ಕಣ್ಮುಚ್ಚಿ ನಕ್ಕರೆ ಉಳಿಯುವುದು ಅಮ್ಮನ ಅಕ್ಕರೆ!

ಚಿತ್ರ: ಲಕ್ಷ್ಮೀಪುತ್ರ
ನಿರ್ದೇಶನ: ವಿಜಯ್ ಸ್ವಾಮಿ
ನಿರ್ಮಾಣ: ಅನ್ನಪೂರ್ಣ ಅರ್ಜುನ್
ತಾರಾಗಣ: ಚಿಕ್ಕಣ್ಣ, ವಂದಿತಾ ಗೌಡ ಮತ್ತು ತಾರಾ ಅನುರಾಧ ಮೊದಲಾದವರು.

ಮಂಡ್ಯದ ತಾಯಿ ಮಗನ ಕಥೆ. ಸಾಮಾನ್ಯ ಮಧ್ಯಮ ವರ್ಗದ ಯುವಕ ಕೃಷ್ಣ. ಲಕ್ಷ್ಮೀ ಹೆಸರಿನ ಮೊಬೈಲ್‌ ಅಂಗಡಿ ಇಟ್ಟುಕೊಂಡಿರುತ್ತಾನೆ. ಶೀರ್ಷಿಕೆಯೇ ಹೇಳುವಂತೆ ಲಕ್ಷ್ಮೀ ಆತನ ತಾಯಿಯ ಹೆಸರು. ಅಂಗಡಿ, ಸ್ನೇಹಿತರು ಮತ್ತು ಅಮ್ಮ.. ಇದರಾಚೆ ಆತನಿಗೆ ಮತ್ತೊಂದು ಪ್ರಪಂಚವಿಲ್ಲ.

ಚಿಕ್ಕಣ್ಣನ ಕಾಮಿಡಿ ಟೈಮಿಂಗ್ಸ್ ಅನ್ನು ಬಳಸುವ ಪ್ರಯತ್ನ ಮಾಡಿಕೊಳ್ಳಲಾಗಿದೆ. ದ್ವಿತೀಯಾರ್ಧದಲ್ಲಿ ತಾಯಿಯ ಎದುರು ಭಾವುಕಗೊಳ್ಳುವ ದೃಶ್ಯಗಳಲ್ಲಿ ಚಿಕ್ಕಣ್ಣನ ನಟನೆ ಮೆಚ್ಚಲೇಬೇಕು. ತಾರಾ ಅನುರಾಧ ಅವರು ಮಂಡ್ಯದ ಮುದ್ದಿನ ತಾಯಿಯಾಗಿ ಜೀವಿಸಿದ್ದಾರೆ. ಚಿಕ್ಕಣ್ಣ ಮತ್ತು ತಾರಾ ಅವರ ತಾಯಿ ಮಗನ ಕೆಮಿಸ್ಟ್ರಿ ಚೆನ್ನಾಗಿಯೇ ಕೆಲಸಮಾಡಿದೆ.

ಚಿತ್ರದ ನಾಯಕಿ ವಂದಿತಾ ಗೌಡ ಅವರಿಗೆ ಇದು ಮೊದಲ ಚಿತ್ರ. ಆದರೆ ಅಂಥ ಯಾವ ಸೂಚನೆ ಕಾಣಿಸದ ರೀತಿಯಲ್ಲಿ ನಟಿಸಿದ್ದಾರೆ. ಗಿರೀಶ್ ಶಿವಣ್ಣ, ಶಿವರಾಜ್ ಕೆ.ಆ‌ರ್ ಪೇಟೆ, ಕುರಿ ಪ್ರತಾಪ್‌, ದರ್ಮಣ್ಣ ಕಡೂರು, ವಿಜಯ್ ಚೆಂಡೂರು ಮೊದಲಾದವರು ಹಾಸ್ಯದ ಪಾತ್ರಗಳನ್ನು ನಿಬಾಯಿಸಿದ್ದಾರೆ. ಉಳಿದಂತೆ ಮಿತ್ರ ಅವರ ಪಾತ್ರಕ್ಕೆ ಹೆಚ್ಚು ಅವಕಾಶ ಲಭಿಸಿದೆ ಎನ್ನಬಹುದು.

ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕೆ ಹೆಚ್ಚು ತೂಕ ನೀಡಿದೆ. ನಿರ್ದೇಶಕ ವಿಜಯ್ ಸ್ವಾಮಿಯವರಿಗೆ ಇದು ಮೊದಲ ಚಿತ್ರ. ಈ ಚಿತ್ರದ ರ್ಮಾಪಕ ಎ.ಪಿ. ಅರ್ಜುನ್‌ ಅವರೇ ಬರೆದಿರುವ ಈ ಕಥೆಯಲ್ಲಿರುವ ತಿರುವುಗಳು ಆಕರ್ಷಕವಾಗಿಯೇ ಇವೆ. ಆದರೆ ಇತರ ದೃಶ್ಯಗಳಲ್ಲಿ ಹೊಸತನ ಕಾಣುವುದಿಲ್ಲ. ಮಾತ್ರವಲ್ಲ, ದ್ವಯಾರ್ಥ ಬರುವ ಸಂಭಾಷಣೆಗಳನ್ನು ಬಳಸಿರುವುದು ನೆಗೆಟಿವ್‌ ಎಂದೇ ಹೇಳಬಹುದು. ಆದರೆ ಅದನ್ನು ಹಾಸ್ಯವಾಗಿ ಪರಿಗಣಿಸುವವರು, ಹಾಸ್ಯದೊಂದಿಗೆ ಕೂಡಿದ ಭಾವನಾತ್ಮಕ ಚಿತ್ರ ನೋಡಲು ಬಯಸುವರು ದಾರಾಳವಾಗಿ ನೋಡಬಹುದಾದ ಚಿತ್ರ ಇದು.

Recommended For You

Leave a Reply