‘ಕಲ್ಯಾಣಿ’ಗೆ ಕಳೆ ನೀಡಿದ ಹಾಡುಗಳ ಬಿಡುಗಡೆ

ಕನ್ನಡದ ಸೃಜನಶೀಲ ನಿರ್ದೇಶಕ ಬಿ.ಎಮ್. ಗಿರಿರಾಜ್ ಅವರು ನಿರ್ದೇಶಿಸಿ, ನಿರ್ಮಿಸಿರುವ ಕಲ್ಯಾಣಿ ಚಿತ್ರದ ಹಾಡುಗಳ ಬಿಡುಗಡೆಯಾಗಿದೆ. ಭರತ್ ಬಿ.ಜೆ ಸಂಗೀತದ ಹಾಡುಗಳನ್ನು ಗಿರಿರಾಜ್ ಅವರ ಗುರುಗಳಾದ ನಿರ್ದೇಶಕ ಶಶಾಂಕ್ ಬಿಡಗಡೆಗೊಳಿಸಿದರು.

“ಸಾಮಾನ್ಯವಾಗಿ ಗಿರಿರಾಜ್ ಚಿತ್ರಗಳಲ್ಲಿ ಕಮರ್ಷಿಯಲ್‌ ಮಾದರಿಯಲ್ಲಿ ಹಾಡುಗಳೇ ಇರುವುದಿಲ್ಲ. ಆದರೆ ಈ ಚಿತ್ರದಲ್ಲಿ ವೈವಿಧ್ಯತೆಯ ಹಾಡುಗಳನ್ನು ನೀಡಿದ್ದಾರೆ. ಅದಕ್ಕಾಗಿ ಅಭಿನಂದನೆಗಳು. ಅದೇ ರೀತಿ ನಮ್ಮ ಸಿನೆಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿದ್ದಂಥ ಕುಮಾ‌ರ್ ಅವರು ಗಿರಿರಾಜ್ ಅವರೊಂದಿಗೆ ಸೇರಿ, ಈ ಚಿತ್ರ ನಿರ್ಮಿಸಿದ್ದಾರೆ. ಅವರಿಗೂ ಒಳಿತಾಗಲಿ” ಎಂದು ಶಶಾಂಕ್ ಶುಭ ಹಾರೈಸಿದರು.

ಪ್ಯಾನ್ ಇಂಡಿಯಾ ಅಲ್ಲ ಇಂಡಿಯನ್ ಪೆಯ್ನ್ ಚಿತ್ರ.!

ಪ್ಯಾನ್ ಇಂಡಿಯಾ ಚಿತ್ರಗಳ ನಡುವೆ ಇದು ಭಾರತದ ನೋವನ್ನು ಹೇಳುವ ಸಣ್ಣ ಬಜೆಟ್‌ ಚಿತ್ರ ಎಂದರು ಗಿರಿರಾಜ್. ರಂಗಭೂಮಿಯಿಂದಲೇ ಕಲಾವಿದರನ್ನು ಆಯ್ಕೆ ಮಾಡುವ ನಿರ್ಧಾರ ಮೊದಲೇ ಮಾಡಿಕೊಂಡಿದ್ದೆವು ಎಂದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ಎಲ್ಲ ಹಾಡುಗಳ ಪ್ರದರ್ಶನ ನಡೆಯಿತು. ಸೋಶಿಯಲ್ ಮೀಡಿಯಾದಲ್ಲಿ ಒಂದೊಂದೇ ಹಾಡುಗಳ ಬಿಡುಗಡೆ ಮಾಡುವುದಾಗಿ ಗಿರಿರಾಜ್ ಹೇಳಿದರು.

ಕಥಾ ನಾಯಕನಾಗಿ ನಟಿಸುತ್ತಿರುವ ಸಾಮ್ರಾಟ್ ಶೆಟ್ಟಿ, ತಮ್ಮ ಪಾತ್ರದ ಹೆಸರು ಗೌರಿಶಂಕರ್ ಎಂದು ತಿಳಿಸಿದರು. ಸ್ನೇಹಿತನೊಂದಿಗೆ ಆತ್ಮೀಯವಾಗಿ ಬಾಲ್ಯವನ್ನು ಕಳೆದ ಈತನಿಗೆ ಒಂದು ಹಂತದಲ್ಲಿ ಸ್ನೇಹಿತನೇ ತನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎನ್ನುವ ಪರಿಸ್ಥಿತಿ ಉಂಟಾಗುತ್ತದೆ ಎಂದರು ಸಾಮ್ರಾಟ್. ರಂಗಭೂಮಿ ನಟನಾಗಿ ಆಕರ್ಷಕ ನಟನೆ
ನೀಡುತ್ತಿದ್ದ ಸಾಮ್ರಾಟ್, ‘ಕನ್ನಡಿಗ’ ಚಿತ್ರದಲ್ಲಿ ಕೊರಗಜ್ಜನ ಪಾತ್ರ ಮಾಡಿದ್ದರು. ಕಾಂತಾರ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ಹೆಸರಿಲ್ಲದ ಪಾತ್ರ ಮಾಡಿದ್ದ ಸಾಮ್ರಾಟ್ ಶೆಟ್ಟಿ, ಕಲ್ಯಾಣಿ ಮೂಲಕ ನಾಯಕನಾಗಿ ಹೆಜ್ಜೆ ಇಡುತ್ತಿದ್ದಾರೆ.

