇಶಕರ ಸಂಘದ .ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್ ಮಾತನಾಡಿ, ‘ಈ ಬಾರಿ ದಸರಾದಲ್ಲಿ ಚಲನಚಿತ್ರೋತ್ಸವ ಇರಲಿಲ್ಲ, ಆ ಬೇಸರ ಮರೆಸುವಂಥ ಕೆಲಸವನ್ನು ಈ ತಂಡ ಮಾಡುತ್ತಿದೆ, ಮೈಸೂರಿನಿಂದ ಬಂದು ಇಲ್ಲಿ ಕಿರುಚಿತ್ರೋತ್ಸವ ನಡೆಯುತ್ತಿರುವುದು ಖುಷಿಯ ವಿಚಾರ ಎಂದರು.

ಕೇವಲ ಐದು ವರ್ಷಗಳ ಹಿಂದೆ ಚಾಲ್ತಿಗೆ ಬಂದಿರುವ ‘ಮೈಸೂರು ಸಿನಿಮಾ ಸೊಸೈಟಿ’ಯು ಸಿನೆಮಾಸಕ್ತರು ತಿರುಗಿ ನೋಡುವಂಥ ಸಾಧನೆ ಮಾಡಿದೆ. ‘ಪರಿದೃಶ್ಯ’ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಿರುಚಿತ್ರ ಸ್ಪರ್ಧೆ ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ, ಕಿರು ಚಿತ್ರೋತ್ಸವದ ಮೊದಲ ಆವೃತ್ತಿ ಬೆಂಗಳೂರಿನಲ್ಲಿ ನಡೆದಿತ್ತು. ಆನಂತರ ಮೂರು ಬಾರಿ ಮೈಸೂರಿನಲ್ಲೇ ಈ ಸ್ಪರ್ಧೆ ನಡೆಸಲಾಗಿತ್ತು. ಮೊದಲ ಆವೃತ್ತಿಯಲ್ಲಿ ವಿಜೇತಗೊಂಡ ‘ಸನ್‌ ಫ್ಲವರ್ಸ್ ವೇರ್ ದ ಫಸ್ಟ್ ಒನ್ಸ್ ಟು ನೊ’ ಚಿತ್ರವು ಕ್ಯಾನಸ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿ ಮನ್ನಣೆ ಗಳಿಸಿತ್ತು. ಈ ಬಾರಿ ಐದನೆಯ ಆವೃತ್ತಿಯ ಕಿರುಚಿತ್ರೋತ್ಸವದಲ್ಲಿ 100ಕ್ಕೂ ಹೆಚ್ಚು ದೇಶಗಳಿಂದ 3000ಕ್ಕೂ ಅಧಿಕ ಚಿತ್ರಗಳು ನೋಂದಣಿಗೊಂಡಿವೆ.

ಕಿರುಚಿತ್ರೋತ್ಸವವು ಮುಂದಿನ ಫೆಬ್ರವರಿಯಲ್ಲಿ ಮೈಸೂರಿನಲ್ಲಿ ನೆರವೇರಲಿದೆ. ಪರಿದೃಶ್ಯದಲ್ಲಿ ಪರಭಾಷಾ ಕಿರುಚಿತ್ರಗಳು ಇರುತ್ತಿತ್ತು. ಹೀಗಾಗಿ ಅಲ್ಲಿ ಸಂಪೂರ್ಣವಾಗಿ ಕನ್ನಡದ ಅಸ್ಮಿತೆ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕಾಗಿಯೇ ‘ಗಂಧದ ಗುಡಿ’ ಸಿನೆಮೋತ್ಸವ ಆರಂಭಿಸಿದ್ದು, ಎಲ್ಲ ಕನ್ನಡ ಪ್ರೇಕ್ಷಕರ ಪ್ರೋತ್ಸಾಹವನ್ನು ನಿರೀಕ್ಷಿಸುವುದಾಗಿ ಮೈಸೂರು ಸಿನಿಮಾ ಸೊಸೈಟಿಯ ತಂಡ ಹೇಳಿಕೊಂಡಿದೆ.

ಕೇರಳದಲ್ಲಿ ಸಾವಿರಾರು ಸಿನೆಮಾ ಸೊಸೈಟಿಗಳಿವೆ. ಅವುಗಳಲ್ಲಿ 200ರಷ್ಟು ರಿಜಿಸ್ಟರ್ ಸೊಸೈಟಿಗಳಿವೆ. ಅಲ್ಲಿನ ನೆಲಮೂಲದ ಸಿನೆಮಾಗಳು ಗೆಲ್ಲಲು ಅವು ಕೂಡ ಒಂದು ಕಾರಣವಾಗಿವೆ. ಕರ್ನಾಟಕದಲ್ಲಿ ಇಂಥ ಸೊಸೈಟಿಗಳ ಸಂಖ್ಯೆ ತೀರ ಕಡಿಮೆ. ಆದ ಕಾರಣ ಮೈಸೂರು ಸಿನಿಮಾ ಸೊಸೈಟಿಯ ಕೆಲಸಗಳು ಉತ್ತಮ ಪ್ರೇಕ್ಷಕರ ಸೃಷ್ಟಿಗೆ ಪೂರಕವಾಗಿವೆ. ತಮ್ಮ ಕಾರ್ಯಕ್ರಮದಲ್ಲಿ ಇಂಥದೊಂದು ಅನಿಸಿಕೆ ಹಂಚಿಕೊಂಡ ನಿರ್ದೇಶಕ ಪಿ. ಶೇಷಾದ್ರಿ ಅವರ ಮಾತನ್ನು ಮೈಸೂರು ಸೊಸೈಟಿ ಕಾರ್ಯದರ್ಶಿ ಜಯಶೇಖರ್ ಸ್ಮರಿಸಿಕೊಂಡರು.

ಈ ಸೊಸೈಟಿಯಲ್ಲಿ 11 ಮಂದಿ ಸದಸ್ಯರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚೇತನ್, ಖಜಾಂಚಿ ಸುರೇಶ್ಚಂದ್ರ ಹಾಗೂ ಅಲ್ವಿನ್ ಉಪಸ್ಥಿತರಿದ್ದರು.

Recommended For You

Leave a Reply