‘ಆರಂಭ ವಸಂತ..’ ಇನ್ನು ಶೋತೃಗಳ ಸ್ವಂತ..!

ಗುರುನಂದನ್ ತಪಸ್ವಿನಿ ಪೂಣಚ್ಚ ನಟನೆಯ ಮಿ.ಜಾಕ್ ಚಿತ್ರದ ಹಾಡು ‘ಆರಂಭ.. ವಸಂತ ಆರಂಭ..’ ಹಾಡನ್ನು ಆಲಿಸಿದವರೆಲ್ಲ ಮೆಚ್ಚಿಕೊಳ್ಳುತ್ತಿದ್ದಾರೆ. ಇಂಥದೊಂದು ಮಾದುರ್ಯಮಯ ಹಾಡನ್ನು ಕಿರಣ್ ರವೀಂದ್ರ ನಾಥ್‌ ಸಂಗೀತದಲ್ಲಿ ಪ್ರಮೋದ್‌ ಮರವಂತೆ ರಚಿಸಿದ್ದಾರೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಬಾಗಿಯಾಗಿ ಸಂಭ್ರಮ ವ್ಯಕ್ತಪಡಿಸಿದೆ.

ಜೆನ್ ಜಿಯಿಂದ ಹಿಡಿದು ಹಿರಿಯ ತಲೆಮಾರಿನ ತನಕ ಹಾಡುಗಳು ಇಷ್ಟವಾಗಬೇಕು ಎನ್ನುವುದು ನನ್ನ ಆಶಯ. ಮಾತ್ರವಲ್ಲ, ಪ್ರತಿಯೊಂದು ಚಿತ್ರದಲ್ಲೂ ಇಂಥದೊಂದು ಮೆಲೊಡಿ ಇರಬೇಕು ಎನ್ನುವುದು ನನ್ನ ಆಶಯ. ಅದಕ್ಕೆ ತಕ್ಕಂತೆ ಈ ಚಿತ್ರದಲ್ಲಿ ಒಂದು ಒಳ್ಳೆಯ ಅವಕಾಶ ದೊರಕಿದೆ ಎಂದರು ಸಂಗೀತ ನಿರ್ದೇಶಕ ಕಿರಣ್‌ ರವೀಂದ್ರನಾಥ್.

ನಿರ್ದೇಶಕ ಸುಮಂತ್ ಮಾತನಾಡಿ, ಕಥೆ ಕೇಳಿದೊಡನೆ ಈ ಚಿತ್ರದಲ್ಲಿ ನಟಿಸಲು ಒಪ್ಪಿದ ಗುರುನಂದನ್ ಅವರಿಗೆ ಧನ್ಯವಾದಗಳು. ಛಾಯಾಗ್ರಾಹಕ ಶಿವಸೇನ, ಸಂಗೀತ ನಿರ್ದೇಶಕರು ಹಾಗೂ ಇಡೀ ಚಿತ್ರತಂಡದ ಸಹಕಾರದಿಂದಲೇ ನನ್ನ ಕಲ್ಪನೆ ಪರದೆ ಮೇಲೆ ಮೂಡಲು ಸಾಧ್ಯವಾಗಿದೆ ಎಂದರು. ಈ ಹಾಡನ್ನು ಆರಂಭದಲ್ಲಿ ಕಾಶ್ಮೀರದಲ್ಲಿ ಚಿತ್ರೀಕರಿಸುವ ಯೋಜನೆ ಹಾಕಲಾಗಿತ್ತು. ಆದರೆ ಕರ್ನಾಟಕದ ಕಾಶ್ಮೀರವಾದ ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಬಿಡುಗಡೆಯಾದ ಮಿ.ಜಾಕ್ ಹಾಡಿಗೂ ಒಳ್ಳೆಯ ಪ್ರತಿಕ್ರಿಯೆ ದೊರಕಿದೆ ಎಂದು ಸಂಭ್ರಮಿಸಿದ ಚಿತ್ರದ ನಾಯಕ ಗುರುನಂದನ್, ಈ ಹಾಡು ಕೂಡ ಎಲ್ಲರಿಗೂ ಇಷ್ಟವಾಗುವ ನಿರೀಕ್ಷೆ ಇದೆ ಎಂದರು. ಮೂಡಿಗೆರೆ ಸಮೀಪದ ಮೈದಾಡಿಗುಡ್ಡದಲ್ಲಿ ಚಿತ್ರೀಕರಣ ನಡೆಸುವಾಗ ಸಾಕಷ್ಟು ಹವಾಮಾನದ ಏರುಪೇರು ಎದುರಾಗಿತ್ತು. ಅವೆಲ್ಲವನ್ನು ಎದುರಿಸಿ ಚಿತ್ರೀಕರಿಸುವಲ್ಲಿ ಚಿತ್ರತಂಡದ ಶ್ರಮ ಅವರ್ಣನೀಯ ಎಂದರು.

ಹಾಡಿನ ಬಿಡುಗಡೆ ಹಾಗೂ ಸುದ್ದಿಗೋಷ್ಠಿಗೆ ತಡವಾಗಿ ಆಗಮಿಸಿದ ನಟಿ ತಪಸ್ವಿನಿ ಪೂಣಚ್ಚ, ಅದಕ್ಕೆ ಕ್ಷಮೆ ಯಾಚಿಸಿ ಕಾರಣವನ್ನು ಕೂಡ ವಿವರಿಸಿದರು. ‘ಪ್ರೇಮದ ಊರಲಿ’ ಯಶಸ್ಸಿನ ಸಂಭ್ರಮಾಚರಣೆ ನಡೆಸಿ ಹಾಸನದಿಂದ ಹೊರಟು ಬಂದ ಕಾರಣ, ಇಷ್ಟು ತಡವಾಗಿದ್ದಾಗಿ ಅವರು ತಿಳಿಸಿದರು. ಈ ಚಿತ್ರದಲ್ಲಿ ತಮ್ಮದು ನಂದಿನಿ ಎನ್ನುವ ಶಿಕ್ಷಕಿಯ ಪಾತ್ರ. ಸಂಪ್ರದಾಯಸ್ಥ ಕುಟುಂಬದಿಂದ ಬಂದ ಹುಡುಗಿಯಾಗಿ ಕಾಣಿಸಿಕೊಂಡಿರುವುದಾಗಿ ಹೇಳಿದರು.

ಸಮಾರಂಭದಲ್ಲಿ ನಟ ದರ್ಮಣ್ಣ, ನಟಿ ಸುಶ್ಮಿತಾ ಜಗ್ಗಪ್ಪ, ಛಾಯಾಗ್ರಾಹಕ ಶಿವಸೇನ, ನೃತ್ಯ ನಿರ್ದೇಶಕ ಆನಂದ್‌ ಮಠದ್ ಹಾಗೂ ಸಹ ನಿರ್ಮಾಪಕರು ಹಾಡಿನ ಕುರಿತು ಮಾತನಾಡಿದರು. ವಿಜಯ್ ರಾಜ್ ಸಂಕಲನ ನಿರ್ವಹಿಸಿರುವ ಮಿ.ಜಾಕ್ ಡಿಸೆಂಬರ್ 4ರಂದು ತೆರೆಕಾಣಲಿದೆ.

Recommended For You

Leave a Reply