ಚಿತ್ರದ ನಾಯಕಿ ಸಿಮ್ರಾನ್ ದೆಹಲಿಯಲ್ಲಿದ್ದಾರೆ. ಅವರು ಟ್ರೇಲ‌ರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಯುವ ನಟ ಶಮಂತ್ ರಾವ್ ಅವರನ್ನು ಚಿತ್ರದ ಮೂಲಕ ಪರಿಚಯ ಮಾಡಿದ್ದೇವೆ. ಅವರು ಮೂಲತಃ ಭರತನಾಟ್ಯ ಕಲಾವಿದ ಎನ್ನುವ ಮಾಹಿತಿ ಗಿರಿರಾಜ್ ನೀಡಿದರು.

ಪಿ.ಡಿ ಸತೀಶ್ಚಂದ್ರ ಅವರು ಚಿತ್ರದಲ್ಲಿ ದೊಡ್ಡ ಪಾತ್ರವನ್ನೇ ಮಾಡಿದ್ದಾರೆ. ಪೊಲೀಸ್ ಪಾತ್ರದಲ್ಲಿರುವ ಅವರು ತಾವು ಪುಟಗಟ್ಟಲೆ ಸಂಭಾಷಣೆ ಹೇಳಿರುವುದಾಗಿ ತಿಳಿಸಿದರು. ಒಳ್ಳೆಯ ಲೊಕೇಶನ್ ಹೆಸರಲ್ಲಿ ಛಾಯಾಗ್ರಾಹಕ ಪ್ರಶಾಂತ್ ಸಾಗ‌ರ್ ತಮ್ಮನ್ನು ಕಠಿಣವಾದ ಜಾಗಗಳಿಗೆ ಕರೆದೊಯ್ದರೆಂದು ಕಿಚಾಯಿಸಿದರು.

ಮತ್ತೋರ್ವ ರಂಗಭೂಮಿ ಕಲಾವಿದ ರಂಗು ಸಮರ್ಪಣ್ ಅವರು ಕೂಡ ಈ ಚಿತ್ರದಲ್ಲೊಂದು ಪಾತ್ರ ಮಾಡಿದ್ದಾರೆ. ಮತ್ತೋರ್ವ ಶೈಲೇಂದ್ರ ಖಳ ಪಾತ್ರ ಮಾಡಿದ್ದಾರೆ. ಪಂಜಾಬಿ ಸಿನೆಮಾಗಳಲ್ಲಿ ನಾಯಕನಾಗಿರುವ ರಾಹುಲ್‌ ಜೆಟ್ಲಿ ಅವರು ಕೂಡ ಒಂದು ಒಳ್ಳೆಯ ಪಾತ್ರ ಮಾಡಿದ್ದಾರೆ ಎಂದು ಗಿರಿರಾಜ್ ತಿಳಿಸಿದರು.

ತಮ್ಮ ಎಲ್ಲ ಚಿತ್ರಗಳಿಗೆ ಸಂಕಲನ ನಿರ್ವಹಿಸುವ ಕಿಟ್ಟು ಅವರೊಂದಿಗೆ ಈ ಬಾರಿ ಯುವರತ್ನದ ಎಡಿಟರ್ ಜ್ಞಾನೇಶ್ ಜತೆಯಾಗಿರುವುದಾಗಿ ಗಿರಿರಾಜ್ ಹೇಳಿದರು. ಚಿತ್ರಕ್ಕೆ ಹೊಸಮನೆ ಮೂರ್ತಿಯವರು ಕಲಾನಿರ್ದೇಶನ ಮಾಡಿದ್ದಾರೆ. ತಮ್ಮದೇ ‘ರಕ್ತ ಚಂದನ’ ವೆಬ್ ಸಿರೀಸ್ ಮೂಲಕ ವೃತ್ತಿಪರ ಛಾಯಾಗ್ರಾಹಕರಾಗಿರುವ ಪ್ರಶಾಂತ್ ಸಾಗ‌ರ್ ಅವರನ್ನು ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿಸಿರುವುದಾಗಿ ಗಿರಿರಾಜ್ ಹೇಳಿದರು.

ಹಾಡುಗಳಲ್ಲಿವೆ ಬೇಂದ್ರೆಯವರ ಕಂಪು

ಕಲ್ಯಾಣಿಯಲ್ಲಿ ಒಟ್ಟು 4 ಹಾಡುಗಳು ಹಾಗೂ ಒಂದು ತುಣುಕು ಇವೆ. ಅದರಲ್ಲೂ ದ.ರಾ ಬೇಂದ್ರೆಯವರ ‘ಬಂಗಾರ ನೀರ ಕಡಲಾಚೆ..’ ಹಾಡನ್ನು ಬಳಸಿಕೊಳ್ಳಲಾಗಿದೆ. ಪುನರ್ವಸು ಬೇಂದ್ರೆಯವರಲ್ಲಿ ಮಾತನಾಡಿ ಹಾಡಿನ ಹಕ್ಕು ತೆಗೆದುಕೊಳ್ಳಲಾಗಿದೆ ಎಂದು ಗಿರಿರಾಜ್ ತಿಳಿಸಿದರು. ಸಂಗೀತ ನಿರ್ದೇಶಕ ಬಿ.ಜೆ ಭರತ್ ಮಾತನಾಡಿ, ಇದು ಗಿರಿರಾಜ್ ಅವರೊಂದಿಗೆ ನನ್ನ ಎರಡನೇ ಚಿತ್ರ ಎಂದರು.

ಕ್ರೈಮ್ಯಾಕ್ಸ್ ನಲ್ಲಿ ಫೈಟ್ ಮತ್ತು ಹಾಡನ್ನು ಸೇರಿಸಿ ಮಾಡಿದ್ದೇವೆ. ಜತೆಗೆ ನಟನೆಗೂ ಅವಕಾಶವಿರುವಂಥ ಕ್ರೈಮ್ಯಾಕ್ಸ್ ಅದು. ಕನ್ನಡ ಮತ್ತು ಹಿಂದಿ ಭಾಷೆಗಳ ಸಂಘರ್ಷ, ಅನುಸಂಧಾನ ಈ ಚಿತ್ರದ ಕಥಾವಸ್ತು. ಇಲ್ಲಿ ಸಂಬಂಧಗಳ ಪದರಗಳನ್ನು ಬಿಡಿಸುವ ಪ್ರಯತ್ನ ನಡೆಸಲಾಗಿದೆ. ನಮ್ಮವರು ಯಾರು? ಮನೆಯೊಳಗೆ ಇರುವವರಾ ? ಅಥವಾ ಹೊರಗಡೆ ಸಿಗುವವರಾ ಎನ್ನುವ ಪ್ರಶ್ನೆಗೆ ಉತ್ತರ ಮೂಡಿಸುವ ಪ್ರಯತ್ನ ನಡೆಸಲಾಗಿದೆ. ಚಿತ್ರದಲ್ಲಿ ಮಂಗಳಮುಖಿಯರ ಬಗ್ಗೆಯೂ ಹೇಳಲಾಗಿದೆ ಎನ್ನುವುದು ನಿರ್ದೇಶಕರ ಅನಿಸಿಕೆ.

ಯಮುನಾ ಶ್ರೀನಿಧಿಯವರು ಈ ಚಿತ್ರದಲ್ಲಿ ಖಳನಟಿಯಾಗಿ ನಟಿಸಿದ್ದಾರೆ. ಈ ಪಾತ್ರಕ್ಕೆ ಹಿಂದಿ ಭಾಷೆ ಕೂಡ ಅರಿತಿರಬೇಕಾದ ಅನಿವಾರ್ಯತೆ ಇತ್ತು. ಅವರು ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಅದೇ ರೀತಿ ತಮಿಳು, ತೆಲುಗು, ಮಲಯಾಳಂನಲ್ಲಿ ನಟಿಸಿರುವ ಕಲಾವಿದೆ ಸಾಮ್ರಾಜ್ಞೆ ಹಾಗೂ ರಂಗಭೂಮಿ ಕಲಾವಿದೆಯರಾದ ಕೇತುಜಾ, ನವ್ಯಾರನ್ನು ಕೂಡ ಗಿರಿರಾಜ್ ವೇದಿಕೆಯಲ್ಲಿ ಪರಿಚಯಿಸಿದರು. ಚಿತ್ರದಲ್ಲಿ ಗಿರಿರಾಜ್ ಪತ್ನಿ ಕಾತ್ಯಾಯಿನಿಯವರು ವಸ್ತ್ರ ವಿನ್ಯಾಸಕಿಯಾಗಿ ಹಾಗೂ ನಟಿಯಾಗಿಯೂ ಕಾಣಿಸಿಕೊಂಡಿರುವುದು ವಿಶೇಷ.

ಗಂಗಾಧರ್ ಅವರು ಚಿತ್ರವನ್ನು ರಾಜ್ಯಾದ್ಯಂತ ಹಂಚಿಕೆ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಅಂದರೆ ನವೆಂಬ‌ರ್ ಕೊನೆಯ ವಾರದಲ್ಲಿ ಚಿತ್ರ ತೆರೆಗೆ ತರುವ ಯೋಜನೆ ಹಾಕಿರುವುದಾಗಿ ಗಿರಿರಾಜ್‌ ತಿಳಿಸಿದ್ದಾರೆ.

Recommended For You

Leave a Reply